ಲಡ್ಡು ಬಂದು ಬಾಯಿಗ್ ಬಿತ್ತಾ: ಜಾಹೀರಾತುಗಳ ಹಾಡು, ಹಾಡಲ್ಲೇ ಜಾಹೀರಾತು
ಶರಣ್, ಆಶಿಕಾ ರಂಗನಾಥ್ ನಟಿಸಿರುವ 'ಅವತಾರ ಪುರುಷ' ಸಿನಿಮಾದ ಹಾಡೊಂದು ಬಿಡುಗಡೆ ಆಗಿದೆ. 'ಲಡ್ಡು ಬಂದು ಬಾಯಿಗ್ ಬಿತ್ತಾ' ಎಂಬ ಈ ಹಾಡು ತನ್ನ ಕ್ರಿಯೇಟಿವಿಟಿ, ವಿಭಿನ್ನ ವಿಷಯವಸ್ತುವಿನಿಂದ ಗಮನ ಸೆಳೆಯುತ್ತಿದೆ.
'ಲಡ್ಡು ಬಂದು ಬಾಯಿಗ್ ಬಿತ್ತಾ' ಹಾಡು ಜಾಹೀರಾತುಗಳನ್ನು ಸೇರಿಸಿ ಮಾಡಿದ ಹಾಡಾಗಿದೆ. ಈ ಹಿಂದೆ ಜನಪ್ರಿಯವಾಗಿದ್ದ ವಿವಿಧ ಜಾಹೀರಾತು ತುಣುಕುಗಳನ್ನು ಸೇರಿಸಿ ಹಾಡು ಮಾಡಲಾಗಿದೆ. ಎಲ್ಲ ಜಾಹೀರಾತಿನಲ್ಲಿಯೂ ಶರಣ್ ಹಾಗೂ ಆಶಿಕಾ ಅವರುಗಳೇ ಪ್ರಧಾನ ಪಾತ್ರಗಳಾಗಿ ನಟಿಸಿದ್ದಾರೆ.
1990-2000 ದಶಕದ ಜನಪ್ರಿಯ ಜಾಹೀರಾತುಗಳನ್ನು ನಿರ್ದೇಶಕ ಸಿಂಪಲ್ ಸುನಿ ಹಾಡಿಗೆ ಆಯ್ಕೆ ಮಾಡಿಕೊಂಡಿದ್ದಾರೆ. ಜನಪ್ರಿಯ ಫೆವಿಕೋಲ್ ಜಾಹೀರಾತು, ಮೆನ್ ವಿಲ್ ಬಿ ಮೆನ್ ಜಾಹೀರಾತು, ಸೆಂಟರ್ ಫ್ರೆಶ್, ಮಿಂಟ್ ಜಾಹೀರಾತು, ಡಿಯೋಡ್ರೆಂಟ್ ಜಾಹೀರಾತು ಹೀಗೆ ಹಲವು ಪ್ರಸಿದ್ಧ ಜಾಹಿರಾತುಗಳನ್ನು ಹಾಡಿನಲ್ಲಿ ರೀಕ್ರಿಯೇಟ್ ಮಾಡಲಾಗಿದೆ. ಸಾಹಿತ್ಯವೂ ಹಾಡಿಗೆ ಚೆನ್ನಾಗಿ ಜತೆಯಾಗಿದೆ.

ಈ ಹಿಂದೆ 'ಚುಟು ಚುಟು ಅಂತೈತಿ' ಹಾಡಿನಿಂದ ಹಿಟ್ ಆಗಿದ್ದ ಶರಣ್, ಆಶಿಕಾ ಜೋಡಿಯ ಈ ಹಾಡು ಸಹ ಅಷ್ಟೆ ವೈರಲ್ ಆಗುವುದು ಗ್ಯಾರೆಂಟಿ. ಹಾಡಿನಲ್ಲಿ ಇಬ್ಬರ ನಟನೆಯೂ ಚೆನ್ನಾಗಿದೆ.
'ಲಡ್ಡು ಬಂದು ಬಾಯಿಗ್ ಬಿತ್ತಾ' ಹಾಡಿಗೆ ನಿರ್ದೇಶಕ ಸಿಂಪಲ್ ಸುನಿ ಅವರೇ ಸಾಹಿತ್ಯ ಒದಗಿಸಿದ್ದಾರೆ. ಸಂಗೀತ ನೀಡಿರುವುದು ಅರ್ಜುನ್ ಜನ್ಯಾ, ಹಾಡಿಗೆ ಧ್ವನಿಯಾಗಿರುವುದು ನಿಹಾಲ್ ಟೌರೊ.

'ಅವತಾರ ಪುರುಷ' ಸಿನಿಮಾದ ಕೆಲವು ಟೀಸರ್‌ಗಳು ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸಿವೆ. ಸಿನಿಮಾವು ಡಿಸೆಂಬರ್ 10 ರಂದು ತೆರೆಗೆ ಬರಲಿದೆ. ಸಿನಿಮಾದಲ್ಲಿ ಶರಣ್, ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಸಿಂಪಲ್ ಸುನಿ, ನಿರ್ಮಾಣ ಮಾಡಿರುವುದು ಪುಷ್ಕರ್ ಮಲ್ಲಿಕಾರ್ಜುನಯ್ಯ.


Click it and Unblock the Notifications











