'ರಾಘವೇಂದ್ರ ಸ್ಟೋರ್ಸ್'ನಲ್ಲಿ ನಿಂತ ಜಗ್ಗಣ್ಣನಿಗೆ ಡಾಲಿ ಸಾಥ್: ಸಿಂಗಲ್ ಹುಡುಗರ ಗೋಳು ಕೇಳೋರು ಯಾರು?
ನವರಸ ನಾಯಕ ಜಗ್ಗೇಶ್ ನಟನೆಯ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಸಂತೋಷ್ ಆನಂದ್ ರಾಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಕಳೆದ ವರ್ಷವೇ ರಿಲೀಸ್ ಆಗಬೇಕಿದ್ದ ಸಿನಿಮಾ ಈ ತಿಂಗಳ ಕೊನೆಗೆ ಬರ್ತಿದೆ. ಇದೀಗ ಈ ಕಾಮಿಡಿ ಎಂಟರ್‌ಟೈನರ್ ಚಿತ್ರದ ಫಸ್ಟ್ ಸಾಂಗ್ ರಿಲೀಸ್‌ಗೆ ದಿನಗಣನೆ ಶುರುವಾಗಿದೆ.
ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ 'ರಾಘವೇಂದ್ರ ಸ್ಟೋರ್ಸ್'. ಹೋಟೆಲ್‌ನಲ್ಲಿ ಅಡುಗೆ ಭಟ್ಟನ ಕೆಲಸ ಮಾಡಿಕೊಂಡಿರುವ ನಾಯಕನಿಗೆ ವಯಸ್ಸು 40 ದಾಟಿದರೂ ಮದುವೆ ಆಗಿರಲ್ಲ. ಮದುವೆ ಆಗಲು ಆತ ಏನೆಲ್ಲಾ ಪಾಡು ಪಟ್ಟುತ್ತಾನೆ ಎನ್ನುವುದನ್ನು ಫನ್ನಿಯಾಗಿ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ಇದರ ಜೊತೆಗೆ ಇನ್ನು ಸಾಕಷ್ಟು ಅಂಶಗಳು ಸಿನಿಮಾದಲ್ಲಿದೆ. ಜಗ್ಗಣ್ಣ ತಮ್ಮ ಹಾವಭಾವ ಹಾಗೂ ಕಾಮಿಡಿ ಟೈಮಿಂಗ್‌ನಿಂದ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಡಲು ಬರುತ್ತಿದ್ದಾರೆ.

ಕಥೆಗೆ ತಕ್ಕಂತೆ ಚಿತ್ರದಲ್ಲೊಂದು ಸ್ಪೆಷಲ್ ಸಾಂಗ್ ಕಂಪೋಸ್ ಮಾಡಿದ್ದಾರೆ. ಅದರ ಪ್ರೋಮೋ ಶೂಟಿಂಗ್ ಇತ್ತೀಚೆಗೆ ನಡೆದಿದೆ. ಬ್ರಹ್ಮಚಾರಿಗಳ ಗೋಳನ್ನು ಈ ಸಾಂಗ್‌ನಲ್ಲಿ ಹೇಳಲಾಗ್ತಿದ್ದು ಡಾಲಿ ಧನಂಜಯ ಹಾಗೂ ನಾಗಭೂಷಣ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಧನಂಜಯಗೂ ಕೂಡ ಪದೇ ಪದೇ ಮದುವೆ ಮಾತು ಎದುರಾಗುತ್ತಲೇ ಇದೆ. ಆದರೆ ಸಮಯ ಕೂಡಿ ಬಂದಾಗ ತಾನಾಗಿಯೇ ಮದುವೆ ಆಗುತ್ತದೆ ಎಂದು ಹೇಳುತ್ತಾ ಬರ್ತಿದ್ದಾರೆ. ಇತ್ತೀಚೆಗೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟ ಬ್ರಹ್ಮಚಾರಿ ಯುವಕರಿಗೆ ಧನು ಸಾಥ್ ಕೊಟ್ಟಿದ್ದರು.
ಇತ್ತೀಚೆಗೆ 30 ವರ್ಷ ದಾಟಿದರೂ ಮದುವೆ ಆಗದ ಮಂಡ್ಯದ ಕೆಲ ಯುವಕರು ದೇವರ ಮೊರೆ ಹೋಗಿದ್ದರು. ನಟ ಧನಂಜಯ ಈ ಪಾದಯಾತ್ರೆಗೆ ಚಾಲನೆ ನೀಡಿದ್ದರು. ಪಾದಯಾತ್ರಿಗಳ ಜೊತೆ ಡಾಲಿ ಕೂಡ ಒಂದಷ್ಟು ದೂರ ಹೆಜ್ಜೆ ಹಾಕಿದ್ದರು. ಅವಿವಾಹಿತರನ್ನು ಸಂಘಟಿಸಿ ಆತ್ಮಸ್ಥೈರ್ಯ ತುಂಬುವ ಈ ಕೆಲಸಕ್ಕೆ ಧನಂಜಯ ಬೆಂಬಲವಾಗಿ ನಿಂತಿದ್ದರು. ದೇಶದಲ್ಲಿ ಗಂಡು ಹೆಣ್ಣಿನ ಅನುಪಾತ ಅಸಮಾನತೆ ತೀವ್ರವಾಗಿರುವ ಬಗ್ಗೆ ಧನಂಜಯ ಮಾತನಾಡಿದ್ದರು.

'ರಾಘವೇಂದ್ರ ಸ್ಟೋರ್ಸ್' ಚಿತ್ರದ ನಾಯಕನ ಗೋಳು ಕೇಳಲು ಧನುಗಿಂತ ಉತ್ತಮ ವ್ಯಕ್ತಿ ಯಾರು ಇಲ್ಲ ಎಂದು ತಂಡ ನಿರ್ಧರಿಸಿದಂತಿದೆ. ಅಜನೀಶ್ ಲೋಕನಾಥ್ ಸಂಗೀತದ ಹಾಡನ್ನು ವಿಜಯ್ ಪ್ರಕಾಶ್ ಹಾಗೂ ನವೀನ್ ಸಜ್ಜು ಹಾಡಿದ್ದಾರೆ. ಧನಂಜಯ ಹಾಗೂ ನಾಗಭೂಷಣ್ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಂಗ್ ಪ್ರೊಮೊ ಶೂಟ್ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಜಗ್ಗೇಶ್ ತಮ್ಮದೇ ಸ್ಟೈಲ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. "ಇದು ಮನೆ ಮನೆ ಕಥೆ" ಎಂದು ಬರೆದುಕೊಂಡಿದ್ದಾರೆ.
ಏಪ್ರಿಲ್ 28ಕ್ಕೆ 'ರಾಘವೇಂದ್ರ ಸ್ಟೋರ್ಸ್' ಬಿಡುಗಡೆಯಾಗಲಿದೆ. ಇತ್ತೀಚೆಗೆ ಜಗ್ಗೇಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಂಬಾಳೆ ಸಂಸ್ಥೆ ರಿಲೀಸ್ ಡೇಟ್ ಘೋಷಿಸಿತ್ತು. ಚಿತ್ರದಲ್ಲಿ ಜಗ್ಗೇಶ್ ಜೋಡಿಯಾಗಿ ಶ್ವೇತಾ ಶ್ರೀವಾಸ್ತವ್ ನಟಿಸಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟೀಸರ್ ಕೊಂಚಮಟ್ಟಿಗೆ ಗಮನ ಸೆಳೆದಿದೆ. ಶೀಘ್ರದಲ್ಲೇ ಚಿತ್ರದ ಹಾಡುಗಳನ್ನು ಒಂದೊಂದಾಗಿ ರಿಲೀಸ್ ಮಾಡಿ ನಂತರ ಟ್ರೈಲರ್ ಬರಲಿದೆ. ಹಲವು ವರ್ಷಗಳಿಂದ ಜಗ್ಗೇಶ್ ಒಡನಾಟದಲ್ಲಿ ಸಂತೋಷ್ ಆನಂದ್‌ರಾಮ್ ಇದ್ದಾರೆ. ಜಗ್ಗಣ್ಣನನ್ನು ಗುರುಗಳ ಸ್ಥಾನದಲ್ಲಿ ನೋಡುವ ಸಂತು ಈ ಚಿತ್ರವನ್ನು ಯಾವ ರೀತಿ ಮಾಡಿದ್ದಾರೆ ಎನ್ನುವ ಕುತೂಹಲ ಇದೆ.
ಶ್ರೀಶ ಕುದುವಳ್ಳಿ ಛಾಯಾಗ್ರಹಣವಿದೆ. ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನದಲ್ಲಿ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಮತ್ತಷ್ಟು ಸೊಗಸಾಗಿ ಮೂಡಿ ಬಂದಿದೆ. ಕೆಲ ದಿನಗಳ ಹಿಂದೆ ಈ ಚಿತ್ರವನ್ನು ನೇರವಾಗಿ ಓಟಿಟಿಗೆ ತರುವ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಇದನ್ನು ನಿರ್ದೇಶಕರು ಅಲ್ಲಗಳೆದಿದ್ದರು. ಇದೀಗ ಸಿನಿಮಾ ಥಿಯೇಟರ್‌ಗಳಲ್ಲೇ ರಿಲೀಸ್ ಆಗುತ್ತಿದೆ.


Click it and Unblock the Notifications











