"ಕರಿಘಟ್ಟದ ಈರಪ್ಪನೂ" ಜಬರ್ದಸ್ತ್ ಸಾಂಗ್ ಔಟ್: ಶಿವಣ್ಣ- ಧನುಷ್ ಪವರ್‌ಫುಲ್ ಸ್ಟೆಪ್ಸ್
ಧನುಷ್ ಹಾಗೂ ಶಿವರಾಜ್‌ಕುಮಾರ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅರುಣ್ ಮಹೇಶ್ವರನ್ ನಿರ್ದೇಶನದ ಈ ಆಕ್ಷನ್ ಅಡ್ವೆಂಚರಸ್ ಸಿನಿಮಾ ಸ್ಯಾಂಪಲ್‌ಗಳು ಒಂದೊಂದಾಗಿ ರಿಲೀಸ್ ಆಗಿ ಸದ್ದು ಮಾಡ್ತಿದೆ. ಇದೀಗ ಚಿತ್ರದ ಪವರ್‌ಫುಲ್ ಸಾಂಗ್ ಹೊರ ಬಿದ್ದಿದೆ.
'ಕರಿಘಟ್ಟದ ಬೆಟ್ಟದ ಮೇಲೆ ಈರಪ್ಪನೂ.. ಊರನ್ನು ಕಾಯಲು ನಿಂತ ಈರಪ್ಪನೂ' ಎಂದು ಶುರುವಾಗುವ ಹಾಡು ಸಿನಿರಸಿಕರ ಮನಗೆದ್ದಿದೆ. ಹಾಡಿನಲ್ಲಿ ಶಿವಣ್ಣ- ಧನುಷ್ ಬಿಂದಾಸ್ ಸ್ಟೆಪ್ ಹಾಕಿದ್ದಾರೆ. ಸದ್ಯ ಲಿರಿಕಲ್ ವಿಡಿಯೋ ಸಾಂಗ್ ಮಾತ್ರ ರಿಲೀಸ್ ಆಗಿದ್ದು ಕಂಪ್ಲೀಟ್ ವಿಡಿಯೋ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಜಿ. ವಿ ಪ್ರಕಾಶ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ತೆರೆಗೆ ಬರಲಿದೆ.

'ಜೈಲರ್' ಬಳಿಕ ಧನುಷ್ ಜೊತೆ ಶಿವಣ್ಣ ನಟಿಸುತ್ತಾರೆ ಎಂದಾಗಲೇ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿತ್ತು. ಮೊದಲ ಟೀಸರ್ ಬಂದಮೇಲೆ ಕುತೂಹಲ ಎಚ್ಚಾಗಿತ್ತು. ಶಿವಣ್ಣ ಪವರ್‌ಫುಲ್ ರೋಲ್‌ನಲ್ಲಿ ನಟಿಸಿರೋದು ಗೊತ್ತಾಗಿತ್ತು. ಇದೀಗ ಸಿನಿಮಾ ನೋಡುವ ಸಮಯ ಹತ್ತಿರ ಬರ್ತಿದೆ. ತಮಿಳು ಮಾತ್ರವಲ್ಲದೇ ಕನ್ನಡ, ಹಿಂದಿ, ತೆಲುಗಿಗೂ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಡಬ್ ಆಗಿ ತೆರೆಗಪ್ಪಳಿಸುತ್ತಿದೆ.
ಕನ್ನಡ ವರ್ಷನ್ ಹಾಡಿಗೆ ಪ್ರಮೋದ್ ಜೊಯೆಸ್ ಸಾಹಿತ್ಯ ಬರೆದಿದ್ದರೆ ದರ್ಶನ್ ನಾರಾಯಣ್ ಹಾಗೂ ಶೆನ್‌ಬಾಗ್ ರಾಜ್ ಹಾಡಿದ್ದಾರೆ. ತಮಿಳು ಹಾಡಿಗೆ ಉಮಾದೇವಿ ಸಾಹಿತ್ಯ ಇದ್ದು ದೇವ, ಸಂತೋಷ್ ಹರಿಹರನ್ ಹಾಗೂ ಅಲೆಕ್ಸಾಂಡರ್ ಬಾಬು ಹಾಡಿದ್ದಾರೆ. ಹಾಡಿಗೆ ಲಕ್ಷ ಲಕ್ಷ ವೀವ್ಸ್ ಸಿಕ್ಕಿದೆ.
4 ಭಾಷೆಗಳಲ್ಲಿ ಜಾನಪದ ಶೈಲಿಯ 'ಕೊರನಾರು' ಸಾಂಗ್ ಸದ್ದು ಮಾಡ್ತಿದೆ. ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ಬಹಳ ಅದ್ಧೂರಿಯಾಗಿ 'ಕ್ಯಾಪ್ಟನ್ ಮಿಲ್ಲರ್' ಮೂಡಿ ಬಂದಿದೆ. ಅದಕ್ಕೆ ತಕ್ಕಂತೆ ಹಾಡನ್ನು ಕಟ್ಟಿಕೊಡಲಾಗಿದೆ. ಇನ್ನು ಸ್ವತಂತ್ರಪೂರ್ವ ಕಾಲದ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಶಿವಣ್ಣ ಪ್ಯಾಂಟು, ಶರ್ಟ್‌ನಲ್ಲಿ ಕಾಣಿಸಿಕೊಂಡರೆ ಧನುಷ್ ಪಂಚೆ, ಶರ್ಟ್‌ನಲ್ಲಿ ಮಿಂಚಿದ್ದಾರೆ. ಅಂದಿನ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸಿದೆ.
ರಜನಿಕಾಂತ್ ಜೊತೆ 'ಜೈಲರ್' ಚಿತ್ರದಲ್ಲಿ ನರಸಿಂಹ ಆಗಿ ಶಿವಣ್ಣ ಅಬ್ಬರಿಸಿದ್ದರು. ಕೆಲವೇ ನಿಮಿಷಗಳು ಬರುವ ಅತಿಥಿ ಪಾತ್ರಕ್ಕೆ ಕಾಲಿವುಡ್ ಪ್ರೇಕ್ಷಕರು ಫಿದಾ ಆಗಿದ್ದರು. ಆದರೆ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ದೊಡ್ಡ ಪಾತ್ರವೇ ಶಿವಣ್ಣನಿಗೆ ಸಿಕ್ಕಿದೆ. ಧನುಷ್ ಸಹೋದರನಾಗಿ ಸೆಂಚುರಿ ಸ್ಟಾರ್ ಮಿಂಚಿದ್ದಾರೆ. ಇನ್ನುಳಿದಂತೆ ಸಂದೀಪ್ ಕೃಷ್ಣನ್, ಪ್ರಿಯಾಂಕ ಅರುಳ್ ಮೋಹನನ್, ಜಾನ್ ಕೊಕೆನ್, ನಾಸರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಸಂಕ್ರಾಂತಿ ಹಬ್ಬಕ್ಕೆ ತಮಿಳು, ತೆಲುಗಿನ ದೊಡ್ಡ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಕನ್ನಡದ ಯಾವುದೇ ಸಿನಿಮಾ ಬರ್ತಿಲ್ಲ. ಆದರೆ ಶಿವಣ್ಣ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ನಟಿಸಿದ್ದು ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಹಾಗಾಗಿ ಕರ್ನಾಟಕದಲ್ಲಿ ಬಿಡುಗಡೆ ಆಗುವ ದೊಡ್ಡ ಸಿನಿಮಾ ಇದೇ ಆಗಿರಲಿದೆ. ಇನ್ನುಳಿದಂತೆ ತಮಿಳಿನಲ್ಲಿ ರಜನಿಕಾಂತ್ ನಟನೆಯ 'ಲಾಲ್ ಸಲಾಂ', ಶಿವಕಾರ್ತಿಕೇಯನ್ 'ಅಯಲಾನ್', ಮಿಷನ್ ಸೇರಿದಂತೆ ಹಲವು ತಮಿಳು ಸಿನಿಮಾಗಳು ಬಿಡುಗಡೆ ಸಜ್ಜಾಗಿವೆ.
ತೆಲುಗಿನಲ್ಲಿ ಮಹೇಶ್ ಬಾಬು 'ಗುಂಟೂರು ಖಾರಂ', ವೆಂಕಟೇಶ್ 'ಸೈಂಧವ್', ನಾಗಾರ್ಜುನ 'ನಾ ಸಾಮಿ ರಂಗಾ', ರವಿತೇಜ 'ಈಗಲ್', ತೇಜ್ ಸಜ್ಜಾ 'ಹನುಮಾನ್' ಸೇರಿದಂತೆ ಅರ್ಧ ಡಜನ್ ಸಿನಿಮಾಗಳು ಸುಗ್ಗಿ ಸಂಭ್ರಮದಲ್ಲಿ ಬಿಡುಗಡೆ ಆಗುತ್ತಿವೆ. ಈ ವರ್ಷ ಸಂಕ್ರಾಂತಿಗೆ ಸಿನಿಮಾ ಹಬ್ಬ ಜೋರಾಗಿರುತ್ತದೆ ಅನ್ನೋದು ಗೊತ್ತಾಗುತ್ತಿದೆ.



Click it and Unblock the Notifications











