Ganesh Chaturthi 2023: ಗಣೇಶ ಆರ್ಕೆಸ್ಟ್ರಾಗಳಲ್ಲಿ ಈ ಕನ್ನಡ ಹಾಡುಗಳು ಮಿಸ್ ಆಗುವುದೇ ಇಲ್ಲ!

ದೇಶದೆಲ್ಲಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆಮಾಡಿದೆ. ಈಗಾಗಲೇ ಕೆಲವರು ವಿಘ್ನ ನಿವಾರಕನನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದಾರೆ. ಕೆಲವರು ನಾಳೆ(ಸೆಪ್ಟೆಂಬರ್ 19) ಗಜಮುಖನ ಆರಾಧನೆಗೆ ಸಿದ್ಧತೆ ನಡೆಸಿದ್ದಾರೆ. ಗೌರಿ ಹಬ್ಬದ ಸಡಗರವೂ ಜೋರಾಗಿದೆ.

ಗಣೇಶ ಹಬ್ಬ ಅಂದಮೇಲೆ ಜನ ಬೀದಿ ಬೀದಿಯಲ್ಲಿ ಪೆಂಡಾಲ್ ಹಾಕಿ, ದೀಪಾಲಂಕಾರ ಮಾಡಿ ಸ್ಪೀಕರ್ ಕಟ್ಟಿ ಹಾಕಿ ಸಂಭ್ರಮಿಸುತ್ತಾರೆ. ಗಣೇಶನ ಕುರಿತು ಸಾಕಷ್ಟು ಭಕ್ತಿಗೀತೆಗಳಿವೆ. ಇನ್ನು ಸಿನಿಮಾಗಳಲ್ಲೂ ಗೌರಿ ತನಯನ ಭಜನೆ ನಡೆದಿದೆ. ಭಕ್ತಿ ಪರವಶರಾಗುವಂತಹ ಹಾಡುಗಳ ಜೊತೆಗೆ ಬಿಂದಾಸ್ ಆಗಿ ಕುಣಿದು ಕುಪ್ಪಳಿಸುವಂತಹ ವಿನಾಯಕನ ಹಾಡುಗಳು ಕನ್ನಡ ಸಿನಿಮಾಗಳಲ್ಲಿ ಜಾಗ ಮಾಡಿಕೊಂಡಿವೆ.

ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಗಣೇಶ ಹಬ್ಬದಲ್ಲಿ ಹಾಡು, ಕುಣಿತ, ಜೈಕಾರ ಜೋರಾಗಿರುತ್ತದೆ. ಇನ್ನು ಆರ್ಕೆಸ್ಟ್ರಾ ಸದ್ದು ಗದ್ದಲ ಕೂಡ ಜೋರಾಗಿರುತ್ತದೆ. ಹಬ್ಬಕ್ಕೆ 2 ತಿಂಗಳು ಮೊದಲೇ ಆರ್ಕೆಸ್ಟ್ರಾ ಬುಕ್ಕಿಂಗ್ ಶುರುವಾಗಿಬಿಡುತ್ತದೆ. ಇನ್ನು ಗಣೇಶನ ಆರ್ಕೆಸ್ಟ್ರಾಗಳಲ್ಲಿ ಮಿಸ್ ಆಗದ ಹಾಡುಗಳ ಲಿಸ್ಟ್ ಇಲ್ಲಿದೆ ನೋಡಿ.

Ganesh Chaturthi 2023: this Kannada movie songs wont miss in orchestras

'ವಕ್ರತುಂಡ ಮಹಾಕಾಯ'

ಎಲ್ಲಾ ಆರ್ಕೆಸ್ಟ್ರಾಗಳು ಗಣೇಶನ ಸ್ತುತಿಯೊಂದಿಗೆ ಆರಂಭವಾಗುತ್ತದೆ. ಮುಂದೆ ಮುಂದೆ ಹೋಗ್ತಾ ಹೋಗ್ತಾ ಕ್ಯಾಬರೆ ಹಾಡುಗಳು ನುಸುಳಿಬಿಡುತ್ತದೆ. ಒಂದಷ್ಟು ಹಾಡುಗಳನ್ನು ಎಲ್ಲಾ ಆರ್ಕೆಸ್ಟ್ರಾ ತಂಡದವರು ತಪ್ಪದೇ ಹಾಡುತ್ತಾರೆ. ಇನ್ನು ಕೆಲವನ್ನು ಆಯಾ ಗಣೇಶ ಮಂಡಳಿಯವರು ಲಿಸ್ಟ್‌ ಮಾಡಿಕೊಡುತ್ತಾರೆ. ಕೊನೆಗೆ ವೇದಿಕೆ ಮುಂದೆ ನೆರೆದವರ ಒತ್ತಾಯದ ಮೇರೆಗೆ ಮತ್ತೊಂದಷ್ಟು ಹಾಡುಗಳನ್ನು ಗಾಯಕರು ಹಾಡುತ್ತಾರೆ. ಆದರೆ 'ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ' ಎಲ್ಲಾ ಆರ್ಕೆಸ್ಟ್ರಾಗಳ ಓಪನಿಂಗ್ ಗೀತೆ ಆಗಿರುತ್ತದೆ.

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬ್ಬೇಕು

ಅದು ರಾಜೋತ್ಸವ ಆಗಿರಲಿ, ಗಣೇಶೋತ್ಸವ ಇರಲಿ ಆಕಸ್ಮಿಕ ಚಿತ್ರದ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬ್ಬೇಕು' ಮಿಸ್ ಆಗುವಂತಿಲ್ಲ. ಆರ್ಕೆಸ್ಟ್ರಾಗಳಲ್ಲಿ ಹೆಚ್ಚು ಮಾಸ್ ಹಾಡುಗಳಿಗೆ ಆದ್ಯತೆ. ಸ್ಪೀಕರ್ ಬಾಕ್ಸ್‌ ಕಿತ್ತು ಹೋಗುವಂತ, ನೆರೆದವರ ಮೈ ರೋಮಾಂಚನವಾಗುವಂತಹ ಹಾಡುಗಳನ್ನು ಹೆಚ್ಚು ಹಾಡುತ್ತಾರೆ. ಆದರೆ ಒಂದು ಸಿನಿಮಾದಿಂದ ಒಂದೇ ಹಾಡು. ಕೆಲವೊಮ್ಮೆ ಎಷ್ಟೇ ಒತ್ತಾಯ ಮಾಡಿದರೂ ಕೆಲ ಹಾಡುಗಳನ್ನು ಹಾಡುವುದಿಲ್ಲ. ಅದು ಆರ್ಕೆಸ್ಟ್ರಾದವರ ಸೀಕ್ರೆಟ್.

ತಂಗಾಳಿಯಲ್ಲಿ ನಾನು ತೇಲಿ ಬಂದೆ

'ಜನ್ಮ ಜನ್ಮದ ಅನುಬಂಧ' ಚಿತ್ರದ ಸೂಪರ್ ಹಿಟ್ ಹೀತೆ 'ತಂಗಾಳಿಯಲ್ಲಿ ನಾನು ತೇಲಿ ಬಂದೆ'. ನಿಜ ಹೇಳಬೇಕು ಅಂದರೆ ಈ ಹಾಡು ಹೆಚ್ಚು ಜನಪ್ರಿಯವಾಗಿದ್ದೇ ಆರ್ಕೆಸ್ಟ್ರಾಗಳಿಂದ ಅಂದ್ರೆ ತಪ್ಪಾಗಲ್ಲ. ಕೆಲವೊಮ್ಮೆ ಈ ಹಾಡಿಗೆ ಚಿತ್ರ ವಿಚಿತ್ರದ ದೆವ್ವಗಳ ವೇಷದಲ್ಲಿ ಡ್ಯಾನ್ಸ್‌ ತಂಡ ಹೆಜ್ಜೆ ಕೂಡ ಹಾಕುತ್ತದೆ. ಇಂತಹ ದೆವ್ವದ ವೇಷಧಾರಿಗಳು ನೆರೆದವರ ನಡುವೆ ಓಡಾಡಿ ಮಕ್ಕಳನ್ನು ಹೆದರಿಸುವ ಕೆಲಸವನ್ನು ಮಾಡುತ್ತಾರೆ.

'ಹೃದಯ ಸಮುದ್ರ ಕಲಕಿ'

ಆರ್ಕೆಸ್ಟ್ರಾಗಳಲ್ಲಿ ಅಣ್ಣಾವ್ರು, ದಾದಾ, ಅಂಬಿ ಸಿನಿಮಾ ಗೀತೆಗಳದ್ದೆ ಸಿಂಹಪಾಲು. ಡಾ. ರಾಜ್‌ಕುಮಾರ್ ಹಾಡಿರುವ 'ಅಶ್ವಮೇಧ' ಚಿತ್ರದ 'ಹೃದಯ ಸಮುದ್ರ ಕಲಕಿ' ಕೂಡ ಗಣೇಶ ಆರ್ಕೆಸ್ಟ್ರಾಗಳಲ್ಲಿ ತಪ್ಪದೇ ಹಾಡುವಂತಹ ಇನ್ನೊಂದು ಗೀತೆ. ಸಂಗೀತ ರಾಜಾ ಮ್ಯೂಸಿಕ್ ಕಂಪೋಸ್ ಮಾಡಿದ್ದ ಈ ಹಾಡಿಗೆ ದೊಡ್ಡರಂಗೇಗೌಡರು ಸಾಹಿತ್ಯ ಬರೆದಿದ್ದಾರೆ. ಅಣ್ಣಾವ್ರ ದನಿಯಲ್ಲಿ ಈ ಹಾಡನ್ನು ಕೇಳೋದೇ ಚೆಂದ.

ಜೋಕೆ ನಾನು ಬಳ್ಳಿಯ ಮಿಂಚು

ಗಣೇಶ ಹಬ್ಬಕ್ಕೂ ಕ್ಯಾಬರೆಗೂ ಸಂಬಂಧವೇ ಇಲ್ಲದಿದ್ದರೂ ಆರ್ಕೆಸ್ಟ್ರಾಗಳಲ್ಲಿ ಇಂತಹ ಹಾಡುಗಳನ್ನು ಹಾಡುತ್ತಾರೆ, ಹಾಡಿಸುತ್ತಾರೆ. ತುಂಡು ತುಂಡು ಲಂಗ ತೊಟ್ಟು ಡ್ಯಾನ್ಸರ್ಸ್‌ ಹೆಜ್ಜೆ ಹಾಕುವುದು ಇದೆ. 70ರ ದಶಕದ 'ಪರೋಪಕಾರಿ' ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು ಕನ್ನಡದ ಎವರ್‌ಗ್ರೀನ್‌ ಸಾಂಗ್.

ಚಾಮುಂಡಿ ತಾಯಿಯಾಣೆ

'ಆಪ್ತಮಿತ್ರ' ಚಿತ್ರದ 'ರಾರಾ' ಹಾಗೂ 'ಆಪ್ತರಕ್ಷಕ' ಚಿತ್ರದ 'ಚಾಮುಂಡಿ ತಾಯಿಯಾಣೆ' ಹಾಡುಗಳನ್ನು ಎಲ್ಲಾ ಆರ್ಕೆಸ್ಟ್ರಾಗಳಲ್ಲಿ ಕೇಳಬಹುದು. ಮೊದಲೇ ಹೇಳಿದಂತೆ ಸೂಪರ್ ಹಿಟ್ ಸಿನಿಮಾ ಗೀತೆಗಳನ್ನೇ ಹೆಚ್ಚು ಹೆಚ್ಚು ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಾರೆ.

ಕುಚಿಕು ಕುಚಿಕು

ಹಂಸಲೇಖ ಸಂಗೀತ ಹಾಗೂ ಸಾಹಿತ್ಯದ 'ಕುಚಿಕು ಕುಚಿಕು' ಹಾಡನ್ನು ಎಲ್ಲಾ ಆರ್ಕೆಸ್ಟ್ರಾಗಳನ್ನು ಒತ್ತಾಯ ಮಾಡಿ ಹಾಡಿಸುತ್ತಾರೆ. ಕೆಲವೊಮ್ಮೆ ಗಣೇಶ ಮಂಡಳಿ ಯುವಕರಲ್ಲಿ ಕುಚಿಕು ಸ್ನೇಹಿತರು ವೇದಿಕೆ ಏರಿ ಈ ಹಾಡಿಗೆ ಕುಣಿಯೋದು ಇದೆ. ರೆಸ್ಪಾನ್ಸ್ ನೋಡಿ ಮತ್ತೊಮ್ಮೆ ಈ ಹಾಡನ್ನು ಹಾಡಿಸುವುದು ಇದೆ.

ಕುಲದಲ್ಲಿ ಕೀಳ್ಯಾವುದೋ

ಎಲ್ಲಾ ಆರ್ಕೆಸ್ಟ್ರಾಗಳು ಗಣೇಶನ ಸ್ತುತಿಯೊಂದಿಗೆ ಆರಂಭವಾದರೆ ಮುಗಿಯೋದು ಮಾತ್ರ ಕುಲದಲ್ಲಿ ಕೀಳ್ಯಾವುದೋ ಹಾಡಿನೊಂದಿಗೆ. ಇದರಲ್ಲಿ ಮಾತ್ರ ಯಾವುದೇ ಬದಲಾವಣೆ ಆಗುವುದಿಲ್ಲ. 'ಸತ್ಯಹರಿಶ್ಚಂದ್ರ' ಚಿತ್ರದ ಈ ಹಾಡಿನೊಂದಿಗೆ ಆರ್ಕೆಸ್ಟ್ರಾಗಳು ಸಮಾಪ್ತಿಯಾಗುತ್ತದೆ. ಈ ಹಾಡಿಗೆ ಹುಡುಗರೆಲ್ಲಾ ವೇದಿಕೆ ಏರಿ ಕುಣಿದು ಕುಪ್ಪಳಿಸುತ್ತಾರೆ. ಅದೇ ಕೊನೆ. ಮತ್ತೆ ಮುಂದಿನ ವರ್ಷ 'ವಕ್ರತುಂಡ ಮಹಾಕಾಯ' ಹಾಡಿನೊಂದಿಗೆ ಆರ್ಕೆಸ್ಟ್ರಾ ಆರಂಭವಾಗುತ್ತದೆ.

More from Filmibeat

English summary
Ganesh Chaturthi top Kannada movie songs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X