ಕ್ರೇಜಿ ನ್ಯೂಸ್ ಕೊಟ್ಟ ದರ್ಶನ್: ಫ್ಯಾನ್ಸ್ ಮತ್ತೊಂದು 'ಕಾಟೇರ' ಹಬ್ಬಕ್ಕೆ ಸಿದ್ಧರಾಗಿ
ಸ್ಯಾಂಡಲ್‌ವುಡ್‌ನಲ್ಲಿ 'ಕಾಟೇರ' ಹವಾ ಜೋರಾಗಿದೆ. ಒಂದಿಲ್ಲೊಂದು ಕಾರಣಕ್ಕೆ ಸಿನಿಮಾ ಸುದ್ದಿಯಲ್ಲಿದೆ. ಡಿಸೆಂಬರ್ 29ಕ್ಕೆ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಸದ್ಯ ಆಕ್ಷನ್ ಪ್ಯಾಕ್ಡ್ ಟ್ರೈಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ.
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ತರುಣ್ ಸುಧೀರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಸಲಾರ್' ಹಾಗೂ 'ಡಂಕಿ' ಸಿನಿಮಾಗಳ ಬೆನ್ನಲ್ಲೇ ಥಿಯೇಟರ್‌ಗಳಲ್ಲಿ 'ಕಾಟೇರ'ನ ಆರ್ಭಟ ಶುರುವಾಗಲಿದೆ. ಈಗಾಗಲೇ ಥಿಯೇಟರ್‌ಗಳ ಮುಂದೆ ಕಟೌಟ್‌ಗಳು ಎದ್ದು ನಿಲ್ತಿದೆ. ಚಿತ್ರತಂಡ ಮಾತ್ರ ತಮ್ಮ ಸಿನಿಮಾ ಬಗ್ಗೆ ಭಾರೀ ಕಾನ್ಫಿಡೆಂಟ್ ಆಗಿದೆ.

'ಕ್ರಾಂತಿ' ಬಳಿಕ 'ಕಾಟೇರ' ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಮುಂದಿನ ವರ್ಷ ಬರುತ್ತದೆ ಎಂದುಕೊಂಡಿದ್ದ ಚಿತ್ರವನ್ನು ಈ ವರ್ಷವೇ ರಿಲೀಸ್ ಮಾಡುವುದಾಗಿ ಹೇಳಿ ಚಿತ್ರತಂಡ ಶಾಕ್ ಕೊಟ್ಟಿತ್ತು. ಈಗಾಗಲೇ ಸಿನಿಮಾ ಪ್ರಚಾರ ಕೂಡ ಆರಂಭಿಸಿದೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆದಿತ್ತು. ಸಿಎಂ ಸಿದ್ದರಾಮಯ್ಯ ಟ್ರೈಲರ್ ಅನಾವರಣ ಮಾಡಿದ್ದರು.
ಇದೀಗ ಚಿತ್ರದ ಹಾಡೊಂದನ್ನು ಮಂಡ್ಯದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಡಿಸೆಂಬರ್ 23ರಂದು ರೈತರ ದಿನದ ವಿಶೇಷವಾಗಿ ಸಕ್ಕರೆ ನಗರಿಗೆ ಚಿತ್ರತಂಡ ಭೇಟಿ ಕೊಡುತ್ತಿದೆ. ಅಭಿಮಾನಿಗಳ ಸಮ್ಮುಖದಲ್ಲಿ ರೈತರ ಕುರಿತಾದ ಹಾಡು ಬಿಡುಗಡೆ ಮಾಡುತ್ತಿದ್ದಾರೆ. ಇದನ್ನು ಸೋಲ್ ಆಫ್ ಕಾಟೇರ ಎಂದೇ ಚಿತ್ರತಂಡ ಹೇಳುತ್ತಿದೆ.
ಮಂಡ್ಯ ಜಿಲ್ಲೆಯ ಬಾಯ್ಸ್ ಕಾಲೇಜ್ ಗ್ರೌಂಡ್‌ನಲ್ಲಿ ಡಿಸೆಂಬರ್ 23ರ ಸಂಜೆ 5 ಗಂಟೆಗೆ ಕಾರ್ಯಕ್ರಮ ಶುರುವಾಗಲಿದೆ. ಈ ಹಿಂದೆ 'ಕ್ರಾಂತಿ' ಚಿತ್ರದ ಹಾಡುಗಳನ್ನು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅನಾವರಣ ಮಾಡಲಾಗಿತ್ತು. ಇದೀಗ 'ಕಾಟೇರ' ಚಿತ್ರದ ರೈತರ ಹಾಡು ಬಿಡುಗಡೆಗೆ ಮಂಡ್ಯಗೆ ತಂಡ ಹೊರಟಿದೆ. ಇದು ಮಂಡ್ಯ ಸುತ್ತಮುತ್ತಲ ದರ್ಶನ್ ಅಭಿಮಾನಿಗಳಿಗೆ ಖುಷಿ ತಂದಿದೆ.
ಈಗಾಗಲೇ ಚಿತ್ರದ ಎರಡು ಡ್ಯುಯೆಟ್ ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಅದರಲ್ಲೂ 'ಪಸಂದಾಗವನೇ' ಹಾಡು ಅಭಿಮಾನಿಗಳ ಮನಗೆದ್ದಿದೆ. ಮಾಸ್ ಸಾಂಗ್ ರಿಲೀಸ್ ಮಾಡಿ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದರು. ಇದೀಗ ಆ ಸಮಯ ಬಂದಿದೆ. 'ಕಾಟೇರ' ಚಿತ್ರದಲ್ಲಿ ರೈತರ ವಿಚಾರವಾಗಿ ಚರ್ಚಿಸಲಾಗುತ್ತಿದೆ. ಹಾಗಾಗಿ ರೈತರ ಕುರಿತು ಮಾಡಿರುವ ಈ ಹಾಡು ಬಹಳ ಕುತೂಹಲ ಮೂಡಿಸಿದೆ.
'ಕಾಟೇರ' ಚಿತ್ರದಲ್ಲಿ 70ರ ದಶಕದ ಕಥೆ ಹೇಳಲಾಗಿದೆ. ಇಂದಿರಾಗಾಂಧಿ ಆಡಳಿತಾವಧಿಯಲ್ಲಿ ಜಾರಿಗೆ ತಂದ 'ಉಳುವವನೆ ಭೂಮಿಯ ಒಡೆಯ' ಕಾಯ್ದೆಯ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಜಡೇಶ್ ಹಂಪಿ ಹಾಗೂ ತರುಣ್ ಸುಧೀರ್ ಚಿತ್ರಕ್ಕೆ ಕಥೆ, ಚಿತ್ರಕಥೆ ಸಿದ್ಧಪಡಿಸಿದ್ದಾರೆ.
ವಿ. ಹರಿಕೃಷ್ಣ 'ಕಾಟೇರ' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಮಾಸ್ತಿ ಸಂಭಾಷಣೆ, ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ. ಘಟಾನುಘಟಿ ಕಲಾವಿದರು, ತಂತ್ರಜ್ಞರ ತಂಡ ಕಟ್ಟಿಕೊಂಡು ತರುಣ್ ಸಿನಿಮಾ ಮಾಡಿದ್ದಾರೆ. 'ರಾಬರ್ಟ್' ಚಿತ್ರಕ್ಕೆ ಕೆಲಸ ಮಾಡಿದ ಹಲವರು ಈ ಚಿತ್ರದ ಭಾಗವಾಗಿದ್ದಾರೆ.
ಚಿತ್ರದಲ್ಲಿ ದರ್ಶನ್ ಕುಲುಮೆಯಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿ ನಿಂತಿದ್ದಾರೆ. ಭೀಮನಳ್ಳಿ ಎನ್ನುವ ಊರಿನಲ್ಲಿ ಚಿತ್ರದ ಕಥೆ ನಡೆಯುತ್ತದೆ. ಹಳ್ಳಿಯಲ್ಲಿ ರೈತರ ವಿರುದ್ಧ ಉಳ್ಳವರ ಆಟಾಟೋಪ, ಅದನ್ನು ಮೆಟ್ಟಿ ನಿಲ್ಲುವ ನಾಯಕನ ಕಥೆ ಇಲ್ಲಿದೆ. ನಟ ದರ್ಶನ್ ವಿಭಿನ್ನ ಶೇಡ್‌ಗಳಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಹೇಳಿಮಾಡಿಸಿದ ಸಿನಿಮಾ ಇದು ಎನ್ನುವುದು ಟ್ರೈಲರ್ ನೋಡಿದರೆ ಅರ್ಥವಾಗುತ್ತದೆ.


Click it and Unblock the Notifications











