ವಿವಾದಕ್ಕೆ ಕಿಡಿ ಹಚ್ಚಿದ 'ಕೋಲುಮಂಡೆ': ಚಂದನ್ ಶೆಟ್ಟಿ ವಿರುದ್ಧ ಸಿಡಿದೆದ್ದ ಮಹದೇಶ್ವರನ ಭಕ್ತರು
ಗೌರಿ-ಗಣೇಶ ಹಬ್ಬದ ವಿಶೇಷವಾಗಿ ಗಾಯಕ ಚಂದನ್ ಶೆಟ್ಟಿ ಕೋಲುಮಂಡೆ ಜಂಗಮದೇವ ಎಂಬ ಹೊಸ ಹಾಡನ್ನು ಬಿಡುಗಡೆಗೊಳಿಸಿದ್ದರು. ಯ್ಯೂಟ್ಯೂಬ್‌ನಲ್ಲಿ ಈ ಹಾಡಿಗೆ ಭರ್ಜರಿ ರೆಸ್‌ಪಾನ್ಸ್ ಸಿಕ್ಕಿದ್ದು, ಯುವಕರು ಫುಲ್ ಫಿದಾ ಆಗಿದ್ದಾರೆ.
ಸಂಗೀತ ಪ್ರಿಯರ ಮನಗೆದ್ದ ಚಂದನ್ ಶೆಟ್ಟಿಯ ಕೋಲುಮಂಡೆ ಜಂಗಮದೇವ ಹಾಡು ಈಗ ವಿವಾದವನ್ನು ಸೃಷ್ಟಿಸಿದೆ. ಕೋಲುಮಂಡೆ ಹಾಡನ್ನು ಅಶ್ಲೀಲವಾಗಿ ಚಿತ್ರೀಕರಿಸಿ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಚಾಮರಾಜನಗರ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಏನಿದು ಚಂದನ್ ಶೆಟ್ಟಿ ವಿವಾದ? ಮುಂದೆ ಓದಿ...

ಶರಣೆ ಸಂಕಮ್ಮ ಬಗ್ಗೆ ಆಶ್ಲೀಲವಾಗಿ ತೋರಿಸಲಾಗಿದೆ
'ಕೋಲುಮಂಡೆ ಜಂಗಮದೇವ ಎಂಬ ಜಾನಪದ ಹಾಡನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡಿರುವ ಚಂದನ್ ಶೆಟ್ಟಿ ಇತಿಹಾಸ ತಿರುಚಿ ಹಾಡು ಚಿತ್ರಿಕರಿಸಿದ್ದಾರೆ. ಈ ಹಾಡಿನಲ್ಲಿ ಶರಣೆ ಸಂಕಮ್ಮ ಅವರನ್ನು ಅಶ್ಲೀಲವಾಗಿ ಪ್ರದರ್ಶಿಸಲಾಗಿದೆ. ಆ ಮೂಲಕ ಶರಣೆ ಸಂಕಮ್ಮರನ್ನು ಅವಮಾನಿಸಲಾಗಿದೆ' ಎಂದು ಟೀಕೆ ವ್ಯಕ್ತವಾಗಿದೆ.

ಹಾಡನ್ನು ಡಿಲೀಟ್ ಮಾಡಬೇಕು
ಚಂದನ್ ಶೆಟ್ಟಿ ಹಾಡಿರುವ ಕೋಲುಮಂಡೆ ಹಾಡನ್ನು ಯೂಟ್ಯೂಬ್ನಿಂದ ತೆಗೆಯಬೇಕು. ಇಲ್ಲವಾದಲ್ಲಿ ಚಂದನ್ ಮನೆ ಮುಂದೆ ಧರಣಿ ಮಾಡಬೇಕಾಗುತ್ತದೆ. ರಾಜ್ಯದಲ್ಲಿ ಅವರ ಕಾರ್ಯಕ್ರಮ ಬಹಿಷ್ಕರಿಸಬೇಕಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದು ಸಂಸ್ಕೃತಿ ಮತ್ತು ಭಾವನೆಗೆ ಧಕ್ಕೆ ಆಗಿದೆ
'ಕೋಲುಮಂಡೆ ಜಂಗಮದೇವ' ಜಾನಪದ ಶೈಲಿಯ ಹಾಡನ್ನು ಮತ್ತು ಮಾದಪ್ಪನ ಇತಿಹಾಸವನ್ನು ಕೇವಲವಾಗಿ ಹಾಗೂ ಅಶ್ಲೀಲವಾಗಿ ಜನರಿಗೆ ತೋರಿಸುವ ಮೂಲಕ ಹಿಂದು ಸಂಸ್ಕೃತಿ ಮತ್ತು ಭಾವನೆಗೆ ಧಕ್ಕೆ ಮಾಡಿ, ಮಲೈ ಮಹದೇಶ್ವರ ಇತಿಹಾಸವನ್ನು ತಿರುಚಿರುವುದು ಸರಿಯಲ್ಲ, ಇಂತಹ ವಿಕೃತಿ ಮನಸ್ಸಿನ ವ್ಯಕ್ತಿ ಆಟಗಳಿಗೆ ಆನಂದ್ ಆಡಿಯೋ ಕಂಪನಿಯು ಉತ್ತೇಜನ ಕೊಟ್ಟಿರುವುದು ಸರಿಯಲ್ಲ, ಈ ರೀತಿಯ ವಿಕೃತಿ ಚಾಳಿ ಮುಂದುವರಿದರೆ ಇವರ ಮನೆಯ ಮುಂದೆ ಧರಣಿ ಮತ್ತು ರಾಜ್ಯದಲ್ಲಿ ಇವರ ಕಾರ್ಯಕ್ರಮ ಗಳನ್ನು ಸಾರ್ವಜನಿಕರು ಧಿಕ್ಕರಿಸಲಾಗುತ್ತದೆ' ಎಂದು ಎಚ್ಚರಿಕೆ ನೀಡಿದ್ದಾರೆ.

ಕ್ಷಮೆ ಕೇಳಿದ ಚಂದನ್ ಶೆಟ್ಟಿ
ಕೋಲುಮಂಡೆ ಹಾಡಿಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆ ಗಾಯಕ ಚಂದನ್ ಶೆಟ್ಟಿ ಸಾರ್ವಜನಿಕರಿಗೆ ಕ್ಷಮೆ ಕೇಳಿದ್ದಾರೆ. ಜಾನಪದ ಕಲಾವಿದರು ಯಾರೂ ತಪ್ಪು ತಿಳಿಯಬೇಡಿ ಎಂದು ಮನವಿ ಮಾಡಿರುವ ಚಂದನ್ ಶೆಟ್ಟಿ ಟಿವಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಕ್ಷಮೆಯಾಚಿಸಿದ್ದಾರೆ.

ಮೈಸೂರು ದಸರಾದಲ್ಲೂ ಎಡವಟ್ಟು!
ಇದಕ್ಕೂ ಮುಂಚೆ ಸಹ ಮೈಸೂರು ಭಾಗದ ಜನರ ವಿರೋಧಕ್ಕೆ ಚಂದನ್ ಶೆಟ್ಟಿ ಗುರಿಯಾಗಿದ್ದರು. ಮೈಸೂರು ದಸರಾ ವೇದಿಕೆಯಲ್ಲಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ (ಚಂದನ್ ಶೆಟ್ಟಿ ಪತ್ನಿ) ಅವರಿಗೆ ರಿಂಗ್ ತೊಡಿಸಿ ಪ್ರಪೋಸ್ ಮಾಡಿದ್ದರು. ತನ್ನ ಹುಡುಗಿಗೆ ಪ್ರಪೋಸ್ ಮಾಡಲು ಮೈಸೂರು ದಸರಾ ವೇದಿಕೆ ಬಳಸಿಕೊಂಡಿದ್ದಕ್ಕೆ ಆಗಲೂ ಜನರು ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.


Click it and Unblock the Notifications











