ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡಲಿದ್ದಾರೆ ಕ್ರೇಜಿಸ್ಟಾರ್ ಮತ್ತು ಚಾಲೆಂಜಿಂಗ್ ಸ್ಟಾರ್
ಕ್ರೇಜಿಸ್ಟಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕಾದಿದೆ. ಅದೇನಪ್ಪಾ ಅಂದ್ರೆ, ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ 'ಬೃಹಸ್ಪತಿ' ಚಿತ್ರದ ಆಡಿಯೋ ನಾಳೆ (ಡಿ.15) ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ.
ವಿ ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿರುವ 'ಬೃಹಸ್ಪತಿ' ಚಿತ್ರದಲ್ಲಿ ಮನೋರಂಜನ್ ರವಿಚಂದ್ರನ್ ಹಾಗೂ ಮಿಷ್ಟಿ ಚಕ್ರವರ್ತಿ ಅಭಿನಯಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ 'ಬೃಹಸ್ಪತಿ' ಚಿತ್ರದ ಹಾಡೊಂದನ್ನ ಹಾಡಿದ್ದು ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

ಕ್ರೇಜಿಸ್ಟಾರ್ ಅಭಿಮಾನಿಗಳಿಗಷ್ಟೇ ಅಲ್ಲದೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೂ ಇದೇ ತಿಂಗಳು (ಡಿಸೆಂಬರ್ 17) ಹಬ್ಬದ ಸಂಭ್ರಮವಿದೆ. ಚಂದನ್ ಕುಮಾರ್ ಹಾಗೂ ಐಶ್ವರ್ಯ ಸರ್ಜಾ ಅಭಿನಯಿಸಿರುವ 'ಪ್ರೇಮಬರಹ' ಚಿತ್ರದ ಹಾಡುಗಳು ಮಾರುಕಟ್ಟೆಗೆ ಬರಲಿವೆ.

'ಪ್ರೇಮಬರಹ' ಸಿನಿಮಾದ ಹಾಡೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಜ್ಜೆ ಹಾಕಿದ್ದಾರೆ. ಡಿ ಬಾಸ್ ಜೊತೆಯಾಗಿ ಧ್ರುವ ಸರ್ಜಾ, ಚಿರಂಜೀವಿ ಸರ್ಜಾ, ಅರ್ಜುನ್ ಸರ್ಜಾ ಕೂಡ ಡ್ಯಾನ್ಸ್ ಮಾಡಿದ್ದಾರೆ. ಜೆಸ್ಸಿಗಿಫ್ಟ್ ಸಂಗೀತ ನಿರ್ದೇಶನ ಮಾಡಿರುವ ಪ್ರೇಮಬರಹ ಚಿತ್ರದ ಹಾಡಿನ ಬಿಟ್ ವೈರಲ್ ಆಗಿದ್ದು ಸಂಪೂರ್ಣ ಆಲ್ಬಂಗಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

'ಬೃಹಸ್ಪತಿ' ಹಾಗೂ 'ಪ್ರೇಮಬರಹ' ಎರಡು ಸಿನಿಮಾದ ಟೀಸರ್ ಗಳು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. 'ಬೃಹಸ್ಪತಿ' ಸಿನಿಮಾವನ್ನ ನಂದಕೀಶೋರ್ ನಿರ್ದೇಶನ ಮಾಡಿದ್ರೆ, ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. 'ಪ್ರೇಮಬರಹ' ಚಿತ್ರವನ್ನ ಡೈರೆಕ್ಟ್ ಮಾಡುವುದರ ಜೊತೆಯಲ್ಲಿ ಅರ್ಜುನ್ ಸರ್ಜಾ ನಿರ್ಮಾಣದ ಜವಾಬ್ದಾರಿಯನ್ನೂ ಹೊಂದಿದ್ದಾರೆ.


Click it and Unblock the Notifications











