»   » ಖುಷಿ ಖುಷಿಯಾಗಿ ಆಡಿಯೋ ವಿಮರ್ಶೆ: ಖುಷಿಯಿಂದ ಕೇಳಿ

ಖುಷಿ ಖುಷಿಯಾಗಿ ಆಡಿಯೋ ವಿಮರ್ಶೆ: ಖುಷಿಯಿಂದ ಕೇಳಿ

By: ಪ್ರಶಾಂತ್ ಇಗ್ನೇಷಿಯಸ್
Subscribe to Filmibeat Kannada

ವರ್ಣರಂಜಿತ ಪೋಸ್ಟರ್ ಗಳು ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ರವರ ವಿಭಿನ್ನವಾದ ಭಂಗಿಗಳಿಂದ ಗಮನ ಸೆಳೆಯುತ್ತಿರುವ ಯೋಗಿ ಪಿ ರಾಜ್ ರವರ 'ಖುಷಿ ಖುಷಿಯಾಗಿ' ಚಿತ್ರದ ಆಡಿಯೋ ಬಿಡುಗಡೆಯಾಗಿದೆ.

ಸಂಗೀತ, ನೃತ್ಯ ಪ್ರಧಾನವಾದ ಯುವಕರ ಚಿತ್ರವೇನೋ ಎಂಬ ಸುಳಿವನ್ನೂ ನೀಡಿದೆ. ಅನೂಪ್ ರುಬೆನ್ಸ್ ಸಂಗೀತ ನಿರ್ದೇಶನದಲ್ಲಿ ಸ್ವಲ್ಪ ವಿಭಿನ್ನವಾಗಿ ಮೂಡಿ ಬಂದಿರುವ ಹಾಡುಗಳು, ಚಿತ್ರ ಬಗ್ಗೆ ಪ್ರೇಕ್ಷಕರಲ್ಲಿ ಆಸಕ್ತಿ ಹುಟ್ಟಿಸುವಂತಿದೆ.

ಹಾಡುಗಳು ಪ್ರೇಕ್ಷಕನನ್ನು ಚಿತ್ರಮಂದಿರದ ಕಡೆಗೂ ತರವಲ್ಲಿ ಯಶಸ್ವಿಯಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ. ಚಿತ್ರದ ಹಾಡುಗಳಂತೂ ನಮ್ಮ ಮುಂದಿದೆ. ಹೇಗಿದೆ ಎಂಬ ಪ್ರಶ್ನೆಯತ್ತ ಒಂದು ಇಣುಕು ನೋಟ. (ಗಣೇಶ್ ಬಗ್ಗೆ ಶಿವರಾಜ್ ಹೇಳಿದ್ದೇನು)

ಅರೆರೆ ನಗುತ್ತಾಳೆ ನೋಡಿ

ಗಾಯಕರು : ಅನೂಪ್ ರುಬೆನ್ಸ್, ಅನುರಾಧ ಭಟ್
ಸಾಹಿತ್ಯ: ಕವಿರಾಜ್
ಕವಿರಾಜ್ ರವರ ಸಾಹಿತ್ಯದ ಗೀತೆಗೆ ಸ್ವತ: ಸಂಗೀತ ನಿರ್ದೇಶಕ ಅನೂಪ್ ರುಬೆನ್ಸ್ ದನಿ ನೀಡಿದ್ದಾರೆ. ಅನುರಾಧ ಭಟ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಿಭಿನ್ನವಾದ ಸಂಗೀತ ಸಂಯೋಜನೆ, ಗಾಯನ, ಕೋರಸ್ ಎಲ್ಲವೂ ಚೆನ್ನಾಗಿದ್ದರೂ ಸಾಹಿತ್ಯದಲ್ಲಿ ಗಡಿಬಿಡಿ ಎದ್ದು ಕಾಣುತ್ತದೆ. ಸಂಗೀತ ನಿರ್ದೇಶಕರು ಸಾಹಿತ್ಯವನ್ನು ಮತ್ತಷ್ಟು ಸಮರ್ಪಕವಾಗಿ ಬಳಸಿಕೊಳ್ಳಬಹುದಿತ್ತೇನೋ.

ಅತಿಯಾಯ್ತು ಆಕರ್ಷಣೆ

ಗಾಯಕರು: ಅಂಕಿತ್ ತಿವಾರಿ , ಶ್ರೇಯಾ ಘೋಷಾಲ್
ಸಾಹಿತ್ಯ: ಜಯಂತ್ ಕಾಯ್ಕಿಣಿ

ಜಯಂತ್ ಕಾಯ್ಕಿಣಿಯವರ ಸಾಹಿತ್ಯ ಎಂದಿನಂತೆ ಹಾಡಿಗೆ ಕಳೆ ತಂದಿದೆ. ಜಯಂತ್ ರವರ ಸಾಹಿತ್ಯಕ್ಕೆ ಶ್ರೇಯಾ ಹಳಬರಾಗಿ ಹೋಗಿರುವುದು ಮಾತ್ರವಲ್ಲದೆ, ಕನ್ನಡವನ್ನು ಸ್ಪಷ್ಟವಾಗಿ ಹಾಡುವುದರಿಂದ ಅವರ ಧ್ವನಿ ಕನ್ನಡ ಕೇಳುಗನಿಗೆ ಒಂದು ರೀತಿಯಲ್ಲಿ ಆಪ್ತವೇ. ಅದೇ ಮಾತನ್ನು ಇಲ್ಲಿ ಅಂಕಿತ್ ತಿವಾರಿಯವರ ಗಾಯನದ ಬಗ್ಗೆ ಹೇಳುವಂತಿಲ್ಲ. ಸಾಹಿತ್ಯಕ್ಕೆ ತಕ್ಕುದಾದ ಮಾಧುರ್ಯ ಸಂಗೀತ ಸಂಯೋಜನೆಯಲ್ಲಿದ್ದು, ಅದು ವಿಭಿನ್ನವಾಗಿದೆ.

ನೀನೆ ನೀನೆ ನೀನೆ

ಗಾಯಕರು : ಅದ್ನಾನ್ ಸಾಮಿ
ಸಾಹಿತ್ಯ: ಜಯಂತ್ ಕಾಯ್ಕಿಣಿ

ನಾವೆಲ್ಲರೂ ಅದ್ನಾನ್ ಸಾಮಿಯವರ ದನಿಗೆ ಮನಸೋತವರೇ. ಆದರೆ ಉತ್ತಮವಾದ ಸಂಗೀತ ಹಾಗೂ ಸಾಹಿತ್ಯವಿರುವ ಈ ಗೀತೆಗೆ ನಮ್ಮವರೇ ಆದ ಗಾಯಕರು ಹಾಡಿದ್ದರೆ ಹಾಡಿಗೆ, ಸಾಹಿತ್ಯಕ್ಕೆ ಉತ್ತಮ ನ್ಯಾಯ ಒದಗಿಸುತ್ತಿದ್ದರೇನೋ ಎಂದೆನಿಸುತ್ತದೆ. ಕನ್ನಡಕ್ಕಿಂತ ಹಿಂದಿ ಹಾಡುಗಳ ಶೈಲಿ ಇಲ್ಲಿ ಕಂಡರೆ ಅದಕ್ಕೆ ಅದ್ನಾನ್ ಸಾಮಿಯವರನ್ನು ದೂರಲಾಗದು. ಆದರೂ 'ನೀನೆ ನೀನೆ' ಎಂದು ಅವರು ಹಾಡಿರುವ ಶೈಲಿ ಸಕ್ಕತ್ತಾಗಿದೆ.

ನೀನ್ಯಾರೆ ನೀನ್ಯಾರೆ

ಗಾಯಕರು : ಸಂತೋಷ್, ಶರ್ಮಲಿ ಕಾಟ್ಲೆ
ಸಾಹಿತ್ಯ: ಕವಿರಾಜ್

ಮತ್ತೊಂದು ಉತ್ತಮ ಸಂಗೀತ ಸಂಯೋಜನೆಯೊಂದಿಗೆ ಈ ಹಾಡಿನಿಂದ ಅನುಪ್ ಭರವಸೆ ಹುಟ್ಟಿಸುತ್ತಾರೆ. ಸಂತೋಷ್, ಶರ್ಮಿಲಿಯವರ ಗಾಯನ, ಕವಿರಾಜ್ ರವರ ಸಾಹಿತ್ಯ ಎಲ್ಲವೂ ಅಚ್ಚುಕಟ್ಟಾಗಿದೆ. ಯುವಕರಿಗೆ ಹೆಚ್ಚು ಇಷ್ಟವಾಗಬಹುದು. ಪಾಪ್ ಸಂಗೀತ ಶೈಲಿ ಸಂಗೀತದಲ್ಲಿ ಮಾತ್ರವಲ್ಲದೆ ಕನ್ನಡ ಉಚ್ಛಾರದಲ್ಲೂ ತೂರಿಕೊಂಡಿದೆ. ಚಿತ್ರದಲ್ಲಿ ನಾಯಕ ಯಾವ ಊರಿನವನು? ಹೇಗೆ ಕನ್ನಡ ಮಾತನಾಡಬಹುದು ಎಂಬ ಕುತೂಹಲ ಹಾಡುಗಳನ್ನು ಕೇಳುತ್ತಿದ್ದರೆ ಮೂಡುತ್ತದೆ.

ರಿಂಬೋಲ ರಿಂಬೋಲ

ಗಾಯಕರು : ಸಂತೋಷ್, ದಿವ್ಯ
ಸಾಹಿತ್ಯ: ನಾಗೇಂದ್ರ ಪ್ರಸಾದ್

ಚಿತ್ರದ ಅತ್ಯಂತ ಲವಲವಿಕೆಯ ಗೀತೆ. ಇಲ್ಲಿಯೂ ರಾಗ ಹಾಗೂ ವಾದ್ಯ ಸಂಯೋಜನವೇ ಪ್ರಧಾನವಾಗಿರುವುದರಿಂದ ಸಾಹಿತ್ಯ ಹಿನ್ನಲೆಯಲ್ಲೇ ಉಳಿದುಕೊಳ್ಳುತ್ತದೆ. ಅದರೂ ಸೀಮಿತ ಅವಕಾಶದಲ್ಲೂ ನಾಗೇಂದ್ರ ಪ್ರಸಾದ್ ತಮ್ಮ ಕೈ ಚಳಕ ತೋರುತ್ತಾರೆ. ಸಂತೋಷ್ ಹಾಗೂ ದಿವ್ಯರವರ ಗಾಯನ ಸಂಗೀತ ಸಂಯೋಜನೆಗೆ ಪೂರಕವಾಗಿದೆ. ಸಂಗೀತದಲ್ಲೇ ಲವಲವಿಕೆ ಇರುವುದರಿಂದ ಗಾಯನದಲ್ಲೂ ಅದು ಬೆರೆತುಕೊಂಡಿದೆ. ಒಟ್ಟಿನಲ್ಲಿ ತಾಳ ಹಾಕುತ್ತ ಅನಂದಿಸಬಹುದಾದ ಗೀತೆ.

English summary
Audio review of Golden Star Ganesh starer Kushi Khushiyagi. Album has five songs, and music composed by Anup Rubens.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada