ಇಂದ್ರಜಿತ್ ಲಂಕೇಶ್ ಮಗನ ಜೊತೆ ತಯ್ಯಾತಕ್ಕ ಕುಣಿದ ಶ್ರೇಯಾಂಕ ಪಾಟೀಲ್..!
ತಮ್ಮ ತಂದೆಯ ಜೊತೆ ಕ್ರಿಕೆಟ್ ಮೈದಾನಕ್ಕೆ ತೆರಳಿ ಸುಮ್ನೆ ಬಾಲ್ ಎಸೆಯುತ್ತಿದ್ದವರು ಶ್ರೇಯಾಂಕ ಪಾಟೀಲ್. ಆದರೆ ಆ ನಂತರ ನಡೆದಿದ್ದು ಪವಾಡ. ಇವತ್ತು ಶ್ರೇಯಾಂಕ ಹೆಸರಿಗೆ ಚಿನ್ನದ ಬೆಲೆ ಇದೆ. ಶ್ರೇಯಾಂಕ ಪಾಟೀಲ್ ಅಭಿಮಾನಿ ಬಳಗ ಕೂಡ ದೊಡ್ಡದಿದೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ತನ್ನದೇ ಆದ ಛಾಪು ಮೂಡಿಸಿ, ಕನ್ನಡದ ಕೀರ್ತಿ ಪತಾಕೆಯನ್ನ ವಿಶ್ವದೆಲ್ಲೆಡೆ ಪಸರಿಸುತ್ತಿರುವ ಶ್ರೇಯಾಂಕ ಪಾಟೀಲ್, ಕೇವಲ ಕ್ರಿಕೆಟ್ ಪ್ರೇಮಿಯಷ್ಟೇ ಅಲ್ಲ ಬದಲಿಗೆ ಸಿನಿಮಾ ಪ್ರೇಮಿಯೂ ಹೌದು. ಅದರಲ್ಲಿಯೂ ಕನ್ನಡ ಸಿನಿಮಾ ಅಂದರೆ ಕಲ್ಭುರ್ಗಿಯ ಕೋಳಕೂರಿನ ಶ್ರೇಯಾಂಕಗೆ ಅಚ್ಚು ಮೆಚ್ಚು. ಇದಕ್ಕೆ ಕೈಗನ್ನಡಿ ಎಂಬಂತೆ ಶ್ರೇಯಾಂಕ ಪಾಟೀಲ್ ಐ ಲವ್ ಯೂ ಸಮಂತಾ ಅಂದಿದ್ದಾರೆ. ಅಚ್ಚ ಕನ್ನಡದ ಸ್ವಚ್ಚ ಸಿನಿಮಾ ಗೌರಿ ಚಿತ್ರದ ಹಾಡನ್ನ ತುಂಬು ಅಭಿಮಾನದಿಂದ ಬಿಡುಗಡೆ ಮಾಡಿದ್ದಾರೆ.

ಹೌದು. ಗೌರಿ.. ಇಂದ್ರಜಿತ್ ಲಂಕೇಶ್ ನಿರ್ದೇಶನದ ಸಿನಿಮಾ. ಒಂದೇ ಥರದ ಪ್ರಚಾರಗಳೇ ತುಂಬಿ ಹೋಗಿರುವ ಸ್ಯಾಂಡಲ್ವುಡ್ನಲ್ಲಿ ಹೊಸ ಹೊಸ ಆವಿಷ್ಕಾರ ಮಾಡ್ತಾನೇ ಬಂದಿರುವ ಇಂದ್ರಜಿತ್ ಮೊನ್ನೆ ತಮ್ಮ ಕನಸಿನ ಗೌರಿ ಚಿತ್ರದ ಹಾಡೊಂದನ್ನ ಬಿಡುಗಡೆ ಮಾಡಲು, ಶ್ರೇಯಾಂಕ ಪಾಟೀಲ್ ಅವರನ್ನ ಕರೆತಂದಿದ್ದರು. ಮೈಸೂರಿನ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶ್ರೇಯಾಂಕ ಅವರಿಂದ ಹಾಡನ್ನ ಬಿಡುಗಡೆಗೊಳಿಸುವ ಮೂಲಕ ತರುಣ ತರುಣಿಯರನ್ನು ಹುಚ್ಚೆಬ್ಬಿಸಿದರು.
ಇನ್ನೂ.. ಇದು ಶ್ರೇಯಾಂಕಗೆ ಮೊದಲ ಸಿನಿಮಾ ಸಮಾರಂಭ. ಅದರಲ್ಲಿಯೂ ಕಣ್ಮುಂದೆ ಉತ್ಸಾಹಿ ಯುವಕ ಯುವತಿಯರ ಗುಂಪು ಇದ್ದಾಗ, ಉತ್ಸಾಹ ಇನ್ನೂ ಹೆಚ್ಚಾಗುತ್ತೆ. ಶ್ರೇಯಾಂಕಗೆ ಆಗಿದ್ದು ಕೂಡ ಇದೆ. ಹೀಗಾಗಿಯೇ ಹಾಡು ಬಿಡುಗಡೆ ಮಾಡಿದ ನಂತರ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಜೊತೆ ಶ್ರೇಯಾಂಕ ಡ್ಯಾನ್ಸ್ ಮಾಡಿದರು. ಹಾಡಿಗೆ ತಪ್ಪಾಗುಂಚಿ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಕೇವಲ ಡ್ಯಾನ್ಸ್ ಅಷ್ಟೇ ಅಲ್ಲ ಯುವ ಸಮೂಹದ ಅಪೇಕ್ಷೆಯ ಮೇರೆಗೆ ಸಮರ್ಜಿತ್ ಜೊತೆ ಕ್ರಿಕೆಟ್ ಆಡಿ ಶ್ರೇಯಾಂಕ ಸಂಭ್ರಮಿಸಿದರು. ಸಮರ್ಜಿತ್ ಬೌಲಿಂಗ್ ಗೆ ಬ್ಯಾಟ್ ಬೀಸಿ ಅಲ್ಲಿದ್ದ ವಿದ್ಯಾರ್ಥಿಗಳನ್ನು ರಂಜಿಸಿದರು. ಇಷ್ಟೇ ಅಲ್ಲ ಬಾಲ್ ಹಿಡಿದ ವಿದ್ಯಾರ್ಥಿಗಳಿಗೆ ಆಟೋಗ್ರಾಫ್ ಸಹ ನೀಡಿದರು ಆರ್ ಸಿ ಬಿ ಆಲ್ರೌಂಡರ್.
ಅಂದ್ಹಾಗೇ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಇಂದ್ರಜಿತ್ ಕಾಣಿಸಿಕೊಂಡರು ಅಂದರೆ, ಅಲ್ಲಿ ಏನೋ ಹೊಸತನ, ಯಾರೂ ಮಾಡದ ಸಾಹಸ, ಟ್ರೆಂಡ್ಗಳು ಸೃಷ್ಟಿಯಾಗುತ್ತವೆ ಎಂಬ ಮಾತು ಇದೆ. ಇದಕ್ಕೆ ಪೂರಕವಾಗಿ ಗೌರಿ ಮೊದಲಿಂದ ಸದ್ದು ಮಾಡ್ತಾನೇ ಬಂದಿದೆ.

ಸದ್ಯ ಇಂದ್ರಜಿತ್ ಲಂಕೇಶ್ ತಮ್ಮ ಮಗ ಸಮರ್ಜಿತ್ ಅವರನ್ನು ಈ ಚಿತ್ರದ ಮೂಲಕ ಲಾಂಚ್ ಮಾಡುತ್ತಿದ್ದಾರೆ. ಸಾನ್ಯಾ ಅಯ್ಯರ್ ಈ ಚಿತ್ರದಲ್ಲಿ ನಾಯಕಿ ಪಾತ್ರವನ್ನ ನಿರ್ವಹಿಸಿದ್ದಾರೆ ಅನ್ನುವುದು ನಿಮಗೆ ಗೊತ್ತಿರಲಿ
ಒಟ್ನಲ್ಲಿ ತಮ್ಮ ಕ್ರಿಯೆಟಿವ್ ಐಡಿಯಾಗಳಿಂದನೇ ಕಾಲ..ಕಾಲಕ್ಕೆ.. ಎಲ್ಲರ ಚಿತ್ತ ಕದಿಯುವ ಇಂದ್ರಜಿತ್ ಲಂಕೇಶ್ ʻಗೌರಿʼ ಸಿನಿಮಾ ಬಿಡುಗಡೆಯ ಹೊತ್ತಿಗೆ ಇನ್ನೂ ಏನೇನು ಕ್ರೇಜ್ ಕ್ರಿಯೇಟ್ ಮಾಡುತ್ತಾರೋ ಅನ್ನುವುದನ್ನ ಕಾದು ನೋಡಬೇಕು...


Click it and Unblock the Notifications











