'ಇದು ಬ್ಯಾರೆನೆ ಐತಿ': ಚುಟು ಚುಟು ನಂತರ ಮತ್ತೊಂದು ಜವಾರಿ ಹಾಡು
ಒಂದು ಕಡೆ ಚುಟು ಚುಟು ಹಾಡು ಯೂ ಟ್ಯೂಬ್ ನಲ್ಲಿ 100 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಇತ್ತ ಇದೇ ಮಾದರಿಯ ಹಾಡೊಂದು ಬಿಡುಗಡೆಯಾಗಿದೆ. ಆ ಹಾಡೇ 'ಇದು ಬ್ಯಾರೆನೆ ಐತಿ'.
'ಗೋರಿ' ಸಿನಿಮಾದ ವಿಡಿಯೋ ಹಾಡೊಂದು ಇದೀಗ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಪಕ್ಕಾ ಜವಾರಿ ಹಾಡು ಇದಾಗಿದ್ದು, ಹಾವೇರಿ ಭಾಗದಲ್ಲಿ ಹಾಡು ದೊಡ್ಡ ಹಿಟ್ ಆಗಿದೆ. ಹೊಸ ಹುಡುಗರ ಈ ಸಿನಿಮಾದ ಹಾಡು ಮೂರು ದಿನದಲ್ಲಿ 11 ಸಾವಿರ ಹಿಟ್ಸ್ ಪಡೆದುಕೊಂಡು ಮುನ್ನುತ್ತಿದೆ.
ವಿನು ಮನಸ್ ಹಾಡಿಗೆ ಸಂಗೀತ ನೀಡಿದ್ದಾರೆ. ಶಿವು ಬೇರ್ಗಿ ಹಾಡಿಗೆ ಸಾಹಿತ್ಯ ಬರೆದಿದ್ದು, ರವೀಂದ್ರ ಸೊರಗಾವಿ ಹಾಡಿಗೆ ಧ್ವನಿ ನೀಡಿದ್ದಾರೆ. 'ಚುಟು ಚುಟು..' ಹಾಡು ಬರೆದ ಗಾಯಕ ಹಾಗೂ ಗೀತರಚನೆಗಾರೇ ಇಲ್ಲಿಯೂ ಒಂದಾಗಿರುವುದು ವಿಶೇಷವಾಗಿದೆ.

ನಟ ಕಿರಣ್ ಹಾಗೂ ನಟಿ ಶ್ವೇತ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಗೋಪಾಲ ಕೃಷ್ಣ ಚಿತ್ರದ ನಿರ್ದೇಶನ ಮಾಡಿದ್ದು, ಹಾವೇರಿ ಟಾಕೀಸ್ ನಲ್ಲಿ ನಿರ್ಮಾಣವಾಗಿದೆ. ಸಿನಿಮಾದಲ್ಲಿ ನಾಲ್ಕು ಹಾಡುಗಳು ಇದ್ದು, ಉಳಿದ ಹಾಡುಗಳನ್ನು ಕೆ ಕಲ್ಯಾಣ್ ಹಾಗೂ ಎಂ ಹೆಚ್ ಜಗ್ಗೀನ್ ಬರೆದಿದ್ದಾರೆ.
ಕಿರಣ್ ಮೊದಲ ಬಾರಿಗೆ ಹೀರೋ ಆಗಿ ಕಾಣಿಸಿಕೊಂಡಿದ್ದು, ಇಡೀ ತಂಡ ಕಷ್ಟಪಟ್ಟು ಸಿನಿಮಾ ಮಾಡಿದೆ. ಅಂದಹಾಗೆ, ಮುಂದಿನ ತಿಂಗಳು 'ಗೋರಿ' ಚಿತ್ರವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.


Click it and Unblock the Notifications











