ಪಿಸ್ತೂಲು.. ಪೊಗರು.. ಕನ್ನಡಭಿಮಾನ.. ಖಾಕಿ: ಅಪ್ಪು ಅಭಿಮಾನಿಗಳ ಮನಗೆದ್ದ 'ಸಳ ಸಳ ಹೊಯ್ಸಳ'
ಡಾಲಿ ಧನಂಜಯ ನಟನೆಯ ಟೈಟಲ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ವಿಜಯ್ .ಎನ್ ನಿರ್ದೇಶನದ ಪೊಲೀಸ್ ಡ್ರಾಮಾ ಸಿನಿಮಾ ಇದು. ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿ ಭರವಸೆ ಮೂಡಿಸಿತ್ತು. ಸದ್ಯ ಚಿತ್ರದಲ್ಲಿ ನಾಯಕ ಗುರುದೇವ್ ಹೊಯ್ಸಳ ಪಾತ್ರ ಪರಿಚಯ ಮಾಡುವ ಹಾಡು ರಿಲೀಸ್ ಆಗಿದೆ. ಡಾಲಿ ಅಭಿಮಾನಿಗಳ ಜೊತೆ ಅಪ್ಪು ಅಭಿಮಾನಿಗಳು ಹಾಡು ಬಹಳ ಇಷ್ಟವಾಗಿದೆ.
ಅಜನೀಶ್ ಲೋಕನಾಥ್ ಟ್ಯೂನ್‌ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಲಿರಿಕ್ಸ್ ಬರೆದಿದ್ದಾರೆ. ಸಾಂಗ್‌ಗೆ ರ್ಯಾಪ್ ಟಚ್ ಕೂಡ ಇದ್ದು ಯೋಗಿ ಬಿ ರಾಜ್ ಅದನ್ನು ಬರೆದು ಹಾಡಿದ್ದಾರೆ. ಇನ್ನು ನಕಾಶ್ ಅಜೀಜ್ ವಾಯ್ಸ್‌ನಲ್ಲಿ ಸಾಂಗ್ ಕಿಕ್ ಕೊಡ್ತಿದೆ. ಚಿತ್ರದಲ್ಲಿ ಧನಂಜಯ ರುತ್‌ಲೆಸ್ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿದ್ದಾರೆ. ಯಾರನ್ನೂ ಕೇರ್ ಮಾಡದ ಆಸಾಮಿ. ಪುಂಡ ಪೋಕರಿಗಳಿಗೆ ಸುನಾಮಿ. ಇದನ್ನು ಹೈಲೆಟ್ ಮಾಡಿ ಈ ಹಾಡನ್ನು ಕಟ್ಟಿಕೊಡಲಾಗಿದೆ.

ಸಳ ಸಳ ಹೊಯ್ಸಳ.. ಆನೆಯ ಬಲ.. ಸಿಂಗಲ್ ಪಡೆಯಿದು.. ಪಿಸ್ತೂಲೇ ಇವನ ದೋಸ್ತಿ.. ಪೊಗರು ಒಂದು ಟನ್ ಜಾಸ್ತಿ...ಸಳ ಸಳ ಸಳ... ಹೊಯ್ಸಳ ಅಂತ ಮುಂದುವರೆಯುವ ಹಾಡು ನಿಧಾನವಾಗಿ ಕಿಕ್ ಕೊಡುತ್ತಾ ಹೋಗುತ್ತೆ. ಡಾಲಿ ಗನ್ ಹಿಡ್ದು ಹಾಡಿನುದ್ದಕ್ಕೂ ಅಬ್ಬರಿಸಿದ್ದಾರೆ. ಇನ್ನು ಥಿಯೇಟರ್‌ನಲ್ಲಿ 'ರಾಜಕುಮಾರ' ಸಿನಿಮಾ ಪ್ರದರ್ಶನದ ವೇಳೆ ಪುಂಡನೊಬ್ಬನನ್ನು ಗುರುದೇವ್ ಹೊಯ್ಸಳ ಒದ್ದು ಎಳೆದುಕೊಂಡು ಬರುವಾಗ ಹಿಂದೆ ತೆರೆಮೇಲೆ ಪುನೀತ್ ರಾಜ್‌ಕುಮಾರ್ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ.
ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ 'ಹೊಯ್ಸಳ' ಚಿತ್ರದ ಬಹುತೇಕ ಕಥೆ ನಡೆಯುತ್ತದೆ. ಗಡಿನಾಡಿನ ಮಾಫಿಯಾ, ಗಲಾಟೆ, ದೊಂಬಿಯನ್ನು ಹೊಯ್ಸಳ ಹತ್ತಿಕ್ಕುತ್ತಾನೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕನ್ನಡ ರಾಜ್ಯೋತ್ಸವದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹೊಯ್ಸಳ ಧನಂಜಯ ಹಾರ ಹಾಕುವ ಸನ್ನಿವೇಶ ಕೂಡ ಅಭಿಮಾನಿಗಳ ಮನಗೆದ್ದಿದೆ. ಹಾಡಿನ ಉದ್ದಕ್ಕೂ ಕನ್ನಡಭಿಮಾನ ಅಂಶಗಳನ್ನು ಕಾಣಬಹುದು. ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ.

'ಹೊಯ್ಸಳ' ಚಿತ್ರದಲ್ಲಿ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದರೆ ಅಚ್ಯುತ್ ಕುಮಾರ್, ಪ್ರತಾಪ್ ನಾರಾಯಣ್, ನವೀಶ್ ಶಂಕರ್, ರಾಘು ಶಿವಮೊಗ್ಗ ಪ್ರಧಾನ ಪಾತ್ರ ವರ್ಗದಲ್ಲಿದ್ದಾರೆ. ಕಾರ್ತಿಕ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಮಾರ್ಚ್ 30ಕ್ಕೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನಗಳು ನಡೀಯಿದೆ. ಅಸಿಸ್ಟೆಂಟ್ ಕಮೀಷನರ್ ಗುರುದೇವ್ 'ಹೊಯ್ಸಳ' ಆಗಿ ಧನಂಜಯ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಮಾಜದ ಒಂದು ಮುಖ್ಯವಾದ ಸಮಸ್ಯೆಯನ್ನು ಚಿತ್ರದಲ್ಲಿ ಚರ್ಚಿಸಲಾಗಿದೆ. ಪಾತ್ರಕ್ಕಾಗಿ ತೂಕ ಇಳಿಸಿಕೊಂಡು ಧನಂಜಯ ಖಾಕಿ ತೊಟ್ಟಿದ್ದಾರೆ. ಮಾಸ್ತಿ ಸಂಭಾಷಣೆ 'ಹೊಯ್ಸಳ' ಚಿತ್ರಕ್ಕಿದೆ. ಇದು ಧನು 25ನೇ ಸಿನಿಮಾ ಎನ್ನುವುದು ವಿಶೇಷ. ಇನ್ನು ಜಬರ್ದಸ್ತ್ ಆಕ್ಷನ್ ಸೀಕ್ವೆನ್ಸ್ ಸಿನಿಮಾದಲ್ಲಿದೆ. ಸದ್ಯ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ನಿಧಾನವಾಗಿ ಪ್ರಮೋಷನ್ ಕೂಡ ಶುರುವಾಗುತ್ತಿದೆ. ಮಾರ್ಚ್ 30ಕ್ಕೆ ಬಹಳ ದೊಡ್ಡಮಟ್ಟದಲ್ಲಿ 'ಹೊಯ್ಸಳ' ಎಂಟ್ರಿ ಆಗಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಸಿಸಿ ಪಂದ್ಯದ ವೇಳೆ ಈ ಹಾಡು ಪ್ಲೇ ಆಗಿದೆ. ಕ್ರೀಡಾಂಗಣದಲ್ಲಿದ್ದ ಗಣ್ಯರು ಹಾಗೂ ಪ್ರೇಕ್ಷಕರು ಹಾಡಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಸಾಮಾಜಿಕ ತಾಣದಲ್ಲೂ ಹಾಡಿಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.


Click it and Unblock the Notifications











