Honey Singh Divorce Case: 13 ವರ್ಷಗಳ ದಾಂಪತ್ಯ ಜೀವನ ಅಂತ್ಯ: ಅಧಿಕೃತವಾಗಿ ಬೇರೆಯಾದ ಹನಿ ಸಿಂಗ್- ಶಾಲಿನಿ ತಲ್ವಾರ್
Honey Singh Divorce Case: ಯೋ ಯೋ ಹನಿ ಸಿಂಗ್ ಎಂಬ ಹೆಸರಿನಿಂದ ಚಿರಪರಿಚಿತರಾಗಿರುವ ಪಂಜಾಬಿ ಗಾಯಕ ಹಿರ್ದೇಶ್ ಸಿಂಗ್ ಮತ್ತು ಅವರ ಪತ್ನಿ ಶಾಲಿನಿ ತಲ್ವಾರ್ ಅವರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ವಿಚ್ಛೇದನ ಜಾರಿ ಮಾಡಿದೆ. ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಪರಮ್‌ಜಿತ್ ಸಿಂಗ್ ಅವರು ಎರಡೂವರೆ ವರ್ಷಗಳ ನಂತರ ವಿಚ್ಛೇದನದ ತೀರ್ಪು ನೀಡಿದ್ದಾರೆ.
ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ವಿಚಾರಣೆ ಬಳಿಕ ನಂತರ ಗಾಯಕ ಹನಿ ಸಿಂಗ್ ಮತ್ತು ಅವರ ಪತ್ನಿ ಶಾಲಿನಿ ತಲ್ವಾರ್‌ಗೆ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದೆ. ಗಾಯಕ ಹನಿ ಸಿಂಗ್ ವಿರುದ್ಧ ಅವರ ಪತ್ನಿ ಶಾಲಿನಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು.

ಪತ್ನಿಯ ಜೊತೆಗೆ ಇರಲ್ಲ ಎಂದ ಹನಿ ಸಿಂಗ್
ವಿಚ್ಛೇದನ ಆದೇಶವನ್ನು ಘೋಷಿಸುವ ಮೊದಲು, ನ್ಯಾಯಾಧೀಶ ಪರಮ್‌ಜೀತ್ ಸಿಂಗ್ ಹನಿ ಸಿಂಗ್ ಅವರನ್ನು ಇನ್ನೂ ತಮ್ಮ ಹೆಂಡತಿಯೊಂದಿಗೆ ವಾಸಿಸಲು ಬಯಸುತ್ತೀರಾ ಎಂದು ಪ್ರರ್ಶನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಅವು ಇಲ್ಲ, ಇಬ್ಬರು ಒಟ್ಟಿಗೆ ವಾಸಿಸುವ ಯಾವುದೇ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಹನಿ ಸಿಂಗ್ ಮತ್ತು ಅವರ ಪತ್ನಿ ಶಾಲಿನಿ ತಲ್ವಾರ್ ಇತ್ಯರ್ಥಕ್ಕೆ ಬಂದಿದ್ದರು. ವಿಚ್ಛೇದನದ ಇತ್ಯರ್ಥಕ್ಕಾಗಿ 1 ಕೋಟಿ ಪರಿಹಾರ ಮತ್ತು ಜೀವನಾಂಶಕ್ಕೆ ನೀಡಬೇಕು ಎಂದು ಒಪ್ಪಂದ ಮಾಡಲಾಗಿದೆ. ಶಾಲಿನಿ, ತಮ್ಮ ಪತಿ ಹನಿ ಸಿಂಗ್ ವಿರುದ್ಧ ದಾಖಲಿಸಿದ್ದ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಹಿಂಪಡೆದಿದ್ದಾರೆ. ಬಳಿಕ ನ್ಯಾಯಾಲಯ ಅವರಿಗೆ ವಿಚ್ಛೇದನದ ಆದೇಶವನ್ನು ನೀಡಿದೆ.

13 ವರ್ಷಗಳ ದಾಂಪತ್ಯ ಜೀವನ ಅಂತ್ಯ
ಗಾಯಕ ಹನಿ ಸಿಂಗ್ ಮತ್ತು ಅವರ ಪತ್ನಿ ಶಾಲಿನಿ ತಲ್ವಾರ್ ಅವರದ್ದು ಸುಮಾರು 13 ವರ್ಷಗಳ ದಾಂಪತ್ಯ ಜೀವನ. ಇಬ್ಬರು ಜನವರಿ 2011 ರಲ್ಲಿ ವಿವಾಹವಾಗಿದ್ದರು. 2021 ರಲ್ಲಿ, ಶಾಲಿನಿ ಅವರು ಹನಿ ಸಿಂಗ್ ಮತ್ತು ಅವನ ಕುಟುಂಬವು ತನ್ನನ್ನು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹಿಂಸೆ ಮಾಡುತ್ತಿದೆ ಎಂದು ಆರೋಪಿಸಿದ್ದರು. ಜೊತೆಗೆ ಕೌಟುಂಬಿಕ ಹಿಂಸಾಚಾರದ ಆರೋಪ ಮಾಡಿ, ತನ್ನ ಬಳಿ ಸಾಕ್ಷಿಯಿದೆ ಎಂದು ಹೇಳಿಕೊಂಡಿದ್ದರು.
ಆರೋಪದ ನಂತರ ಹನಿ ಸಿಂಗ್ ಹೇಳಿಕೆಯನ್ನು ನೀಡಿದ್ದರು. ಎಲ್ಲಾ ಆರೋಪಗಳು "ಸುಳ್ಳು ಮತ್ತು ದುರುದ್ದೇಶಪೂರಿತ" ಎಂದಿದ್ದರು. ಜೊತೆಗೆ "ನಾನು 15 ವರ್ಷಗಳಿಂದ ಉದ್ಯಮದೊಂದಿಗೆ ಸಂಬಂಧ ಹೊಂದಿದ್ದೇನೆ. ದೇಶಾದ್ಯಂತ ಕಲಾವಿದರು ಮತ್ತು ಸಂಗೀತಗಾರರೊಂದಿಗೆ ಕೆಲಸ ಮಾಡಿದ್ದೇನೆ. ನನ್ನ ಹೆಂಡತಿಯೊಂದಿಗಿನ ನನ್ನ ಸಂಬಂಧ ಹೇಗಿತ್ತು ಎಂಬ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರು ಈಗ ಒಂದು ದಶಕಕ್ಕೂ ಹೆಚ್ಚು ಕಾಲ ನನ್ನ ಸಿಬ್ಬಂದಿಯ ಅವಿಭಾಜ್ಯ ಅಂಗವಾಗಿದ್ದಾರೆ. ನನ್ನ ಶೂಟಿಂಗ್, ಕಾರ್ಯಕ್ರಮಗಳು ಮತ್ತು ಮೀಟಿಂಗ್‌ಗಳಿಗೆ ನನ್ನೊಂದಿಗೆ ಜೊತೆಯಾಗಿದ್ದಾರೆ. ನಾನು ಎಲ್ಲಾ ಆರೋಪಗಳನ್ನು ಬಲವಾಗಿ ನಿರಾಕರಿಸುತ್ತೇನೆ" ಎಂದಿದ್ದರು.
ಕಳೆದ ಸೆಪ್ಟೆಂಬರ್ 2022 ರಲ್ಲಿ ಪರಸ್ಪರ ವಿಚ್ಛೇದನವನ್ನು ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಹನಿ ಸಿಂಗ್ ಪರ ವಕೀಲರಾದ ಇಶಾನ್ ಮುಖರ್ಜಿ ಮತ್ತು ವಕೀಲರಾದ ಅಮೃತಾ ಚಟರ್ಜಿ ಮತ್ತು ಜಸ್ಪಾಲ್ ಸಿಂಗ್ ಅವರು ವಕಾಲತ್ತು ವಹಿಸಿದ್ದರು. ಹನಿ ಸಿಂಗ್ ಪತ್ನಿ ಶಾಲಿನಿ ಪರ ವಕೀಲ ವಿವೇಕ್ ಸಿಂಗ್ ವಾದ ಮಂಡಿಸಿದ್ದರು.


Click it and Unblock the Notifications











