31 ದಿನವೂ ಬಾಕ್ಸಾಫೀಸ್‌ನಲ್ಲಿ 'ಕಾಟೇರ'ನ ಖದರ್, ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ 'ಪುಣ್ಯಾತ್ಮ'ನ ದರ್ಬಾರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ದರ್ಬಾರ್ ಥಿಯೇಟರ್‌ಗಳಲ್ಲಿ ಮುಂದುವರೆದಿದೆ. 50ನೇ ದಿನದತ್ತ ಸಿನಿಮಾ ಮುನ್ನುಗ್ಗುತ್ತಿದೆ. ವೀಕೆಂಡ್‌ಗಳಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಅಭಿಮಾನಿಗಳು ಇಂದಿಗೂ ಸಿನಿಮಾ ನೋಡಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಸಿನಿಮಾ ಈಗಾಗಲೇ 200 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ.
ತರುಣ್ ಸುಧೀರ್ ನಿರ್ದೇಶನದ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಕನ್ನಡದಲ್ಲೇ ದೇಶವ ವಿದೇಶಗಳಲ್ಲಿ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ ಶೀಘ್ರದಲ್ಲೇ ಚಿತ್ರವನ್ನು ತೆಲುಗು, ತಮಿಳಿನಲ್ಲಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಸೆನ್ಸಾರ್ ಕೆಲಸಗಳು ಶುರುವಾಗಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡು ವಿತರಕರು, ಪ್ರದರ್ಶಕರ ಸಂತಸಕ್ಕೆ ಕಾರಣವಾಗಿದೆ.

ಬಹಳ ವರ್ಷಗಳ ಬಳಿಕ ಥಿಯೇಟರ್‌ಗಳಲ್ಲಿ ಬ್ಲಾಕ್‌ನಲ್ಲಿ ಟಿಕೆಟ್ ಮಾರಾಟವಾಗಿದೆ. ಥಿಯೇಟರ್ ಮಾಲೀಕರೇ ದರ್ಶನ್ ಸಿನಿಮಾಗಳು ಬಂದರೆ ಹೌಸ್‌ಫುಲ್ ಆಗುತ್ತದೆ. ಅವರು ವರ್ಷಕ್ಕೆ 2 ಸಿನಿಮಾ ಮಾಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ಅಷ್ಟರಮಟ್ಟಿಗೆ 'ಕಾಟೇರ'ನ ಖದರ್ ನಡೀತಿದೆ. 'ಕಾಟೇರ' ಚಿತ್ರಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ದರ್ಶನ್ ಹಾಗೂ ಹರಿಕೃಷ್ಣ ಮ್ಯೂಸಿಕ್ ಆಲ್ಬಮ್‌ಗಳೆಲ್ಲಾ ಸೂಪರ್ ಹಿಟ್ ಆಗಿವೆ. ಆದರೆ 'ಕಾಟೇರ' ಹಾಡುಗಳು ನಿರೀಕ್ಷೆ ತಲುಪಲಿಲ್ಲ. ಸಿನಿಮಾ ಬಿಡುಗಡೆಗೂ ಮುನ್ನ ಚಿತ್ರದ 3 ಹಾಡುಗಳು ರಿಲೀಸ್ ಆಗಿ ಸದ್ದು ಮಾಡಿತ್ತು. ಆದರೆ ಒಂದು ಹಾಡನ್ನು ಮಾತ್ರ ಚಿತ್ರತಂಡ ಸಿನಿಮಾ ಬಿಡುಗಡೆಗೂ ಮುನ್ನ ರಿಲೀಸ್ ಮಾಡಿರಲಿಲ್ಲ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಆ ಹಾಡು ಸಿನಿರಸಿಕರ ಗಮನ ಸೆಳೆದಿತ್ತು. 'ಪುಣ್ಯಾತ್ಮ' ಎಂದು ಶುರುವಾಗುವ ಮಾಂಟೇಜ್ ಸಾಂಗ್ ಸದ್ದು ಮಾಡಿತ್ತು.
'ಕಾಟೇರ' ಸಿನಿಮಾ 25 ದಿನಗಳನ್ನು ಪೂರೈಸಿದ ಬಳಿಕ ಯೂಟ್ಯೂಬ್‌ನಲ್ಲಿ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಕಳೆದ ಎರಡು ದಿನಗಳಿಂದ ಸಾಂಗ್ ಟ್ರೆಂಡಿಂಗ್‌ನಲ್ಲಿದೆ. ನಾಗಾರ್ಜುನ ಶರ್ಮಾ ಸಾಹಿತ್ಯದ ಹಾಡನ್ನು ವಿಜಯಪ್ರಕಾಶ್ ಹಾಕಿದ್ದಾರೆ. ಪೆರೋಲ್ ಮೇಲೆ ಭೀಮನಳ್ಳಿ ಜಾತ್ರೆಗೆ ಬರುವ 'ಕಾಟೇರ' ಕ್ಲೈಮ್ಯಾಕ್ಸ್‌ನಲ್ಲಿ ಮೇಲು-ಕೀಳು ಎನ್ನುವ ಜಾತಿ ವ್ಯವಸ್ಥೆ, ಮರ್ಯಾದೆ ಹತ್ಯೆಯಂತಹ ಕೆಟ್ಟ ಆಚರಣೆಗೆ ಬಗ್ಗೆ ಊರಿನ ಜನರಿಗೆ ಬುದ್ದಿ ಹೇಳುತ್ತಾನೆ. "ಎಲ್ಲಾ ಕುಲಕ್ಕೂ ಶ್ರೇಷ್ಠ ಮಾನವಕುಲ" ಎನ್ನುತ್ತಾನೆ. ಆ ಸಮಯದಲ್ಲಿ 'ಪುಣ್ಯಾತ್ಮ' ಹಾಡು ಬರುತ್ತದೆ.
ಅಭಿಮಾನಿಗಳು ಪದೇ ಪದೆ ಹಾಡು ಕೇಳುತ್ತಿದ್ದಾರೆ. ಇಡೀ ಸಿನಿಮಾ ಒಂದು ತೂಕವಾದರೆ ಈ ಹಾಡು ಮತ್ತೊಂದು ತೂಕ ಎಂದು ಮೆಚ್ಚಿ ಕೊಂಡಾಡುತ್ತಿದ್ದಾರೆ. ಸದ್ಯ ಯೂಟ್ಯೂಬ್‌ನಲ್ಲಿ ಸಾಂಗ್ ಟ್ರೆಂಡಿಂಗ್‌ನಲ್ಲಿದೆ. 'ಕಾಟೇರ' ಆಗಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

ಇನ್ನು 'ಕಾಟೇರ' ಡಿಜಿಟಲ್ ಸ್ಟ್ರೀಮಿಂಗ್ ಬಗ್ಗೆಯೂ ಚರ್ಚೆ ಶುರುವಾಗಿದೆ. ಸಾಮಾನ್ಯವಾಗಿ 45 ದಿನಗಳ ಬಳಿ ಸಿನಿಮಾ ಓಟಿಟಿ ರಿಲೀಸ್‌ಗೆ ಒಪ್ಪಂದ ಆಗಿರುತ್ತದೆ. ಕೆಲವೊಮ್ಮೆ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಾಗ ಸ್ಟ್ರೀಮಿಂಗ್ ಮುಂದೂಡಲಾಗುತ್ತದೆ. 'ಕಾಟೇರ' ವಿಚಾರದಲ್ಲೂ ಹೀಗೆ ಆಗುತ್ತಾ? ಎನ್ನುವ ಲೆಕ್ಕಾಚಾರ ಶುರುವಾಗಿದೆ. ಈ ಹಿಂದೆ ದರ್ಶನ್ ಸಿನಿಮಾಗಳು ತಿಂಗಳಿಗೂ ಮೊದಲೇ ಓಟಿಟಿಗೆ ಬಂದ ಉದಾಹರಣೆ ಇದೆ.
ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬ. ಅದೇ ಸಂಭ್ರಮದಲ್ಲಿ 'ಕಾಟೇರ' ಓಟಿಟಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ. ಸಿನಿಮಾ ಪರಭಾಷೆಗೆ ಡಬ್ ಆಗಿ ರಿಲೀಸ್ ಆಗಬೇಕಿದೆ. ಹಾಗಾಗಿ ಕನ್ನಡದಲ್ಲಿ ಓಟಿಟಿ ಸ್ಟ್ರೀಮಿಂಗ್ ಮುಂದೂಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ. ಸದ್ಯ ದರ್ಶನ್ 'ಡೆವಿಲ್' ದಿ ಹೀರೊ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಹುಟ್ಟುಹಬ್ಬಕ್ಕೆ ಚಿತ್ರದ ಫಸ್ಟ್ ಲುಕ್ ಹೊರ ಬರಲಿದೆ.


Click it and Unblock the Notifications










