ಸಂಗೀತ ಲೋಕದಲ್ಲಿ ಮಹಾಕುಂಭದ ಮೊನಾಲಿಸಾ ಸಂಚಲನ ; ರೊಮ್ಯಾಂಟಿಕ್ ಸಾಂಗ್‌ನಲ್ಲಿ ನೀಲಿ ಕಂಗಳ ವೈರಲ್ ಚೆಲುವೆ
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ತಮ್ಮ ಮನಮೋಹಕ ಕಣ್ಣುಗಳಿಂದನೇ ಎಲ್ಲರನ್ನು ಸೆಳೆದವರು ಮೊನಾಲಿಸಾ ಭೋಸಲೆ. ಮಣಿ ಸರ ಮಾರುತ್ತ ತನ್ನಷ್ಟಕ್ಕೆ ತಾನು ಇದ್ದ ಈ ಚೆಲುವೆಯ ಬದುಕನ್ನು ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಬದಲಿಸಿದ ಹೆಗ್ಗಳಿಕೆ ಸಾಮಾಜಿಕ ಜಾಲತಾಣದ್ದು. ಇವತ್ತು ಮೊನಾಲಿಸಾ ಕೈಯಲ್ಲಿ ಮಣಿ ಸರ ಇಲ್ಲ. ಹೂವು ಕೂಡ ಇಲ್ಲ.
ಅದೆಲ್ಲವನ್ನೂ ಮಾರುವ ಅವಶ್ಯಕತೆಯಾಗಲಿ.. ಅನಿವಾರ್ಯತೆಯಾಗಲಿ.. ಸದ್ಯ ಮೊನಾಲಿಸಾಗೆ ಇದ್ದಂತೆ ಇಲ್ಲ. ಯಾಕೆಂದರೆ.. ಮೊನಾಲಿಸಾ ಅದೃಷ್ಟ ಖುಲಾಯಿಸಿದೆ. ಅವತ್ತು ಮಹಾಕುಂಭ ಮೇಳದಲ್ಲಿ ಮೊನಾಲಿಸಾ ಕಣ್ಣಿಗೆ ಮರುಳಾಗಿ ಮನಸೋತ ಅನೇಕರು ಇಂದು ಮೊನಾಲಿಸಾ ಹೋದ ಕಡೆಯೆಲ್ಲಾ ಸಕ್ಕರೆಗೆ ಮುತ್ತಿಕೊಂಡ ಇರುವೆಯಂತೆ ಗುಂಪುಗುಂಪಾಗಿ ಮುತ್ತಿಕೊಳ್ಳುತ್ತಾರೆ.

ಮೊನಾಲಿಸಾ ಅವರ ಈ ಜನಪ್ರಿಯತೆಯಿಂದಾಗಿ ಬಣ್ಣದ ಲೋಕ ಕೂಡ ತನ್ನ ಹೆಬ್ಬಾಗಿಲನ್ನು ತೆರೆದಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಮೊನಾಲಿಸಾ ಈಗಾಗಲೇ ''ಸಾದಗಿ'' ಎಂಬ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ.. ಇವರ ಜನಪ್ರಿಯತೆಯನ್ನು ಎನ್ ಕ್ಯಾಶ್ ಮಾಡಿಕೊಂಡು ಸನೋಜ್ ಮಿಶ್ರಾ ಎಂಬ ವ್ಯಕ್ತಿ ''ದಿ ಡೈರಿ ಆಫ್ ಮಣಿಪುರ್'' ಎಂಬ ಚಿತ್ರವನ್ನು ಕೂಡ ಘೋಷಿಸಿದ್ದಾರೆ.
ಇಷ್ಟೇ ಅಲ್ಲ ಮಲಯಾಳಂನ ಸಿದ್ಧವಾಗುತ್ತಿರುವ ''ನಾಗಮ್ಮ'' ಚಿತ್ರಕ್ಕೂ ಕೂಡ ಮೊನಾಲಿಸಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದರ ನಡುವೆ ಈಗಾಗಲೇ ಮೊನಾಲಿಸಾ ಅವರನ್ನು ತಮ್ಮ ಆಲ್ಬಂ ಹಾಡುಗಳಿಗೆ ಹಲವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಈಗಾಗಲೇ ''ಸಾದಗಿ'' ಎಂಬ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷದ ಜೂನ್‌ನಲ್ಲಿ ಈ ಹಾಡು ಬಿಡುಗಡೆಯಾಗಿ ಸದ್ದನ್ನು ಕೂಡ ಮಾಡಿದೆ. ಈಗ ''ದಿಲ್ ಜಾನಿಯಾ'' ಸರದಿ.
ಹೌದು, ''ದಿಲ್ ಜಾನಿಯಾ''.. ಮೊನಾಲಿಸಾ ಅವರ ಎರಡನೇ ಆಲ್ಬಂ ಸಾಂಗ್. ಎರಡು ದಿನಗಳ ಹಿಂದೆಯಷ್ಟೇ ಬಿಡುಗಡೆಯಾದ ಈ ರೊಮ್ಯಾಂಟಿಕ್ ಹಾಡು ಸದ್ಯ ಸದ್ದು ಮಾಡುತ್ತಿದೆ. ಸಂಗೀತ ಲೋಕದಲ್ಲಿ ಎಲ್ಲರ ಗಮನವನ್ನು ಕೂಡ ಸೆಳೆಯುತ್ತಿದೆ. ನೋಡುಗರ ಚಿತ್ತ ಕದಿಯುತ್ತಿದೆ.
ಇದಕ್ಕೆ ಪುರಾವೆ ಎನ್ನುವಂತೆ ಪ್ರಖ್ಯಾತ ಸಂಸ್ಥೆಗಳಲ್ಲಿ ಒಂದಾದ ''ವೀನಸ್ ಓರಿಜಿನಲ್ಸ್'' ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ಈ ಹಾಡನ್ನು ಎರಡು ದಿನದಲ್ಲಿ 764,677ಕ್ಕೂ ಅಧಿಕ ಜನ ನೋಡಿದ್ದಾರೆ. ಹಾಡು ನೋಡಿ 1700ಕ್ಕೂ ಅಧಿಕ ಜನ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹಾಡು ಕಣ್ತುಂಬಿಕೊಂಡ ಹಲವರು ಮೊನಾಲಿಸಾ ಅವರಿಗೆ ಮತ್ತೊಮ್ಮೆ ಮನ ಸೋತಿದ್ದಾರೆ. ಪ್ರಶಂಸೆ ಮಾಡುತ್ತಿದ್ದಾರೆ. ಬಡವರ ಮಕ್ಕಳು ಬೆಳಿಬೇಕು ಎನ್ನುವ ಮಾತಿಗೆ ಮೊನಾಲಿಸಾ ಅವರ ಈ ಬೆಳವಣಿಗೆಯೇ ಅತ್ಯುತ್ತಮ ಸಾಕ್ಷಿ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಬಡವರ ಮಕ್ಕಳಿಗೆ ಆಕ್ಟಿಂಗ್ ಬರುವುದಿಲ್ಲ ಎಂಬ ತಪ್ಪು ಕಲ್ಪನೆ ಇನ್ನಾದರೂ ದೂರವಾಗಲಿ ಎಂದಿದ್ದಾರೆ. ವ್ಹಾ ಎಷ್ಟು ಸುಂದರವಾಗಿ ಕಾಣಿಸುತ್ತಿದ್ದಾರೆ.. ಮುದ್ದಾಗಿ ಕಾಣಿಸುತ್ತಿದ್ದಾರೆ.. ಅಭಿನಯದ ಮುಖದ ಹಾವ ಭಾವ ಎಲ್ಲವೂ ಸೊಗಸಾಗಿದೆ.. ಯಾವ ಬಾಲಿವುಡ್ ನಾಯಕಿಯರಿಗಿಂತ ಕಡಿಮೆ ಇಲ್ಲ.. ಎಂದೆಲ್ಲಾ ಕಾಮೆಂಟ್ ಸೆಕ್ಷನ್ ಮೂಲಕ ತಮ್ಮ ಮನದ ಮಾತುಗಳನ್ನು ಹಂಚಿಕೊಳ್ತಿದ್ದಾರೆ. ಮೊನಾಲಿಸಾ ಇನ್ನು ಹೆಚ್ಚೆಚ್ಚು ಅವಕಾಶಗಳು ಸಿಗುವಂತಾಗಲಿ ಎಂದು ಆಶಿಸುತ್ತಿದ್ದಾರೆ.
ಅಂದ್ಹಾಗೇ ಸಮರ್ಥ್ ಮೆಹ್ತಾ ಇಲ್ಲಿ ಮೊನಾಲಿಸಾ ಅವರ ಪ್ರಿಯಕರನ ಪಾತ್ರವನ್ನು ನಿರ್ವಹಿಸಿದ್ದಾರೆ. ರಿಧಮ್ ಸಂಧ್ಯಾ ಈ ಹಾಡನ್ನು ನಿರ್ದೇಶನ ಮಾಡಿದ್ದು ಹನಿಮನಿ ಪ್ರೊಡಕ್ಷನ್ ಹೌಸ್ ಬಂಡವಾಳ ಹೂಡಿದೆ. ರಾಜಾ ಹರ್ಭಜನ್ ಸಿಂಗ್ ಸಂಗೀತವನ್ನು ನೀಡಿದ್ದು ಗಗನ್‌ದೀಪ್ ಲೇಖನಿಯಿಂದ ಈ ಹಾಡು ಹೊರ ಹೊಮ್ಮಿದೆ. ಸದ್ಯ ಈ ಹಾಡು ಯೂಟ್ಯೂಬ್ ಮಾತ್ರವಲ್ಲದೇ ಸೋಶಿಯಲ್ ಮೀಡಿಯಾದ ಬೇರೆ ಬೇರೆ ವೇದಿಕೆಗಳಲ್ಲಿ ಕೂಡ ಸದ್ದು ಮಾಡುತ್ತಿದ್ದು ಮೊನಾಲಿಸಾ ಬಾಲಿವುಡ್‌ನ ನಾಯಕಿಯಾಗ್ತಾರಾ..? ಬಣ್ಣದ ಪ್ರಪಂಚದಲ್ಲಿ ಮಿಂಚ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











