ವಿಷ್ಣುವರ್ಧನ್ ನಟಿಸಿದ ಸಿನಿಮಾದಿಂದ 'ಕಾಟೇರ' ಹಾಡು ಯತಾವತ್ತ್ ಕಾಪಿ? ವೀಡಿಯೋ ವೈರಲ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಅಭಿಮಾನಿಗಳು ಓಟಿಟಿಯಲ್ಲಿ ಇನ್ನು ಸಿನಿಮಾ ನೋಡುತ್ತಲೇ ಇದ್ದಾರೆ. ಚಿತ್ರದ ಸನ್ನಿವೇಶಗಳು, ಹಾಡುಗಳು ಅಭಿಮಾನಿಗಳ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ.
'ಕಾಟೇರ' ಚಿತ್ರಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ದರ್ಶನ್-ಹರಿ ಕಾಂಬಿನೇಷನ್‌ನಲ್ಲಿ ಬಂದ ಎಲ್ಲಾ ಸಿನಿಮಾ ಆಲ್ಬಮ್‌ಗಳು ಸೂಪರ್ ಹಿಟ್ ಆಗಿದೆ. ಆರಂಭದಲ್ಲಿ 'ಕಾಟೇರ' ಚಿತ್ರದ ಹಾಡುಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಮೊದಲೆರಡು ಹಾಡುಗಳಿಗೆ ಮಿಶ್ರಪ್ರತಿಕ್ರಿಯೆ ಸಿಕ್ಕರೂ ಥೀಮ್ ಸಾಂಗ್ ಹಾಗೂ ಪುಣ್ಯಾತ್ಮ ಹಾಡಿಗೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಕ್ಲೈಮ್ಯಾಕ್ಸ್‌ನಲ್ಲಿ ಬರುವ 'ಮನಸೆಗೆ ಬಂತು' ಹಾಡು ಕೂಡ ಸಿನಿಮಾ ರಿಲೀಸ್ ಬಳಿಕ ಹಿಟ್ ಆಗಿತ್ತು.

ಸಾಮಾನ್ಯವಾಗಿ ಸಿನಿಮಾ ಬಿಡುಗಡೆಗೂ ಮುನ್ನ ಎಲ್ಲಾ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ 'ಕಾಟೇರ' ಸಿನಿಮಾ ರಿಲೀಸ್ ಬಳಿಕ 2 ಹಾಡುಗಳು ರಿವೀಲ್ ಆಗಿತ್ತು. ಬೇಕಂತಲೇ ಈ ಹಾಡುಗಳನ್ನು ಸರ್‌ಪ್ರೈಸ್ ಆಗಿ ಇಡಲಾಗಿತ್ತು. ಎರಡು ವಾರದ ಹಿಂದೆಯಷ್ಟೇ 'ಮನಸೆಗೆ ಬಂತು' ಲಿರಿಕಲ್ ಸಾಂಗ್ ಹೊರ ಬಂದಿತ್ತು. ಇದೀಗ ವೀಡಿಯೋ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ.
'ಮನಸೆಗೆ ಬಂತು' ಹಾಡನ್ನು ಥಿಯೇಟರ್‌ನಲ್ಲಿ ನೋಡಿದಾಗಲೇ ಕೆಲವರಿಗೆ ವಿಷ್ಣುವರ್ಧನ್ ನಟನೆಯ 'ವೀರಪ್ಪನಾಯಕ' ಚಿತ್ರದ 'ಜೀವ ಜ್ಯೋತಿಯೇ' ಹಾಡು ನೆನಪಾಗಿತ್ತು. 'ಜೀವ ಜ್ಯೋತಿಯೇ' ಹಾಡಿನಿಂದಲೇ ಪ್ರೇರಣೆಗೊಂಡು ತರುಣ್ ಸುಧೀರ್ 'ಕಾಟೇರ' ಚಿತ್ರದ ಈ ಹಾಡನ್ನು ಕಟ್ಟಿಕೊಟ್ಟಿದ್ದಾರೆ. ಎರಡೂ ಸಿನಿಮಾಗಳಲ್ಲಿ ಈ ಹಾಡುಗಳ ಸನ್ನಿವೇಶ ಒಂದೇ. ಜೀವಕ್ಕೆ ಜೀವವಾಗಿ ಪ್ರೀತಿಸಿದ ಮಡದಿಯನ್ನು ಕಳೆದುಕೊಂಡ ನಾಯಕನ ನೋವನ್ನು ಹಾಡಿನಲ್ಲಿ ತೋರಿಸಲಾಗಿದೆ.
ನೋವನ್ನು ಒತ್ತಿ ಹಿಡಿದು ಮಡದಿಯ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನಡೆಸುವುದನ್ನು ಈ ಹಾಡುಗಳಲ್ಲಿ ಹೇಳಲಾಗಿದೆ. 'ವೀರಪ್ಪ ನಾಯಕ' ಚಿತ್ರದಲ್ಲಿ ವಿಷ್ಣುವರ್ಧನ್ ಪತ್ನಿ ಪಾತ್ರದಲ್ಲಿ ಶ್ರುತಿ ನಟಿಸಿದ್ದರು. 'ಕಾಟೇರ' ಚಿತ್ರದಲ್ಲಿ ದರ್ಶನ್ ಜೊತೆ ಆರಾಧನಾ ನಟಿಸಿದ್ದಾರೆ. ಅಂದಹಾಗೆ ಕಾಟೇರನ ಸಹೋದರಿ ಪಾತ್ರದಲ್ಲಿ ಶ್ರುತಿ ನಟಿಸಿರುವುದು ವಿಶೇಷ.
ಇನ್ನು 'ವೀರಪ್ಪ ನಾಯಕ' ಸಿನಿಮಾ ನೋಡಿ ತರುಣ್ ಸುಧೀರ್ 'ಕಾಟೇರ' ಚಿತ್ರದಲ್ಲಿ ಕಾಪಿ ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 'ಮನಸೆಗೆ ಬಂತು' ಬಿಡುಗಡೆ ಬಳಿಕ 'ಜೀವ ಜ್ಯೋತಿಯೇ' ಹಾಡಿನ ಸನ್ನಿವೇಶಗಳಿಗೆ ಸಿಂಕ್ ಮಾಡಿ ವೀಡಿಯೋ ಎಡಿಟ್ ಮಾಡಿ ವೈರಲ್ ಮಾಡಲಾಗುತ್ತಿದೆ. ಬಹುತೇಕರು ಎರಡು ಹಾಡುಗಳನ್ನು ನೋಡಿ ಖುಷಿಪಟ್ಟಿದ್ದಾರೆ. ದಾದಾ- ದರ್ಶನ್ ಅಭಿನಯವನ್ನು ಹೋಲಿಸಿ ಮೆಚ್ಚಿಕೊಳ್ಳುತ್ತಿದ್ದಾರೆ.
ಮಡಗಿ ಶವವಾಗಿ ಮಲಗಿರುವುದನ್ನು ಕಂಡಾಗ ಹೃದಯ ಛಿದ್ರವಾಗುವುದು, ತಲೆಗೆ ನೀರು ಹಾಡುವುದು, ಅರಿಸಿನ ಹಚ್ಚಿ, ಹೂವು ಮುಡಿಸುವುದು, ಬಳಿಕ ಪಾರ್ಥೀವ ಶರೀರವನ್ನು ಶವ ಸಂಸ್ಕಾರದ ಜಾಗಕ್ಕೆ ಊರ ಬೀದಿಗಳಲ್ಲಿ ತಾನೇ ಹೊತ್ತು ತರುವುದು, ಚಿತೆಗೆ ಬೆಂಕಿ ಇಡುವ(ಕಾಟೇರ) ಮಣ್ಣುಮುಚ್ಚುವ(ವೀರಪ್ಪ ನಾಯಕ) ಮುನ್ನು ಮಡದಿ ಮುಖ ನೋಡಬೇಕೆಂದು ಹಾತೊರೆಯುವ ಫ್ರೇಮ್‌ಗಳಲ್ಲಿ ಸಾಕಷ್ಟು ಸಾಮ್ಯತೆ ಇರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ತರುಣ್ ಸುಧೀರ್ 'ವೀರಪ್ಪ ನಾಯಕ' ಚಿತ್ರದ ಹಾಡನ್ನು ನೋಡಿ ಬಹಳ ಇಷ್ಟಪಟ್ಟು 'ಕಾಟೇರ' ಚಿತ್ರದಲ್ಲಿ ರೀ-ಕ್ರಿಯೇಟ್ ಮಾಡಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ಇನ್ನು 'ವೀರಪ್ಪ ನಾಯಕ' ಚಿತ್ರದಲ್ಲಿ ಶ್ರುತಿ ತಂದೆಯ ಪಾತ್ರದಲ್ಲಿ ತರುಣ್ ಸುಧೀರ್ ತಂದೆ ಸುಧೀರ್ ನಟಿಸಿದ್ದರು. 'ಜೀವ ಜ್ಯೋತಿಯೇ' ಹಾಡಿನುದ್ದಕ್ಕೂ ಸುಧೀರ್ ಪಾತ್ರ ಕಂಡಂತೆ 'ಮನಸೇಗೆ ಬಂತು' ಹಾಡಿನಲ್ಲಿ ಕುಮಾರ್ ಗೋವಿಂದ್ ಪಾತ್ರವನ್ನು ನೋಡಬಹುದು. 'ಕಾಟೇರ' ಚಿತ್ರದಲ್ಲಿ ಕಾಟೇರನ ಭಾವ ಮಾದೇವಣ್ಣ ಆಗಿ ಕಾಣಿಸಿಕೊಂಡಿದ್ದಾರೆ.
ಮಡದಿಯನ್ನು ಅಗಲಿದ ಪತಿ ನೋವು, ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ಇದೇ ರೀತಿ ಇರುತ್ತದೆ. ಅದನ್ನು ಹೀಗೆ ತೋರಿಸಬೇಕು. ಇಂತಹ ಹಲವು ಹಾಡುಗಳು ಬೇರೆ ಸಿನಿಮಾಗಳಲ್ಲಿ ಕೂಡ ಬಂದಿದೆ. ಹಾಗಾಗಿ ಇದು ಕಾಪಿ ಅಲ್ಲ, ತರುಣ್ ಸುಧೀರ್ ಉದ್ದೇಶ ಪೂರ್ವಕವಾಗಿಯೇ ಹಾಡನ್ನು ಈ ರೀತಿ ಚಿತ್ರೀಕರಿಸಿರುವುದು ಗೊತ್ತಾಗುತ್ತಿದೆ. ಒಟ್ನಲ್ಲಿ 'ಕಾಟೇರ' ಹಾಡು ಕೂಡ ಹಿಟ್ ಆಗಿದೆ. ಆ ಸನ್ನಿವೇಶದಲ್ಲಿ ದರ್ಶನ್ ನಟನೆಯನ್ನು ನೋಡಿ ಕೆಲವರ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದೆ. ಕೆಲವರು ಪದೇ ಪದೆ ಈ ಹಾಡನ್ನು ನೋಡುತ್ತಿದ್ದಾರೆ.


Click it and Unblock the Notifications










