ಗಣೇಶ್ ಸಿನಿಮಾ ಸಾಂಗ್ ಚಿಂದಿ; ಗೋಲ್ಡನ್ ಮೂವಿ 'ಕೃಷ್ಣಂ ಪ್ರಣಯ ಸಖಿ' ರಿಲೀಸ್ ಯಾವಾಗ?
ಗೋಲ್ಡನ್ ಸ್ಟಾರ್ ಗಣೇಶ್ ಮತ್ತೊಂದು ಫ್ಯಾಮಿಲಿ ಸಬ್ಜೆಕ್ಟ್ ಜೊತೆ ಸಿನಿಪ್ರಿಯರನ್ನು ಸೆಳೆಯುವುದಕ್ಕೆ ಹೊರಟಿದ್ದಾರೆ. ಈಗಾಗಲೇ ಆ ಸಿನಿಮಾದ ಭರ್ಜರಿ ಪ್ರಚಾರ ಕೂಡ ಆರಂಭ ಆಗಿದೆ. ಅದುವೇ 'ಕೃಷ್ಣಂ ಪ್ರಣಯ ಸಖಿ'. 'ಬಾನದಾರಿಯಲಿ' ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿರುವ ಅದ್ಧೂರಿ ಸಿನಿಮಾವಿದು.
ಗಣೇಶ್ ಸಿನಿಮಾ ಅಂದ್ಮೇಲೆ ಅಲ್ಲೊಂದು ಲವ್ ಸ್ಟೋರಿ ಇರಬೇಕು. ಅದರೊಳಗೊಂದು ಫ್ಯಾಮಿಲಿ ಕಥೆ ಹೇಳಬೇಕು. ಆಗಾಗ ಕಾಮಿಡಿ ಮಾಡುತ್ತಿರಬೇಕು. ಟೈಮ್ ಸಿಕ್ಕಾಗಲೆಲ್ಲ ಅಳಿಸುತ್ತಲೇ ಇರಬೇಕು. 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಕೂಡ ಈ ಎಲ್ಲಾ ಎಲಿಮೆಂಟ್‌ಗಳನ್ನು ಹೊತ್ತು ಬರುತ್ತಿದೆ ಅಂತ ಸಿನಿಮಾ ತಂಡವೇ ಹೇಳಿಕೊಂಡಿದೆ.

ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, 'ದಂಡುಪಾಳ್ಯ'ದಂತಹ ರಗಡ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಶ್ರೀನಿವಾಸರಾಜು ಕೌಟುಂಬಿಕ ಕಥೆಯ ಕಡೆಗೆ ವಾಲಿದ್ದಾರೆ. ಈ ಕಾರಣಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೈ ಜೋಡಿಸಿದ್ದಾರೆ. ಇದು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶ್ರೀನಿವಾಸ್ ರಾಜು ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ.
ತ್ರಿಶೂಲ್ ಎಂಟರ್ಟೈನ್ಮೆಂಟ್ ಬ್ಯಾನರ್‌ನಿಂದ ಪ್ರಶಾಂತ್ ಜಿ ರುದ್ರಪ್ಪ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗಷ್ಟೇ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ "ಚಿನ್ನಮ್ಮ" ಹಾಡನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡಲಾಗಿದೆ. ಕವಿರಾಜ್ ಹಾಗೂ ಅರ್ಜುನ್ ಜನ್ಯ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರೋ ಈ ಹಾಡು ಈಗಾಗಲೇ ಸಂಗೀತ ಪ್ರಿಯರಿಗೆ ಕಿಕ್ ಕೊಡುತ್ತಿದೆ.
ಅಂದ್ಹಾಗೆ, 'ಕೃಷ್ಣಂ ಪ್ರಣಯ ಸಖಿ' ಸಿನಿಮಾವನ್ನು ಆಗಸ್ಟ್ 15 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಈ ಸಿನಿಮಾದಲ್ಲಿ ಗಣೇಶ್ ಜೊತೆಗೆ ಸುಪ್ರೀಂ ಹೀರೋ ಶಶಿಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ವಿಶೇಷ ಅತಿಥಿಯಾಗಿ ಬಂದಿದ್ದ ಶಶಿಕುಮಾರ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡನ್ನು ವೀಕ್ಷಿಸಬಹುದು.
"ನಮ್ಮ ಚಿತ್ರದಲ್ಲಿ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜಿಸಿರುವ ಒಟ್ಟು ಏಳು ಹಾಡುಗಳಿವೆ. ಆ ಪೈಕಿ ಎರಡನೇ ಹಾಡು ಇಂದು ಬಿಡುಗಡೆಯಾಗಿದೆ. ಮೈಸೂರಿನಲ್ಲಿ ಬಿಡುಗಡೆಯಾದ ಮೊದಲ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಈ ಚಿನ್ನಮ್ಮ ಹಾಡು ಕೂಡ ಎಲ್ಲರಿಗೂ ಪ್ರಿಯವಾಗಲಿದೆ" ಎಂದು ನಿರ್ದೇಶಕ ಶ್ರೀನಿವಾಸರಾಜು ಮಾಹಿತಿ ಹಂಚಿಕೊಂಡಿದ್ದಾರೆ.
ಹಾಗೆಯೇ "ನಾನು ಬಹಳ ಇಷ್ಟಪಡುವ ಗೀತರಚನೆಕಾರರಾದ ಕವಿರಾಜ್ ಅವರು ಬರೆದಿರುವ "ಚಿನ್ನಮ್ಮ" ಹಾಡು ತುಂಬಾ ಚೆನ್ನಾಗಿದೆ. ಅರ್ಜುನ್ ಜನ್ಯ ಅವರ ಸಂಗೀತ, ಕೈಲಾಶ್ ಖೇರ್ ಹಾಗೂ ಇಂದು ನಾಗರಾಜ್ ಅವರ ಗಾಯನ ಮತ್ತು ಶೇಖರ್ ಮಾಸ್ಟರ್ ಅವರ ನೃತ್ಯ ನಿರ್ದೇಶನ ಹಾಗೂ ವೆಂಕಟ್ ರಾಮಪ್ರಸಾದ್ ಅವರ ಛಾಯಾಗ್ರಹಣ ಎಲ್ಲವೂ ಸೊಗಸಾಗಿದೆ. ಈ ಹಾಡು ಚಿತ್ರೀಕರಣವಾದ ಜಾಗ ಕೂಡ ಅದ್ಭುತವಾಗಿದೆ. ಈ ಚಿತ್ರದಲ್ಲಿ ಹಿರಿಯ ನಟ ಶಶಿಕುಮಾರ್ ಅವರ ಜೊತೆ ನಟಿಸಿದ್ದು ಖುಷಿಯಾಗಿದೆ" ಎಂದರು ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದಾರೆ.
ಇನ್ನು 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಸಿನಿಮಾ. ಇಲ್ಲಿ ಗಣೇಶ್‌ಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ರೆ, ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನಾ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ಸಿನಿಮಾದಲ್ಲಿದ್ದಾರೆ.


Click it and Unblock the Notifications











