ಕೋವಿಡ್ ಕಿತ್ತುಕೊಂಡ ಅನರ್ಘ್ಯ ರತ್ನ ಎಸ್‌ಪಿಬಿ ಹುಟ್ಟುಹಬ್ಬ ಇಂದು
ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಬದುಕಿರುತ್ತಿದ್ದರೆ ಇಂದು 76ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿರುತ್ತಿದ್ದರು. ಆದರೆ ವಿಧಿಯಾಟ, ಕೋವಿಡ್ ಮಹಾಮಾರಿ ಅನರ್ಘ್ಯ ರತ್ನವನ್ನೇ ಕಿತ್ತುಕೊಂಡು ಬಿಟ್ಟಿತು.
ಎಸ್‌ಪಿ ಬಾಲಸುಬ್ರಹ್ಮಣ್ಯಂ ದೇಶ ಕಂಡ ಅತ್ಯದ್ಭುತ ಗಾಯಕರಲ್ಲಿ ಪ್ರಮುಖರು. ಭಾರತದ ಸುಮಾರು 16 ಭಾಷೆಗಳಲ್ಲಿ 40000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಗಾನ ಭೂಷಣ ಎಸ್‌ಪಿ ಬಾಲಸುಬ್ರಹ್ಮಣ್ಯಂ.
1966 ರಲ್ಲಿ ಮೊದಲ ಬಾರಿಗೆ ಸಿನಿಮಾ ಗೀತೆ ಹಾಡಿದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೆಲವೇ ವರ್ಷಗಳಲ್ಲಿ ಬಹು ಬೇಡಿಕೆಯ ಗಾಯಕರಾಗಿಬಿಟ್ಟರು. ಸಿನಿಮಾಕ್ಕೆ ಹಾಡು ಹಾಡುವ ಮುನ್ನ ಸಂಗೀತ ರಸಮಂಜರಿಗಳನ್ನು ನೀಡುತ್ತಿದ್ದರು ಎಸ್‌ಪಿ ಬಾಲಸುಬ್ರಹ್ಮಣ್ಯಂ. ಮತ್ತೊಬ್ಬ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅನ್ನು ತಮ್ಮ ತಂಡದಲ್ಲಿ ಸೇರಿಸಿಕೊಂಡು ಅವಕಾಶ ಕೊಟ್ಟದ್ದು ಇದೇ ಎಸ್‌ಪಿ ಬಾಲಸುಬ್ರಹ್ಯಣ್ಯಂ.

ಇನ್ನು ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೂ ಕರ್ನಾಟಕಕ್ಕೂ ಇರುವ ನಂಟಿನ ಬಗ್ಗೆ ವಿಶೇಷ ಪೀಠಿಕೆಯ ಅವಶ್ಯಕೆಯೇ ಇಲ್ಲ. ಮುಂದಿನ ಜನ್ಮದಲ್ಲಿ ಕರ್ನಾಟಕದಲ್ಲಿಯೇ ಹುಟ್ಟುವೆ ಎಂದು ಕನ್ನಡ ಮಣ್ಣಿನ ಬಗ್ಗೆ ಇರುವ ಪ್ರೀತಿ ಸಾರಿದವವರು ಎಸ್‌ಪಿಬಿ.
ಕನ್ನಡದಲ್ಲಿ ಅಸಂಖ್ಯ ಹಾಡುಗಳನ್ನು ಹಾಡಿರುವ ಎಸ್‌ಪಿ ಬಾಲಸುಬ್ರಹ್ಮಣ್ಯಂ ಕನ್ನಡ ಸಿನಿಮಾ ಸಂಗೀತ ರಂಗದ ಪ್ರಾತಃಸ್ಮರಣೀಯರು. 'ಎದೆ ತುಂಬಿ ಹಾಡುವೆನು' ಮೂಲಕ ಗಾಯನ ರಿಯಾಲಿಟಿ ಶೋ ಮೂಲಕ ಹಲವಾರು ಪ್ರತಿಭೆಗಳು ಬೆಳಕಿಗೆ ಬರಲು ನೆರವಾದ ಎಸ್‌ಪಿಬಿ, ಸಿಂಗಿಂಗ್ ರಿಯಾಲಿಟಿ ಶೋಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟರು. ಅದನ್ನು ಹಳ್ಳ ಹಿಡಿಸಿದ್ದು ಟಿವಿ ಚಾನೆಲ್‌ಗಳ ಟಿಆರ್‌ಪಿ ಲಾಲಸೆ.
ಭಾರತ ಸಿನಿಮಾ ಸಂಗೀತ, ಹಾಡುಗಾರಿಕೆಯ ದಿಕ್ಕು ಬದಲಿಸಿದವರಲ್ಲಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಸಹ ಒಬ್ಬರು. ಅದ್ಭುತ ಗಾಯಕರಾಗಿದ್ದ ಎಸ್‌ಪಿಬಿ ಅಷ್ಟೇ ಅದ್ಭುತವಾದ ವ್ಯಕ್ತಿತ್ವವುಳ್ಳವರಾಗಿದ್ದರು. ಅಜಾತಶತ್ರುವಾಗಿದ್ದ ಎಸ್‌ಪಿಬಿಗೆ ದೇಶದ ಎಲ್ಲ ಚಿತ್ರರಂಗಗಳಲ್ಲಿಯೂ ಅತ್ಯಾಪ್ತ ಗೆಳೆಯರಿದ್ದರು.
ಎಂದೂ ಯಾರ ಮನಸ್ಸನ್ನೂ ನೋಯಿಸದ ಎಸ್‌ಪಿಬಿ, 2020 ರ ಸೆಪ್ಟೆಂಬರ್ 25 ರಂದು ಕೋವಿಡ್‌ನಿಂದಾಗಿ ನಿಧನ ಹೊಂದಿದರು. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾಗ್ಯೂ ಕೆಲವೇ ಜನರ ಉಪಸ್ಥಿತಿಯಲ್ಲಿ ಎಸ್‌ಪಿಬಿ ಅಂತ್ಯಸಂಸ್ಕಾರ ನಡೆಯಿತು.
ಎಸ್‌ಪಿ ಬಾಲಸುಬ್ರಹ್ಮಣ್ಯಂ ಹುಟ್ಟುಹಬ್ಬದಂದು ಅವರ ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಮಾ ರಂಗದ ಗೆಳೆಯರು ಅವರನ್ನು ನೆನಪಿಸಿಕೊಂಡಿದ್ದಾರೆ.


Click it and Unblock the Notifications











