Year Ender 2024; ಈ ವರ್ಷದ ಟಾಪ್-5 ಕನ್ನಡ ಸಂಗೀತ ನಿರ್ದೇಶಕರ ಪಟ್ಟಿ
ನೋಡ ನೋಡುತ್ತಲೇ 2024ನೇ ವರ್ಷದ ಕೊನೆಗೆ ಬಂದಿದ್ದೇವೆ. ಈ 49 ವಾರಗಳಲ್ಲಿ ಕನ್ನಡದಲ್ಲಿ 200ಕ್ಕೂ ಅಧಿಕ ಸಿನಿಮಾಗಳು ತೆರೆಗೆ ಬಂದು ಪ್ರೇಕ್ಷಕರನ್ನು ರಂಜಿಸಿವೆ. ಮೊದಲ 6 ತಿಂಗಳಿಗಿಂತ ನಂತರದ 6 ತಿಂಗಳಲ್ಲಿ ಕನ್ನಡ ಸಿನಿಮಾಗಳ ಸಾಧನೆ ಚೆನ್ನಾಗಿದೆ.
200ಕ್ಕೂ ಹೆಚ್ಚು ಸಿನಿಮಾಗಳಲ್ಲಿ 600ಕ್ಕೂ ಅಧಿಕ ಹಾಡುಗಳು ಮೂಡಿ ಬಂದಿವೆ. ಹಾಡುಗಳಿಂದಲೇ ಹಿಟ್ ಲಿಸ್ಟ್ ಸೇರಿದ ಸಿನಿಮಾಗಳು ಇವೆ. ಕನ್ನಡದ ಸಂಗೀತ ನಿರ್ದೇಶಕರು ಈ ವರ್ಷ ಪರಭಾಷಾ ಸಿನಿಮಾಗಳಿಗೂ ಕೆಲಸ ಮಾಡಿ ಬಂದಿದ್ದಾರೆ. ಕನ್ನಡದಲ್ಲಿ ಸೂಪರ್ ಹಿಟ್ ಆಲ್ಬಮ್‌ಗಳನ್ನು ಕೊಟ್ಟಿದ್ದಾರೆ.

ವಿ. ಹರಿಕೃಷ್ಣ, ಅಜನೀಶ್ ಲೋಕನಾಥ್, ಚರಣ್ ರಾಜ್, ಅರ್ಜುನ್ ಜನ್ಯಾ, ರವಿ ಬಸ್ರೂರು ಈ ವರ್ಷ ಸಂಗೀತ ಪ್ರೇಮಿಗಳನ್ನು ಹೆಚ್ಚು ರಂಜಿಸಿದರು. ಈ ವರ್ಷ ಯಾರು ಎಷ್ಟು ಸಿನಿಮಾಗಳಲ್ಲಿ ಹಿಟ್ ಸಾಂಗ್ಸ್ ಕೊಟ್ಟರು? ಟಾಪ್ ಸಂಗೀತ ನಿರ್ದೇಶಕರ ಯಾರು? ಮುಂದೆ ಓದಿ.
ವಿ. ಹರಿಕೃಷ್ಣ
ಇತ್ತೀಚಿನ ವರ್ಷಗಳಲ್ಲಿ ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಕಮ್ಮಿ ಮಾಡಿದ್ದಾರೆ. ಆದರೆ ಆಗೊಮ್ಮೆ ಈಗೊಮ್ಮೆ ಒಳ್ಳೆ ಆಲ್ಬಮ್ ಕೊಡುತ್ತಿದ್ದಾರೆ. ಕಳೆದ ವರ್ಷದ ಕೊನೆಗೆ 'ಕಾಟೇರ' ಚಿತ್ರಕ್ಕೆ ಸಂಗೀತ ನೀಡಿ ಗೆದ್ದಿದ್ದರು. ಈ ವರ್ಷ ಕೂಡ ಆ ಚಿತ್ರದ ಹಾಡುಗಳು ಸದ್ದು ಮಾಡಿದ್ದವು. ಇನ್ನುಳಿದಂತೆ 'ಕರಟಕ ದಮನಕ' ಚಿತ್ರಕ್ಕೆ ಟ್ಯೂನ್ ಹಾಕಿ ಗೆದ್ದರು. 'ಹಿತ್ತಲಕ ಕರಿಬ್ಯಾಡ' ಸಾಂಗ್ ಲಕ್ಷ ಲಕ್ಷ ವೀವ್ಸ್ ಸಾಧಿಸಿ ದಾಖಲೆ ಬರೀತು.
ಚರಣ್ ರಾಜ್
ಕನ್ನಡ ಚಿತ್ರರಂಗದ ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್. ರಾಕ್, ಹಿಪ್ ಹಾಪ್ ಸ್ಟೈಲ್ ಮಿಕ್ಸ್ ಮಾಡಿ ಬಹಳ ವಿಭಿನ್ನ ಹಾಡುಗಳನ್ನು ಚರಣ್ ಕೊಡುತ್ತಾರೆ. ಈ ವರ್ಷ ದುನಿಯಾ ವಿಜಿ ನಿರ್ದೇಶಿಸಿ ನಟಿಸಿದ 'ಭೀಮ' ಸಿನಿಮಾ ಗೆದ್ದಿತ್ತು. ಚಿತ್ರದ ಎಲ್ಲಾ ಹಾಡುಗಳು ಹಿಟ್ ಲಿಸ್ಟ್ ಸೇರಿದೆ. 'ಸೋಮು ಸೌಂಡ್ ಇಂಜಿನಿಯರ್' ಎಂಬ ಮತ್ತೊಂದು ಚಿತ್ರಕ್ಕೂ ಟ್ಯೂನ್ ಹಾಕಿದ್ದರು. ಈ ವರ್ಷದ ಟಾಪ್-5 ಕನ್ನಡ ಸಂಗೀತ ನಿರ್ದೇಶಕ ಪಟ್ಟಿಯಲ್ಲಿ ಚರಣ್ 4ನೇ ಸ್ಥಾನದಲ್ಲಿದ್ದಾರೆ.

ರವಿ ಬಸ್ರೂರು
ಕೆಜಿಎಫ್ ಸಿನಿಮಾ ಖ್ಯಾತಿಯ ರವಿಬಸ್ರೂರು ಇದೀಗ ಪರಭಾಷಾ ಸಿನಿಮಾಗಳಿಗೂ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬೇರೆ ಭಾಷೆಯ ಮಾಸ್ ಸಿನಿಮಾಗಳಿಗೆ ರೀ ರೆಕಾರ್ಡಿಂಗ್ ಮಾಡುತ್ತಿದ್ದಾರೆ. 'ಭೈರತಿ ರಣಗಲ್' ಚಿತ್ರಕ್ಕೆ ಟ್ಯೂನ್ ಹಾಕಿ ರವಿ ಗೆದ್ದರು. ಜೊತೆಗೆ ಬಾಲಿವುಡ್‌ನ 'ಸಿಂಗಂ ಅಗೇನ್', ತೆಲುಗಿನ 'ಭೀಮ' ಹಾಗೂ 'ಜೀಬ್ರಾ' ಸೇರಿ ಕೆಲ ಚಿತ್ರಗಳಿಗೆ ಬಿಜಿಎಂ ಕೊಟ್ಟು ಸದ್ದು ಮಾಡಿದರು.
ಅರ್ಜುನ್ ಜನ್ಯಾ
ಈ ವರ್ಷ 'ಉಪಾಧ್ಯಕ್ಷ', 'ಕೃಷ್ಣಂ ಪ್ರಣಯ ಸಖಿ', 'ಘೋಸ್ಟ್', 'ಮರ್ಫಿ' ಸೇರಿದಂತೆ ಹಲವು ಸಿನಿಮಾಗಳಿಗೆ ಅರ್ಜುನ್ ಜನ್ಯಾ ಟ್ಯೂನ್ ಹಾಕಿದ್ದರು. ಅದರಲ್ಲೂ 'ದ್ವಾಪರ ದಾಟುತ' ಸಾಂಗ್ ಸೂಪರ್ ಹಿಟ್ ಲಿಸ್ಟ್ ಸೇರಿದೆ. 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಸಕ್ಸಸ್‌ನಲ್ಲಿ ಈ ಹಾಡಿನ ಪಾಲು ದೊಡ್ಡದಿದೆ. ವರ್ಷದ ನಂಬರ್ -1 ಸಾಂಗ್ ಇದು.
ಅಜನೀಶ್ ಲೋಕನಾಥ್
ಈ ವರ್ಷದ ಕನ್ನಡದ ನಂಬರ್ -1 ಸಂಗೀತ ನಿರ್ದೇಶನ ಅಜನೀಶ್ ಲೋಕನಾಥ್. 'ಕಾಂತಾರ' ಚಿತ್ರದಿಂದ ಶುರುವಾದ ಅಜ್ಜು ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಈ ವರ್ಷ ಹೆಚ್ಚು ಸಿನಿಮಾಗಳಿಗೆ ಮಾತ್ರವಲ್ಲ, ಹಿಟ್ ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿ ಅವರು ಸದ್ದು ಮಾಡುತ್ತಿದ್ದಾರೆ. 'ಯುವ' ಚಿತ್ರದ ಆಲ್ಬಮ್‌ನಿಂದ ವರ್ಷದ ಆರಂಭದಲ್ಲೇ ಗಮನ ಸೆಳೆದರು. ಬಳಿಕ ಸೂಪರ್ ಹಿಟ್ 'ಬಘೀರ' ಚಿತ್ರಕ್ಕೂ ಮ್ಯೂಸಿಕ್ ಮಾಡಿದ್ದರು. ತೆಲುಗಿನ 'ಪುಷ್ಪ'-2 ಚಿತ್ರದ ಹಿನ್ನೆಲೆ ಸಂಗೀತಕ್ಕೂ ಸಹಾಯ ಮಾಡಿದ್ದಾರೆ. ಇದೀಗ ಬಿಡುಗಡೆಗೆ ಸಜ್ಜಾಗಿರುವ 'ಯುಐ' ಹಾಗೂ 'ಮ್ಯಾಕ್ಸ್' ಚಿತ್ರಗಳಲ್ಲಿ ಕೂಡ ಅಜ್ಜು ಸಂಗೀತ ಸದ್ದು ಮಾಡುತ್ತಿದೆ.


Click it and Unblock the Notifications











