ಲತಾ ಮಂಗೇಶ್ಕರ್ ಆರೋಗ್ಯದ ಬಗ್ಗೆ ಹರಿದಾಡುತ್ತಿದೆ ಸುಳ್ಳು ಸುದ್ದಿ: ನಿಜಾಂಶವೇನು?
ಭಾರತದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಕಳೆದ 15 ದಿನಗಳಿಂದಲೂ ಆಸ್ಪತ್ರೆಯಲ್ಲಿದ್ದಾರೆ. ಲತಾ ಮಂಗೇಶ್ಕರ್ ಅವರಿಗೆ ಕೊರೊನಾ ಆಗಿದ್ದು ಜನವರಿ 08 ರಂದು ಮುಂಬೈನ ಬೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಅಂದಿನಿಂದಲೂ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
Recommended Video
ಆದರೆ ಕೆಲವು ದಿನಗಳಿಂದಲೂ ಲತಾ ಮಂಗೇಶ್ಕರ್ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಕೆಲವರಂತೂ ಸಾಮಾಜಿಕ ಜಾಲತಾಣದಲ್ಲಿ ಲತಾ ಮಂಗೇಶ್ಕರ್ ನಿಧನರಾಗಿದ್ದಾರೆಂದು ಸಂತಾಪ ಸಹ ಸೂಚಿಸಿಬಿಟ್ಟಿದ್ದಾರೆ.
ಆದರೆ ಲತಾ ಮಂಗೇಶ್ಕರ್ ಆರೋಗ್ಯದ ಬಗ್ಗೆ ಇಂದು ವೈದ್ಯರು ಹೇಳಿರುವಂತೆ ಅವರ ಆರೋಗ್ಯದಲ್ಲಿ ಸಣ್ಣ ಪ್ರಮಾಣದ ಚೇತರಿಕೆ ಕಾಣಿಸಿಕೊಂಡಿದೆ. ಆದರೂ ಅವರಿಗೆ ತೀವ್ರ ನಿಗಾ ಘಟಕದಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗುತ್ತಿದೆ.

''ಲತಾ ದೀದಿ ಅವರು ವೈದ್ಯರ ತಂಡದ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರ ಆರೋಗ್ಯ ತುಸುವೇ ಸುಧಾರಣೆ ಕಾಣುತ್ತಿದೆ. ಅವರಿಗೆ ನೀಡುತ್ತಿರುವ ಚಿಕಿತ್ಸೆ ಪರಿಣಾಮ ಬೀರುತ್ತಿದೆ. ವೈದ್ಯಕೀಯ ತಂಡವು ಅವರ ಆರೋಗ್ಯದ ಮೇಲೆ ಹತ್ತಿರದ ನಿಗಾ ಇರಿಸಿದೆ'' ಎಂದು ಲತಾ ಮಂಗೇಶ್ಕರ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದ ಮುಖ್ಯಸ್ಥ ಪ್ರತಿತ್ ಸಮ್ದಾನಿ ಹೇಳಿದ್ದಾರೆ.
ಈ ಮೊದಲು ಹೇಳಿಕೆ ನೀಡಿದ್ದ ವೈದ್ಯರು, 'ಲತಾ ಮಂಗೇಶ್ಕರ್ ಆರೋಗ್ಯಕ್ಕೆ ಎಲ್ಲರೂ ಪ್ರಾರ್ಥಿಸಿ, ಅವರು ಬೇಗ ಗುಣಮುಖವಾಗಿ ಮನೆಗೆ ಮರಳಲಿ'' ಎಂದಿದ್ದರು. ವೈದ್ಯರ ಈ ಹೇಳಿಕೆ ಲತಾ ಮಂಗೇಶ್ಕರ್ ಅವರ ಆರೋಗ್ಯದ ಬಗ್ಗೆ ಅನುಮಾನ ಮೂಡಿಸಿತ್ತು. ಬಳಿಕ ಲತಾ ಮಂಗೇಶ್ಕರ್ ಅವರ ಕುಟುಂಬದವರು ಲತಾ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹರಡದಂತೆ ಮನವಿ ಮಾಡಿದ್ದರು. ಹಾಗಿದ್ದಾಗ್ಯೂ ಸುಳ್ಳು ಸುದ್ದಿ ಹರಿದಾಡುತ್ತಲೇ ಇವೆ.
ಇಂದು ಹೇಳಿಕೆ ಬಿಡುಗಡೆ ಮಾಡಿರುವ ಲತಾ ಮಂಗೇಶ್ಕರ್ ಕುಟುಂಬಸ್ಥರು, ''ಲತಾ ಮಂಗೇಶ್ಕರ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಯಾರೂ ಸುಳ್ಳು ಸುದ್ದಿ ಹರಡಿಸಬಾರದು. ಅವರು ಬೇಗ ಗುಣವಾಗಿ ಮನೆಗೆ ಮರಳಲೆಂದು ಪ್ರಾರ್ಥಿಸಿ'' ಎಂದಿದ್ದಾರೆ.
ಲತಾ ಮಂಗೇಶ್ಕರ್ ಅವರನ್ನು ಜನವರಿ 08ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೋವಿಡ್ ನಿಂದಾಗಿ ನ್ಯುಮೋನಿಯಾ ಆಗಿತ್ತು. ಇದು ಆತಂಕಕ್ಕೆ ಕಾರಣವಾಗಿತ್ತು. ಆದರೆ ಈಗ ವೈದ್ಯರು ಹೇಳಿರುವಂತೆ ಲತಾ ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡು ಬಂದಿದೆ.
ಲತಾ ಮಂಗೇಶ್ಕರ್ 2019ರಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. 2019ರ ನವೆಂಬರ್‌ನಲ್ಲಿ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಲತಾ ಮಂಗೇಶ್ಕರ್ ಅವರ ಸಹೋದರಿ ವೈರಲ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದ್ದರು. 2021ರ ಸೆಪ್ಟೆಂಬರ್ ತಿಂಗಳಲ್ಲಿ ಲತಾ ಮಂಗೇಶ್ಕರ್ 92ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಕೇವಲ ಆಪ್ತರಿಗಷ್ಟೇ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಭಾರತ ರತ್ನ ಲತಾ ಮಂಗೇಶ್ಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದರು.
ಗಾಯಕಿ ಲತಾ ಮಂಗೇಶ್ಕರ್, ಸೆಪ್ಟೆಂಬರ್ 28, 1929ರಲ್ಲಿ ಜನಿಸಿದರು. ಭಾರತದ ಹಲವು ಭಾಷೆಗಳಲ್ಲಿ ಲತಾ ಮಂಗೇಶ್ಕರ್ ಅವರು ಹಾಡಿದ್ದಾರೆ. ಹಿಂದಿ ಭಾಷೆಯಲ್ಲಿ ಅತೀ ಹೆಚ್ಚು ಹಾಡುಗಳನ್ನು ಹಾಡಿರುವ ಗಾಯಕಿ ಕನ್ನಡದಲ್ಲಿಯೂ ಒಂದು ಹಾಡನ್ನು ಹಾಡಿದ್ದಾರೆ. 1967ರಲ್ಲಿ ತೆರೆಕಂಡ 'ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ' ಸಿನಿಮಾದಲ್ಲಿ 'ಬೆಳ್ಳನೆ ಬೆಳಗಾಯಿತು' ಎಂಬ ಹಾಡನ್ನು ಹಾಡಿದ್ದಾರೆ. ಇದು ಲತಾ ಮಂಗೇಶ್ಕರ್ ಕನ್ನಡದಲ್ಲಿ ಹಾಡಿದ ಏಕೈಕ ಹಾಡು.


Click it and Unblock the Notifications











