twitter
    For Quick Alerts
    ALLOW NOTIFICATIONS  
    For Daily Alerts

    ರ್‍ಯಾಪ್ ಸಂಗೀತವೆಂಬ ಕಡೆಯದ ಮಜ್ಜಿಗೆ: ಪೂರ್ವಾಗ್ರಹ ಬಿಟ್ಟು ನೋಡಿ

    |

    ರ್‍ಯಾಪ್ ಸಂಗೀತ ಒಳಗಾದಷ್ಟು ಟೀಕೆ, ಮೂದಲಿಕೆಗಳಿಗೆ ಸಂಗೀತದ ಇನ್ಯಾವ ಮಾದರಿಗಳೂ ಒಳಗಾಗಿಲ್ಲ. ಕೆಲವರದ್ದು ಸಕಾರಣ ಟೀಕೆಯಾದರೆ ಹಲವರದ್ದು ಪೂರ್ವಾಗ್ರಹ ಪೀಡಿತ. ಮಜ್ಜಿಗೆಯನ್ನು ಕಡೆಯದೇ ಬೆಣ್ಣೆ ಇಲ್ಲವೆಂದು ದೂಷಿಸುವುದು ಸೂಕ್ತವಲ್ಲ, ಅಲ್ಲವೆ?

    Recommended Video

    Rakesh Adiga spiritual Rap , ಕನ್ನಡಧ Rapperಗಳಿಗೆ ಕಿವಿಮಾತು | Rakesh Adiga | Filmibeat Kannada

    ರ್‍ಯಾಪ್ ಎಂಬುದು ಅಬ್ಬರ, ತಾಳವಿಲ್ಲದ ಓಘ. ಸಾಹಿತ್ಯವಂತೂ ಅರ್ಥವಿಲ್ಲದ್ದು ಎಂಬುದರಿಂದ ಆರಂಭಿಸಿ ರ್‍ಯಾಪರ್‌ಗಳ ಬಟ್ಟೆ, ಲುಕ್ಸ್‌ವರೆಗೆ ಎಲ್ಲವನ್ನೂ ಟೀಕಿಸಲಾಗುತ್ತದೆ. ಕನ್ನಡದ ಕೆಲವು ರ್‍ಯಾಪ್ ಹಾಡುಗಳು ಟೀಕೆಗೆ ಅರ್ಹವಾಗಿರುವುದು ನಿಜವೂ ಹೌದು. ಹಾಗೆಂದು ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗಲಾಗದು. ಸಿನಿಮಾ ಸಂಗೀತದಲ್ಲಿಯೂ ಜೊಳ್ಳಿಗೆ ಕಡಿಮೆ ಏನೂ ಇಲ್ಲ, ಆದರೆ ರ್‍ಯಾಪ್ ಹಾಡುಗಳಿಗೆ ಮಾತ್ರವೇ 'ಕಳಪೆ ಸಂಗೀತ'ವೆಂಬ ಪಟ್ಟ ಹೆಚ್ಚು ಕಟ್ಟಲಾಗುತ್ತದೆ.

    ರ್‍ಯಾಪ್ ಹಾಡುಗಳ ಸಾಹಿತ್ಯ ಕಿರಿ-ಕಿರಿ ಉಂಟು ಮಾಡುತ್ತದೆ. ಅನವಶ್ಯಕ ಓಘದಿಂದ ಹಾಡುಗಳನ್ನು ಹಾಡಲಾಗುತ್ತದೆ. ಆಡು ಮಾತುಗಳಿಗೆ ಬಿಟ್ ಬೆರೆಸಿ ಹೇಳುತ್ತಾರೆ, ಅದರಲ್ಲಿ 'ಸಾಹಿತ್ಯ' ಎಂದು ಗುರುತಿಸಬಹುದಾದ ಅಂಶಗಳಿಲ್ಲ ಎಂಬುದು ಹಲವರ ಆರೋಪ. ಮತ್ತೊಂದು ಗುರುತರ ಆರೋಪವೆಂದರೆ ರ್‍ಯಾಪ್ ಹಾಡುಗಳು ಬೇಜವಾಬ್ದಾರಿ ಹೇಳಿಕೆಗಳಿಂದ ಕೂಡಿರುತ್ತವೆ. ಕುಡಿತ, ಸಿಗರೇಟು, ಜಾಲಿ ಜೀವನದ ಪ್ರಚಾರ ಮಾಡುತ್ತವೆಂದು.

    ಮಡಿವಂತಿಕೆ ಪಾಠ ರ್‍ಯಾಪ್ ಹಾಡುಗಳಿಗೆ ಮಾತ್ರವೇ ಏಕೆ?

    ಮಡಿವಂತಿಕೆ ಪಾಠ ರ್‍ಯಾಪ್ ಹಾಡುಗಳಿಗೆ ಮಾತ್ರವೇ ಏಕೆ?

    ಹಾಡುಗಳಲ್ಲಿ 'ಸಾಮಾಜಿಕವಾಗಿ ಒಪ್ಪಿತವಲ್ಲದ' ವಿಷಯಗಳ ಪ್ರಸ್ತಾಪ ಹೊಸದಲ್ಲ. ಸಿನಿಮಾ ಸಂಗೀತದಲ್ಲಿಯೂ ಇದು ದಶಕಗಳಿಂದಲೂ ಅದು ಆಗುತ್ತಲೇ ಬಂದಿದೆ. 'ಕುಡಿಯದಿದ್ದರೆ ಈ ಜನ, ನಡೆಯಲಾರದೋ ಜೀವನ' (ಯುದ್ಧಕಾಂಡ) ಅತ್ಯುತ್ತಮ ಹಾಡಾಗಿ ಈಗಲೂ ಪ್ರಚಲಿತದಲ್ಲಿದೆ. ಹಿಂದಿಯ 'ಧಮ್ ಮಾರೋ ಧಮ್' ಹಾಡನ್ನು ಮರೆಯಲಾದೀತೆ? ಸಿನಿಮಾ ಹಾಡುಗಳಿಗೆ ಇಲ್ಲದ ಮಡಿವಂತಿಕೆ ರ್‍ಯಾಪ್ ಹಾಡುಗಳಿಗೇಕೆ?

    ಹೋಲಿಸಿ ನೋಡಿದಾಗ?

    ಹೋಲಿಸಿ ನೋಡಿದಾಗ?

    ರ್‍ಯಾಪ್ ಹಾಡುಗಳೆಲ್ಲ ಕುಡಿತ, ಧಮ್ಮುಗಳ ಮೇಲೆಯೇ ಬರೆಯಲಾಗಿದೆ ಎಂದೇನೂ ಇಲ್ಲ. ಕನ್ನಡದ ಮೊದಲ ರ್‍ಯಾಪ್ ಹಾಡು ಮಾಡಿದ್ದ ರಾಕೇಶ್ ಅಡಿಗರ ಒಂದು ಹಾಡು ಹೀಗಿದೆ; ''ಲ್ಯಾಬ್‌ನಲ್ಲಿ ಮಾಡೊ ಪ್ರಾಕ್ಟಿಕಲ್ಸ್‌ನ ಕ್ಯಾಂಟೀನ್ ಅಲ್ಲಿ ಮಾಡಬೇಡ, ಸ್ಟುಡೆಂಟ್ಸ್ ರಿಜಿಸ್ಟರ್‌ನಿಂದ ಹುಡ್ಗೀರ್ ಅಡ್ರೆಸ್ ಕದೀಬೇಡ''. ಈ ಹಾಡಿನ ತುಂಬ ವಿದ್ಯಾರ್ಥಿಗಳು ಏನು ಮಾಡಬಾರದು ಎಂದೇ ಹೇಳಲಾಗಿದೆ. 'ಕಣ್ಬಿಟ್ರೆ ಎಲ್ಲೆಲ್ಲೂ ಹುಡ್ಗೀರಪ್ಪ. ಬಣ್-ಬಣ್‌ದ್‌ ಬಟ್ಟೆಯ, ಕಣ್ ಕುಕ್ಕೊ ಚಿಟ್ಟೆಯ ರೂಪಾನ ಕೆಣಕುತ್ತಾ ಮಜಾ ಮಾಡು' ಎಂದು ಕಾಲೇಜು ಹುಡುಗರಿಗೆ ಮಜಾ ಮಾಡಲು ಹೇಳಿದ ಸಿನಿಮಾ ಹಾಡಿಗೆ ಹೋಲಿಸಿದರೆ 'ಮಾಡಬೇಡ' ಹಾಡು ವಾಸಿಯೆಂದೇ ಎನಿಸುತ್ತದೆ.

    ಉದಾತ್ತವಾದುದುವನ್ನು ಸರಳವಾಗಿ ಹೇಳಿದರೆ ತಪ್ಪೆ?

    ಉದಾತ್ತವಾದುದುವನ್ನು ಸರಳವಾಗಿ ಹೇಳಿದರೆ ತಪ್ಪೆ?

    ಇನ್ನು ಆಲ್‌ ಓಕೆ ಹೆಸರಲ್ಲಿ ಹಾಡು ಮಾಡುವ ಅಲೋಕ್ ಆರ್‌ ಬಾಬು, 'ಜೀವನ ಸ್ಪೂರ್ತಿ'ಯನ್ನೇ ಥೀಮ್ ಆಗಿಟ್ಟುಕೊಂಡು ರ್‍ಯಾಪ್ ಹಾಡು ರಚಿಸುತ್ತಾರೆ. 'ನಿನ್ನ ಯೋಗ್ಯತೆ ನಿಂಗೇ ಗೊತ್ತೊ ಲೆ. ಒಂದಲ್ಲ ಒಂದು ದಿನ ಗೆಲ್ಲುತ್ತೀಯ ಲೇ. ಡೋಂಟ್ ವರಿ, ಡೋಂಟ್ ವರಿ' ಹಾಡು ಇದಕ್ಕೊಂದು ಉತ್ತಮ ಉದಾಹರಣೆ. 'ಗೆಲ್ಲೇ ಗೆಲ್ಲುವೆ ಒಂದು ದಿನ', 'ಏನಾಗದು ಮುಂದೆ ಸಾಗು ನೀ' ಸಿನಿಮಾ ಹಾಡುಗಳು ಹೇಳುತ್ತಿರುವುದನ್ನೇ ಇನ್ನಷ್ಟು ಸರಳ ಭಾಷೆಯಲ್ಲಿ, ಯುವ ವರ್ಗಕ್ಕೆ ಅವರದ್ದೇ ಮಾದರಿಯಲ್ಲಿ ಹೇಳಿದ್ದಾರೆ ಆಲ್‌ ಓಕೆ. ಉದಾತ್ತವಾದುದನ್ನು ಅತ್ಯಂತ ಸರಳ ಭಾಷೆಯಲ್ಲಿ, ಯುವ ವರ್ಗಕ್ಕೆ ಹೇಳುವ ಪ್ರಯತ್ನದಂತೆ ಆಲ್‌ ಓಕೆ ಹಾಡುಗಳನ್ನು ಗಮನಿಸಬಹುದಾಗಿದೆ.

    ಕನ್ನಡದ ಬಗ್ಗೆ ಹಲವಾರು ಹಾಡುಗಳಿವೆ

    ಕನ್ನಡದ ಬಗ್ಗೆ ಹಲವಾರು ಹಾಡುಗಳಿವೆ

    ರ್‍ಯಾಪ್ ಮಾದರಿ ಪರಕೀಯರದ್ದಾದರೂ ಕನ್ನಡ ಭಾಷೆ ಕುರಿತಾದ ಹಲವಾರು ಹಾಡುಗಳನ್ನು ರ್‍ಯಾಪರ್‌ಗಳು ಮಾಡಿದ್ದಾರೆ. ಕನ್ನಡ ಭಾಷೆಯ ಗರಿಮೆ ಬಗ್ಗೆ, ಪರಭಾಷಿಕರ ಹಾವಳಿ ಇನ್ನೂ ಹಲವು ವಿಷಯಗಳ ಮೇಲೆ ಹಾಡುಗಳಿವೆ. ರ್‍ಯಾಪ್‌ಗಳ ವಿಶೇಷತೆಯೆಂದರೆ ಸಿನಿಮಾ ಹಾಡುಗಳಂತೆ ಕೇವಲ 'ಕಣ್ಣಿಗೆ ಹಿತವಾದುದನ್ನಷ್ಟೆ' ಇವು ತೋರುವುದಿಲ್ಲ. ಹಲವು ರ್‍ಯಾಪರ್‌ಗಳು ತಮ್ಮ ಹಾಡುಗಳನ್ನು ಚಿತ್ರೀಕರಿಸುವುದೇ ಸ್ಲಂಗಳಲ್ಲಿ. ಅಲ್ಲಿನ ಜನರು, ಅವರ ಜೀವನದ ಮೇಲೆ ಸಿನಿಮಾದವರಿಗಿಂತಲೂ ಹೆಚ್ಚಿನ 'ಫೋಕಸ್' ರ್‍ಯಾಪರ್‌ಗಳಿಗೆ ಇದೆ ಎಂಬುದಕ್ಕೆ ಉದಾಹರಣೆಗಳು ಸಿಗುತ್ತವೆ. ರ್‍ಯಾಪ್ ಮಾದರಿಯಲ್ಲಿಯೇ ಇರುವ ಆದರೆ 'ಫ್ರೆಂಚ್ ಬಿರಿಯಾನಿ' ಸಿನಿಮಾದಲ್ಲಿ ಬಳಕೆಯಾಗಿರುವ 'ಸಾವಧಾನ ಬೆಂದಕಾಳೂರು' ಹಾಡು ಬೆಂಗಳೂರಿನ ಬಗ್ಗೆ ಕಟ್ಟಿಕೊಟ್ಟಿರುವ ಚಿತ್ರಣ ಇತ್ತೀಚಿನ ಬೇರಾವ ಹಾಡುಗಳಲ್ಲಿಯೂ ಕಂಡಿಲ್ಲ. ಇಂಥ ಪ್ರಯತ್ನಗಳು ಸಿನಿಮಾದ ಹೊರಗೆ ಸೋಲೊ ರ್‍ಯಾಪ್ ಹಾಡುಗಳಲ್ಲಿಯೂ ಆಗಿದೆ.

    ಅಪಭ್ರಂಶಗಳು ಸಾಕಷ್ಟಿವೆ

    ಅಪಭ್ರಂಶಗಳು ಸಾಕಷ್ಟಿವೆ

    'ಅಪಭ್ರಂಶವೇ ಇಲ್ಲದ ಸಾಹಿತ್ಯ ರ್‍ಯಾಪ್ ಹಾಡುಗಳಲ್ಲಿದೆಯೇ?' ಎಂದು ಪ್ರಶ್ನಿಸಿದರೆ ಖಂಡಿತ ಇಲ್ಲ. ಬಹುತೇಕ ಯೂಟ್ಯೂಬ್‌ನಲ್ಲಿಯೇ ಬಿಡುಗಡೆ ಆಗುವ ಈ ಹಾಡುಗಳಲ್ಲಿ 'ಮಸಾಲೆ' ಹೆಸರಲ್ಲಿ ಅವಾಚ್ಯ ಶಬ್ದಗಳ ಬಳಕೆಯನ್ನು ಕೆಲವು ಅಸೂಕ್ಷ್ಮ ರ್‍ಯಾಪರ್‌ಗಳು ಮಾಡಿದ್ದಾರೆ. ಯುವತಿಯರನ್ನು 'ಜಡ್ಜ್‌ಮೆಂಟಲ್' ದೃಷ್ಟಿಯಿಂದ ನೋಡುವ ಮಾದರಿಯ ಸಾಹಿತ್ಯವೂ ಢಾಳಾಗಿದೆ. ಸೂಕ್ಷ್ಮತೆಯ ಕೊರತೆ ಹಾಗೂ ವಿಡಿಯೋ ವೈರಲ್ ಮಾಡುವ ದೃಷ್ಟಿಯಿಂದ ಅಸಭ್ಯ ಪದಗಳ ಬಳಕೆ, ಮಹಿಳೆಯರನ್ನು ಬೈಯ್ಯುವ ಸಾಹಿತ್ಯ ಮಾಡಲಾಗಿದೆ. ಈ ನಿಟ್ಟಿನಲ್ಲೆಲ್ಲ ಸಾಕಷ್ಟು ಸುಧಾರಣೆ ರ್‍ಯಾಪ್‌ಗೆ ರ್‍ಯಾಪರ್‌ಗಳಿಗೆ ಬೇಕಾಗಿದೆ. ಆದರೆ ರ್‍ಯಾಪ್ ಹಾಡುಗಳನ್ನು ಕೇಳದೆ, ಅರಿಯದೆ ಅವುಗಳನ್ನು ಕಳಪೆ ಎಂದು ಮುದ್ರೆ ಒತ್ತುವುದು ಸೂಕ್ತವಲ್ಲ. ಪ್ರತಿಕ್ರಿಯೆಗಳು ದೊರೆತಾಗಲೇ ತಪ್ಪುಗಳನ್ನು ಸರಿ ಮಾಡಿಕೊಳ್ಳಲು ಸಾಧ್ಯ. ನಿರ್ಲಕ್ಷ್ಯದಿಂದ ಬದಲಾವಣೆ ಸಾಧ್ಯವಿಲ್ಲ.

    English summary
    A light on Kannada rap songs and their lyrics. Kannada has some very good rap songs.
    Saturday, June 5, 2021, 9:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X