twitter
    For Quick Alerts
    ALLOW NOTIFICATIONS  
    For Daily Alerts

    ಕ್ಷಮೆ ಕೇಳಿದರೂ ಹಂಸಲೇಖ ವಿರುದ್ಧ ದೂರು ದಾಖಲು ಏಕೆ?

    By ಫಿಲ್ಮೀಬೀಟ್ ಡೆಸ್ಕ್‌
    |

    ಸಂಗೀತ ನಿರ್ದೇಶಕ ಹಂಸಲೇಖ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಆಡಿದ ಮಾತುಗಳು ಚರ್ಚೆಗೆ ಕಾರಣವಾಗಿದೆ. ಹಂಸಲೇಖ ಆಡಿರುವ ಮಾತುಗಳಿಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

    ಕಾರ್ಯಕ್ರಮದಲ್ಲಿ ಅಸ್ಪೃಶ್ಯತೆ ಬಗ್ಗೆ ಮಾತನಾಡಿದ್ದ ಹಂಸಲೇಖ, ''ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋದರು ಎಂಬುದು ಬಹಳ ಸುದ್ದಿಯಾಗಿತ್ತು. ದಲಿತರ ಮನೆಗೆ ಹೋಗಿ ಪೇಜಾವರ ಸ್ವಾಮಿಗಳು ಅಲ್ಲಿ ಕುಳಿತಿದ್ದರಷ್ಟೆ ಅವರು ಕೋಳಿ ಕೊಟ್ಟರೆ ತಿನ್ನಲಿಕ್ಕಾಗುತ್ತದೇನು? ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ಅವರು ತಿನ್ನುತ್ತಿದ್ದರೇನು? ಲಿವರ್ ಫ್ರೈ ಕೊಟ್ಟಿದ್ದರೆ ತಿನ್ನುತ್ತಿದ್ದರೇನು?'' ಎಂದಿದ್ದರು. ಹಂಸಲೇಖರ ಈ ಮಾತಿಗೆ ಭಾರಿ ವಿರೋಧ ವ್ಯಕ್ತವಾಗಿತ್ತು.

    ಕೃಷ್ಣೈಕ್ಯವಾಗಿರುವ ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಹೀಗೆ ಮಾತನಾಡಬಾರದಿತ್ತು ಎಂದು ಹಲವರು ಕಟುವಾಗಿಯೇ ಹಂಸಲೇಖ ಅವರನ್ನು ಟೀಕಿಸಿದ್ದರು. ಹಂಸಲೇಖ ಮಾತನಾಡಿದ್ದ ವಿಡಿಯೋ ವೈರಲ್ ಆಗಿ ಟ್ರೋಲ್ ದಾಳಿ ಆರಂಭವಾಗುತ್ತಿದ್ದಂತೆ ಹಂಸಲೇಖ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿ ಕ್ಷಮಾಪಣೆ ಕೋರಿದ್ದರು. ಹಾಗಿದ್ದರೂ ಸಹ ಹಂಸಲೇಖ ವಿರುದ್ಧ ದೂರು ದಾಖಲು ಮಾಡಲಾಗಿದೆ.

    ಪೇಜಾವರರ ಬೃಂದಾವನದ ಮುಂದೆ ಕ್ಷಮೆ ಕೋರಬೇಕು: ಒತ್ತಾಯ

    ಪೇಜಾವರರ ಬೃಂದಾವನದ ಮುಂದೆ ಕ್ಷಮೆ ಕೋರಬೇಕು: ಒತ್ತಾಯ

    ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ವಿಪ್ರ ಯುವ ವೇದಿಕೆ ಸದಸ್ಯರು ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರನ್ನು ಭೇಟಿಯಾಗಿ ಹಂಸಲೇಖ ವಿರುದ್ಧ ದೂರು ಸಲ್ಲಿಸಿದರು. ಬಳಿಕ ಮಾತನಾಡಿದ ಸಂಘದ ಮುಖಂಡರು, ''ಹಂಸಲೇಖ ಕೇವಲ ಕ್ಷಮೆ ಕೇಳಿದರೆ ಸಾಲದು, ವಿದ್ಯಾಪೀಠ ವೃತ್ತದ ಬಳಿ ಇರುವ ಪೇಜಾವರ ಶ್ರೀಗಳ ಬೃಂದಾವನದ ಬಳಿ ಬಂದು ಮುಂದೆ ನಿಂತು ಕೈ ಮುಗಿದು ಕ್ಷಮೆ ಕೇಳಬೇಕು. ನಾಲ್ಕು ಗೋಡೆಗಳ ನಡುವೆ ಕೇಳಲಾಗಿರುವ ಕ್ಷಮೆಯನ್ನು ನಾವು ಒಪ್ಪುವುದಿಲ್ಲ'' ಎಂದರು.

    ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು

    ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು

    ನಗರದ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿಯೂ ಕೃಷ್ಣ ರಾಜು ಹೆಸರಿನ ವ್ಯಕ್ತಿಯೊಬ್ಬರು ಹಂಸಲೇಖ ವಿರುದ್ಧ ದೂರು ದಾಖಲಿಸಿದ್ದಾರೆ. ವಿಶ್ವೇಶ್ವರ ತೀರ್ಥರು ಸಾಮಾಜಿಕ ಸಾಮರಸ್ಯಕ್ಕಾಗಿ ಕೈಗೊಂಡ ಕಾರ್ಯದ ಬಗ್ಗೆ ಲೇವಡಿ ಮಾಡಿ ನನ್ನ ನಂಬಿಕೆಗೆ ಘಾಸಿ ಮಾಡಿದ್ದಾರೆ. ಇದು ಮಾತ್ರವೇ ಅಲ್ಲದೆ ನನ್ನ ಆರಾಧ್ಯ ದೈವವಾದ ಬಿಳಿಗಿರಿ ರಂಗಯ್ಯ ದೇವರ ಬಗ್ಗೆ ಪ್ರಚಲಿತದಲ್ಲಿರುವ ಜನಪದ ಕತೆಯನ್ನು ಸಹ ತುಚ್ಛವಾಗಿ ಪರಿಗಣಿಸಿರುತ್ತಾರೆ. ಇದರಿಂದ ನನ್ನ ಭಾವನೆಗಳಿಗೆ ಘಾಸಿಯಾಗಿದೆ ಹಾಗೂ ಆಸ್ತಿಕ ಸಮಾಜದ ನಂಬಿಕೆಗಳಿಗೆ ಧಕ್ಕೆಯಾಗಿದೆ. ಹೀಗಾಗಿ ಹಂಸಲೇಖ ವಿರುದ್ಧ ಕ್ರಮ ಕೈಗೊಳ್ಳಬೇಕು'' ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಬಿಳಿಗಿರಿ ರಂಗಯ್ಯನ ಬಗ್ಗೆ ಹಂಸಲೇಖ ಮಾತು

    ಬಿಳಿಗಿರಿ ರಂಗಯ್ಯನ ಬಗ್ಗೆ ಹಂಸಲೇಖ ಮಾತು

    ಪೇಜಾವರರ ಬಗ್ಗೆ ಮಾತನಾಡಿದ್ದ ಕಾರ್ಯಕ್ರಮದಲ್ಲಿಯೇ ಬಿಳಿಗಿರಿ ರಂಗಯ್ಯನ ಬಗ್ಗೆ ಮಾತನಾಡಿದ್ದ ಹಂಸಲೇಖ, ''ಬಿಳಿಗಿರಿ ರಂಗಯ್ಯ ಸೋಲಿಗರ ಮನೆಗೆ ಹೋಗಿ ಆ ಹೆಣ್ಣಿನೊಂದಿಗೆ ಸಂಸಾರ ಮಾಡುವುದರಲ್ಲಿ ಯಾವ ದೊಡ್ಡ ವಿಷಯವಿದೆ. ರಂಗಯ್ಯ, ಆ ಸೋಲಿಗರ ಹೆಣ್ಣು ಮಗಳನ್ನು ಕರೆದುಕೊಂಡು ಹೋಗಿ ತನ್ನ ದೇವಸ್ಥಾನದಲ್ಲಿ ಇಟ್ಟು ಗೌರವ ಮಾಡಿದ್ದರೆ ಅದು ರಂಗಯ್ಯನ ತಾಕತ್ತು. ಬೆಳಕು ಇಲ್ಲದಾಗ ಸೋಲಿಗರ ಮನೆಗೆ ಬಂದು ಆ ಹೆಣ್ಣು ಮಗಳೊಂದಿಗೆ ಸಂಸಾರ ನಡೆಸಿ ಬೆಳಕು ಹರಿಯುವುದರೊಳಗೆ ಹೋಗಿ ಕಲ್ಲಾಗುವುದು ಅದೇನು ದೊಡ್ಡ ವಿಷಯ. ಅದು ನಾಟಕ, ಅದು ಬೂಟಾಟಿಕೆ'' ಎಂದಿದ್ದರು, ಮುಂದುವರೆದು, ''ಬಲಿತರು ದಲಿತರ ಮನೆಗೆ ಹೋಗುವುದು ಅದೇನು ದೊಡ್ಡ ವಿಷಯ? ಬಲಿತರು ದಲಿತರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು, ಊಟ ಹಾಕಬೇಕು, ಕುಡಿಯಲು ಲೋಟ ಕೊಡಬೇಕು ಆ ಲೋಟವನ್ನು ನಾವು ತೊಳೆಯುತ್ತೀವಿ ಎಂದು ಅವರು ಹೇಳಬೇಕು'' ಎಂದಿದ್ದರು ಹಂಸಲೇಖ.

    ಹಂಸಲೇಖ ಪರವಹಿಸಿ, ಮನುವಾದಿಗಳ ವಿರುದ್ಧ ಪ್ರತಿಭಟನೆ

    ಹಂಸಲೇಖ ಪರವಹಿಸಿ, ಮನುವಾದಿಗಳ ವಿರುದ್ಧ ಪ್ರತಿಭಟನೆ

    ಹಂಸಲೇಖ ಪರವಾಗಿಯೂ ಹಲವರು ದನಿ ಎತ್ತಿದ್ದು, ಇಂದು ರಾಮನಗರದಲ್ಲಿ ದಲಿತಪರ - ಪ್ರಗತಿಪರ ಚಿಂತಕರ ಒಕ್ಕೂಟದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಹಂಸಲೇಖ ಪರವಾಗಿ ನಾವಿದ್ದೇವೆ ಎಂದು ಘೋಷಿಸಲಾಯ್ತು. ಜೊತೆಗೆ ಮನುವಾದಿಗಳಿಗೆ ಧಿಕ್ಕಾರ ಸಹ ಕೂಗಲಾಯಿತು. ಸಾಮಾಜಿಕ ಜಾಲತಾಣದಲ್ಲಿಯೂ ಹಲವರು ಹಂಸಲೇಖ ಪರವಾಗಿ ಪೋಸ್ಟ್ ಹಾಕಿದ್ದು, ಹಂಸಲೇಖ ಸತ್ಯವನ್ನೇ ಹೇಳಿದ್ದಾರೆ ಎಂದಿದ್ದಾರೆ.

    English summary
    Complaint lodged against Hamsalekha by Akhila Bharatha Brahmana Mahasabha Vipra Yuva Vedike demanding apology.
    Thursday, November 18, 2021, 9:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X