Exclusive: 'ಡೆವಿಲ್' ದಾಖಲೆ; ಸರೆಗಮ ಎಷ್ಟು ಕೋಟಿ ರೂ.ಗೆ ಆಡಿಯೋ ರೈಟ್ಸ್ ಖರೀದಿಸಿದೆ ಗೊತ್ತಾ?
ಅಭಿಮಾನಿಗಳು ತಮ್ಮ ನೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. ಜೊತೆಗೆ ಬೆಳ್ಳಿಹಬ್ಬದ ಸಂಭ್ರಮ ಕೂಡ ಮನೆ ಮಾಡಿದೆ. ಈಗಾಗಲೇ ಉಡುಗೊರೆ ರೂಪದಲ್ಲಿ ಸಾಕಷ್ಟು ದವಸ ಧಾನ್ಯ ಆರ್. ಆರ್ ನಗರದ ತೂಗುದೀಪ ನಿವಾಸ ಸೇರಿದೆ. ಅದನ್ನು ಅಗತ್ಯ ಇರುವವರಿಗೆ ತಲುಪಿಸುವ ಕೆಲಸವೂ ನಡೀತಿದೆ.
'ಕಾಟೇರ' ಗ್ರ್ಯಾಂಡ್ ಸಕ್ಸಸ್ ಹಿನ್ನೆಲೆಯಲ್ಲಿ ಈ ವರ್ಷ ದರ್ಶನ್ ಹುಟ್ಟುಹಬ್ಬ ಮತ್ತಷ್ಟು ಕಳೆ ಕಟ್ಟಲಿದೆ. ಇನ್ನು ಈ ಸಂಭ್ರಮ ಡಬಲ್ ಮಾಡಲು 'ಡೆವಿಲ್' ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗ್ತಿದೆ. ಗುರುವಾರ ಮಧ್ಯರಾತ್ರಿ 12 ಗಂಟೆಗೆ ಸಾರೆಗಮ ಯೂಟ್ಯೂಬ್ ಚಾನಲ್‌ನಲ್ಲಿ ಟೀಸರ್ ಬರಲಿದೆ. ಮಿಲನಾ ಪ್ರಕಾಶ್ ನಿರ್ದೇಶನದ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

ದಕ್ಷಿಣ ಭಾರತದ ದೊಡ್ಡ ಆಡಿಯೋ ಸಂಸ್ಥೆ ಸಾರೆಗಮ ಚಿತ್ರದ ಆಡಿಯೋ ರೈಟ್ಸ್ ಕೊಂಡುಕೊಂಡಿರುವುದು ವಿಶೇಷ. ಭಾರೀ ಮೊತ್ತಕ್ಕೆ ಡೀಲ್ ಕುದುರಿದೆ. ಸಣ್ಣ ಟೀಸರ್ ಚಿತ್ರೀಕರಣವಾಗಿರುವುದು ಬಿಟ್ಟರೆ ಅಧಿಕೃತವಾಗಿ 'ಡೆವಿಲ್' ಚಿತ್ರೀಕರಣ ಇನ್ನು ಶುರುವಾಗಿಲ್ಲ. ಆದರೆ ಅದಕ್ಕೂ ಮುನ್ನ 'ಡೆವಿಲ್' ದಾಖಲೆಗಳ ಪರ್ವ ಆರಂಭವಾಗಿದೆ.
'ಡೆವಿಲ್' ಚಿತ್ರಕ್ಕೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಈ ಕಾಂಬಿನೇಷನ್ ಭಾರೀ ಕುತೂಹಲ ಮೂಡಿಸಿರುವುದು ಸುಳ್ಳಲ್ಲ. ಚಿತ್ರದಲ್ಲಿ 4 ರಿಂದ 5 ಹಾಡುಗಳನ್ನು ಪ್ಲ್ಯಾನ್ ಮಾಡಲಾಗುತ್ತಿದೆ. ಮಾಸ್ ಜೊತೆ ಮೆಲೋಡಿ ಸಾಂಗ್ಸ್ ಕೂಡ ಇರಲಿದೆ. ಈ ಹಿಂದೆ ದರ್ಶನ್ ಹಾಗೂ ಪ್ರಕಾಶ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'ತಾರಕ್' ಸಿನಿಮಾ ಆಲ್ಬಮ್ ಕೂಡ ಹಿಟ್ ಆಗಿತ್ತು. ಹಾಗಾಗಿ 'ಡೆವಿಲ್' ಸಾಂಗ್ಸ್ ಬಗ್ಗೆ ನಿರೀಕ್ಷೆಯಿದೆ.
ಸಾರೆಗಮ ಆಡಿಯೋ ಸಂಸ್ಥೆ ಇತ್ತೀಚೆಗೆ ಕನ್ನಡ ಸಿನಿಮಾಗಳ ಆಡಿಯೋ ರೈಟ್ಸ್ ಕೊಂಡುಕೊಳ್ತಿದೆ. ಮೊನ್ನೆ ಮೊನ್ನೆ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಆಡಿಯೋ ರೈಟ್ಸ್ ಸ್ವಂತ ಮಾಡಿಕೊಂಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. 5 ಭಾಷೆಗಳ ರೈಟ್ಸ್ ಸೇರಿ 9 ಕೋಟಿ ರೂ.ಗೆ ಒಪ್ಪಂದವಾಗಿತ್ತು. ಆದರೆ 'ಡೆವಿಲ್' ದಿ ಹೀರೊ ಸಿನಿಮಾ ಕನ್ನಡದಲ್ಲಿ ಮಾತ್ರ ತೆರೆಗೆ ಬರಲಿದೆ. ಬಲ್ಲ ಮೂಲಗಳ ಪ್ರಕಾರ 'ಡೆವಿಲ್' ಕನ್ನಡ ಆಡಿಯೋ ರೈಟ್ಸ್ 5.50 ಕೋಟಿ ರೂ.ಗೆ ಬಿಕರಿಯಾಗಿದೆ. ಇದು ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ಆಗಿದೆ.

'ಡೆವಿಲ್' ದಿ ಹೀರೊ ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಎಂದು ನಿರ್ದೇಶಕ ಹೇಳಿದ್ದಾರೆ. ದುಷ್ಯಂತ್ ಜೊತೆ ಸೇರಿ ನಿರ್ದೇಶಕ ಪ್ರಕಾಶ್ ವೀರ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಇನ್ನು 'ಕಾಟೇರ' ಚಿತ್ರ ಸೆರೆ ಹಿಡಿದ ಸುಧಾಕರ್ ರಾಜ್ ಛಾಯಾಗ್ರಹಣ ಈ ಚಿತ್ರಕ್ಕೂ ಇರಲಿದೆ. ನಾಯಕಿ ಹಾಗೂ ಇನ್ನುಳಿದ ಕಲಾವಿದರ ಆಯ್ಕೆ ನಡೀತಿದೆ.
ಜಬರ್ದಸ್ತ್ ಟೀಸರ್ ಮೂಲಕ 'ಡೆವಿಲ್' ದರ್ಬಾರ್ ಶುರು ಮಾಡುವ ಪ್ರಯತ್ನ ನಡೀತಿದೆ. ಸೂಪರ್ ಹಿಟ್ 'ತಾರಕ್' ಕಾಂಬಿನೇಷನ್‌ನಲ್ಲಿ ಈ ಬಾರಿ ಎಂಥಹ ಸಿನಿಮಾ ಬರುತ್ತಿದೆ ಎಂದು ಸಿನಿರಸಿಕರು ಕಾಯುತ್ತಿದ್ದಾರೆ. ವರ್ಷಾಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ.
ಇನ್ನು ದರ್ಶನ್ ಜೋಗಿ ಪ್ರೇಮ್ ನಿರ್ದೇಶನದಲ್ಲೂ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಲಿದೆ. ದರ್ಶನ್ ಹುಟ್ಟುಹಬ್ಬಕ್ಕೆ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ದರ್ಶನ್ ಐದಾರು ಸಿನಿಮಾಗಳನ್ನು ಲೈನಪ್ ಮಾಡಿಕೊಂಡಿದ್ದಾರೆ.


Click it and Unblock the Notifications











