'ಹುಡುಗರು ತುಂಬಾ ಒಳ್ಳೆವ್ರು, ಟೈಂ ಬೇಕು ಒಂಚೂರು' ಎನ್ನುತ್ತಿದ್ದಾರೆ ನಟಿ ಚೈತ್ರಾ ಕೋಟೂರು
ಬಿಗ್ ಬಾಸ್ ಮೂಲಕ ಖ್ಯಾತಿಗಳಿಸಿದ್ದ ನಟಿ ಚೈತ್ರಾ ಕೋಟೂರ್ ಈಗ ಹುಡುಗರನ್ನು ಹಾಡಿ ಹೊಗಳುತ್ತಿದ್ದಾರೆ. 'ಹುಡುಗರು ತುಂಬಾ ಒಳ್ಳೆವ್ರು, ಟೈಂ ಬೇಕು ಒಂಚೂರು' ಎನ್ನುತ್ತಾ ಹಾಡಿ ಕುಣಿಯುತ್ತಿದ್ದಾರೆ. ಚೈತ್ರಾಗೆ ಏನಾಯಿತು ಅಂತ ಯೋಚಿಸಬೇಡಿ. ಚೈತ್ರಾ ಹೊಸ ಆಲ್ಬಂ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ಹೌದು, ಚೈತ್ರಾ ಕೋಟೂರು ಹೊಸ ಮ್ಯೂಸಿಕ್ ಆಲ್ಬಂ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. 'ಹುಡುಗರು ತುಂಬಾ ಒಳ್ಳೆವ್ರು, ಟೈಂ ಬೇಕು ಒಂಚೂರು...' ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡನ್ನು ಅವರೇ ನಿರ್ಮಾಣ ಮಾಡಿ, ಸಾಹಿತ್ಯ ರಚಿಸಿ, ನಿರ್ದೇಶನ ಮಾಡಿ, ಸಂಗೀತ ನೀಡಿ ಅವರೇ ಹಾಡಿದ್ದಾರೆ.
ಈ ಹಾಡನ್ನು ಆನಂದ್ ಆಡಿಯೋದಲ್ಲಿ ರಿಲೀಸ್ ಮಾಡಲಾಗಿದೆ. ಚೈತ್ರಾ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಡಿನಲ್ಲಿ ಹುಡುಗರನ್ನು ಗುಣಗಾನ ಮಾಡಿದ್ದು, ಯುವಕರ ಗಮನ ಸೆಳೆಯುತ್ತಿದೆ. ರ್ಯಾಪ್ ಶೈಲಿಯಲ್ಲಿರುವ ಈ ಹಾಡಿಗೆ ಚೈತ್ರಾ ಕೋಟೂರ್ ಅದ್ಭುತ ನೃತ್ಯ ಸಹ ಮಾಡಿದ್ದಾರೆ.

ಅಂದಹಾಗೆ ಚೈತ್ರಾ ಉತ್ತಮ ಬರಹಗಾರ್ತಿ ಕೂಡ ಹೌದು. ರಂಗಭೂಮಿ ಹಿನ್ನಲೆಯಿಂದ ಬಂದ ಚೈತ್ರಾ ಸೂಜಿದಾರ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದ ಚೈತ್ರಾಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಬಳಿಕ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಪ್ರಾರಂಭಿಸಿದ್ದರು. ಇದೀಗ ಚೈತ್ರಾ ನಿರ್ದೇಶಕಿಯಾಗುವ ಕನಸು ಕಾಣುತ್ತಿದ್ದಾರೆ.


Click it and Unblock the Notifications











