ಅರೇ, 6 ವರ್ಷಗಳ ಹಿಂದೆಯೇ 'ಸಲಾರ್' ಟ್ಯೂನ್ ಅಪ್ಪು ಬಳಸಿಕೊಂಡಿದ್ದರು ಅಂದ್ರೆ ನಂಬ್ತೀರಾ?
ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರನ್ ನಟನೆಯ 'ಸಲಾರ್' ಸಿನಿಮಾ 25 ದಿನ ಪೂರೈಸಿದೆ. ಇತ್ತೀಚೆಗೆ ಭರ್ಜರಿ ಪಾರ್ಟಿ ಮಾಡಿ ಇಡೀ ಚಿತ್ರತಂಡ ಖುಷಿಪಟ್ಟಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಹೈವೋಲ್ಟೇಜ್ ಆಕ್ಷನ್ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ.
ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ಪ್ರಭಾಸ್ ಆರ್ಭಟಕ್ಕೆ ಸಿನಿರಸಿಕರು ಫಿದಾ ಆಗಿದ್ದರು. ಕನ್ನಡದ 'ಉಗ್ರಂ' ಸಿನಿಮಾ ರೀಮೆಕ್ ಆಗಿದ್ದರೂ 'ಸಲಾರ್' ಹೊಸ ರೂಪದಲ್ಲಿ ಸಿನಿರಸಿಕರ ಮನಗೆದ್ದಿತ್ತು. ತೆಲುಗು ಕಲಾವಿದರ ಜೊತೆ ಕನ್ನಡದ ಕಲಾವಿದರು, ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಶೀಘ್ರದಲ್ಲೇ ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗೆ ಸಿದ್ಧವಾಗುತ್ತಿದೆ.

ರವಿ ಬಸ್ರೂರು ಮ್ಯೂಸಿಕ್, ಭುವನ್ ಗೌಡ ಛಾಯಾಗ್ರಹಣ ಕೂಡ 'ಸಲಾರ್' ಚಿತ್ರಕ್ಕೆ ಪ್ಲಸ್ ಆಗಿತ್ತು. ಇನ್ನು ಮುಂದಿನ ವರ್ಷವೇ ಚಿತ್ರದ ಸೀಕ್ವೆಲ್ ತೆರೆಗೆ ತರುವ ಪ್ರಯತ್ನಗಳು ನಡೀತಿದೆ. ಚಿತ್ರಕ್ಕೆ ರವಿಬಸ್ರೂರು ಮ್ಯೂಸಿಕ್ ಹೈಲೆಟ್ ಆಗಿದ್ದು ಸುಳ್ಳಲ್ಲ. ಎರಡೇ ಎರಡು ಹಾಡುಗಳು ಇದ್ದರೂ ಕೂಡ ಇನ್ನುಳಿದಂತೆ ತಮ್ಮ ಬಿಜಿಎಂನಿಂದ ಚಿತ್ರಕ್ಕೆ ಹೊಸ ಖದರ್ ತಂದುಕೊಟ್ಟಿದ್ದಾರೆ.
'ಉಗ್ರಂ' ಚಿತ್ರದಿಂದಲೂ ರವಿಬಸ್ರೂರು ತಮ್ಮ ಅದ್ಭುತ ಸಂಗೀತದಿಂದ ಮೋಡಿ ಮಾಡುತ್ತಾ ಬರ್ತಿದ್ದಾರೆ. 'ಸಲಾರ್' ಚಿತ್ರದ 'ಪ್ರತಿಕಥೆಯ ರಾಕ್ಷಸನೂ' ಹಾಡು ಸೂಪರ್ ಹಿಟ್ ಆಗಿರೋದು ಗೊತ್ತೇಯಿದೆ. ಆದರೆ ಈ ಹಾಡಿನ ನಡುವೆ ಬರುವ ಒಂದು ಟ್ಯೂನ್ ಗಮನ ಸೆಳೆದಿದೆ. ವೈಯಲಿನ್ ಬಳಸಿ ನಡಿಸಿರುವ ಆ ಟ್ಯೂನ್ ಅನ್ನು ಚಿತ್ರದ ಬಿಜಿಎಂನಲ್ಲಿ ಕೂಡ ಬಳಸಿಕೊಳ್ಳಲಾಗಿದೆ. ಆದರೆ ಈ ಟ್ಯೂನ್ ಅನ್ನು 6 ವರ್ಷಗಳ ಹಿಂದೆ ಪುನೀತ್ ರಾಜ್‌ಕುಮಾರ್ ನಮಗೆಲ್ಲಾ ಕೇಳಿಸಿದ್ದರು ಅಂದ್ರೆ ನೀವು ನಂಬುತ್ತೀರಾ?
ಹೌದು 6 ವರ್ಷಗಳ ಹಿಂದೆ ಪುನೀತ್ ರಾಜ್‌ಕುಮಾರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಒಂದು ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದರು. ಆ ವಿಡಿಯೋಗೆ ಈ ಮ್ಯೂಸಿಕ್ ಬಳಸಿದ್ದರು. ಇದೀಗ ಅಭಿಮಾನಿಗಳು ಇದನ್ನು ಹುಡುಕಿ ತಂದಿದ್ದಾರೆ. ಡಿಸೆಂಬರ್ 3, 2017ರಲ್ಲಿ ಪುನೀತ್ ರಾಜ್‌ಕುಮಾರ್, "ನಾ Speechless ಆಗಿದ್ದೆ, ಈ video ಮುಗಿಯೋವರೆಗೂ ನೀವು ?" ನೀವು ಎಂದು ಬರೆದು ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ತಂದೆ ಡಾ. ರಾಜ್‌ಕುಮಾರ್ ಅವರ ಅಪರೂಪದ ಫೋಟೊಗಳನ್ನು ಕೊಲಾಜ್ ಮಾಡಿ ಈ ವಿಡಿಯೋ ಮಾಡಲಾಗಿತ್ತು.
ಆ ವಿಡಿಯೋಗೆ ಅಂದೇ ರವಿಬಸ್ರೂರು ಈ ಟ್ಯೂನ್ ಕೊಟ್ಟಿದ್ದರು. ಆಗ ಪುನೀತ್ ರಾಜ್‌ಕುಮಾರ್ ನಟನೆಯ 'ಅಂಜನಿಪುತ್ರ' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಎ. ಹರ್ಷ ನಿರ್ದೇಶನದ ಆ ಚಿತ್ರಕ್ಕೆ ರವಿಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಹಾಗಾಗಿ ಅಪ್ಪು ಹಂಚಿಕೊಂಡಿದ್ದ ಸ್ಪೆಷಲ್ ವಿಡಿಯೋಗೆ ರವಿ ಮ್ಯೂಸಿಕ್ ಮಾಡಿಕೊಟ್ಟಿದ್ದರು. ಅದೇ ಟ್ಯೂನ್ ಅನ್ನು ಕೊಂಚ ಬದಲಿಸಿ ಈಗ 'ಸಲಾರ್' ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅದಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ.
ಯಾವಾಗಲೋ ಹೊಳೆದ ಟ್ಯೂನ್ ಅಥವಾ ಯಾರೋ ರಿಜೆಕ್ಟ್ ಮಾಡಿದ್ದ ಟ್ಯೂನ್ ಬಳಿಕ ಹೊರಬಂದು ಸೂಪರ್ ಹಿಟ್ ಆಗಿರುವ ಸಾಕಷ್ಟು ಉದಾಹರಣೆಗಳಿವೆ. ಸಂಗೀತ ನಿರ್ದೇಶಕ ರವಿಬಸ್ರೂರು ಕೂಡ ಇದೇ ರೀತಿ ಸಾಕಷ್ಟು ಟ್ಯೂನ್‌ಗಳನ್ನು ಹೊಳೆದಾಗ ಸಿದ್ಧಪಡಿಸಿ ಇಟ್ಟಿದ್ದಾರೆ. ಅದನ್ನು ನಿರ್ದೇಶಕರು ಒಪ್ಪಿ ಸಿನಿಮಾಗಳಿಗೆ ಬಳಸಿಕೊಳ್ಳುತ್ತಾರೆ. ಸದ್ಯ 'ಸಲಾರ್' ಚಿತ್ರದ ಟ್ಯೂನ್‌ಗಳು ಭಾರೀ ಸದ್ದು ಮಾಡ್ತಿವೆ.
ಸದ್ಯ 'ಮಾರ್ಟಿನ್', 'ಕಾಲಿಯಾನ್', 'ಸಾರ್‌ಜಮೀನ್', 'ಜೆಬ್ರಾ', 'ಸೀತಾ ಮನೋಹರ ಶ್ರೀ ರಾಘವ' ಸೇರಿದಂತೆ ಹಲವು ಸಿನಿಮಾಗಳಿಗೆ ರವಿಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.


Click it and Unblock the Notifications











