ಜಪಾನ್ ರಾಯಭಾರಿ ಹಿರೋಶಿ ಸುಜುಕಿ 'ಕಾವಾಲಯ್ಯ' ಹುಕ್ ಸ್ಟೆಪ್ ವಿಡಿಯೋ ವೈರಲ್
ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಆರಂಭದಲ್ಲೇ ಅಷ್ಟೇನು ನಿರೀಕ್ಷೆ ಮೂಡಿಸದ ಸಿನಿಮಾ 'ಕಾವಾಲಯ್ಯ' ಸಾಂಗ್‌ನಿಂದ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗುವಂತೆ ಮಾಡಿತ್ತು. ಅನಿರುದ್ಧ್ ರವಿಚಂದರ್ ಮ್ಯೂಸಿಕ್‌ನಲ್ಲಿ ತಮನ್ನಾ ಹೆಜ್ಜೆ ಹಾಕಿದ್ದ ಸಾಂಗ್ ಸೂಪರ್ ಹಿಟ್ ಆಗಿತ್ತು. ಈ ಸಾಂಗ್ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಲೇ ಇದೆ.
ಶಿಲ್ಪಾ ರಾವ್ ಹಾಡಿರುವ 'ಕಾವಾಲಯ್ಯ' ಸಾಂಗ್ ಯುವಜನತೆಯನ್ನು ಹೆಚ್ಚು ಆಕರ್ಷಿಸಿದೆ. ಚಿಕ್ಕ ಮಕ್ಕಳಿಂದ ವಯಸ್ಸಾದ ಅಜ್ಜಿಯರವರೆಗೂ ಸಾಕಷ್ಟು ಜನ ಸಾಂಗ್‌ಗೆ ಡ್ಯಾನ್ಸ್ ಮಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಫೇಸ್‌ಬುಲ್, ಇನ್‌ಸ್ಟಾ, ಟ್ವಿಟ್ಟರ್‌ನಲ್ಲಿ ಈ ಸಾಂಗ್ಸ್ ಹುಕ್ ಸ್ಟೆಪ್ ವಿಡಿಯೋಗಳು ಟ್ರೆಂಡ್ ಕ್ರಿಯೇಟ್ ಮಾಡುತ್ತಿವೆ. ಅಭಿಮಾನಿಗಳು ಮಾತ್ರವಲ್ಲ ಸೆಲೆಬ್ರೆಟಿಗಳು ಕೂಡ ಹಾಡನ್ನು ಗುನುಗುತ್ತಾ ಮೈ ಕುಣಿಸುತ್ತಿದ್ದಾರೆ.

ಸದ್ಯ ಭಾರತದಲ್ಲಿರುವ ಜಪಾನ್ ರಾಯಭಾರಿ ಹಿರೋಶಿ ಸುಜುಕಿ ಅವರು ಕೂಡ 'ಕಾವಲಯ್ಯ' ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಸೂಪರ್ ಸ್ಟಾರ್ ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾರೆ. ಜಪಾನಿನ ಜನಪ್ರಿಯ ಯೂಟ್ಯೂಬರ್ ಮೇಯೊ ಸ್ಯಾನ್ ಜೊತೆಗೆ, ಅವರು ಈ ಹಾಡಿಗೆ ಹೆಜ್ಜೆ ಹಾಕಿ ಕಮಾಲ್ ಮಾಡಿದ್ದಾರೆ. ಆ ವಿಡಿಯೋವನ್ನು ಹಿರೋಷಿ ಅವರ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ಜಪಾನೀಸ್ ಯೂಟ್ಯೂಬರ್ ಮೇಯೊ ಸ್ಯಾನ್ ಅವರೊಂದಿಗೆ 'ಕಾವಲಯ್ಯ' ಡ್ಯಾನ್ಸ್ ವಿಡಿಯೋ, ರಜನಿಕಾಂತ್ ಮೇಲಿನ ನನ್ನ ಪ್ರೀತಿ ಮುಂದುವರಿಯುತ್ತದೆ" ಎಂದು ಬರೆದುಕೊಂಡಿದ್ದಾರೆ.
ಆಗಸ್ಟ್ 10ರಂದು ಬಿಡುಗಡೆಯಾದ 'ಜೈಲರ್' ಸಿನಿಮಾ 2ನೇ ವಾರವೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಶಿವರಾಜ್‌ಕುಮಾರ್, ಮೋಹನ್ ಲಾಲ್, ಜಾಕಿ ಶ್ರಾಫ್ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ರಮ್ಯಾ ಕೃಷ್ಣ, ತಮನ್ನಾ, ಸುನಿಲ್, ಪ್ರಿಯಾಂಕಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಒಂದು ಸೀದಾ ಸಾದಾ ಕಥೆಯನ್ನು ಮಾಸ್ ಎಲಿಮೆಂಟ್ಸ್ ಸೇರಿಸಿ ಬಹಳ ಸೊಗಸಾಗಿ ನೆಲ್ಸನ್ ತೆರೆಗೆ ತಂದಿದ್ದಾರೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಸಿನಿಮಾ ತಿದ್ದಿ ತೀಡಿದ್ದಾರೆ. ಶಿವಣ್ಣ ಎರಡೇ ಸನ್ನಿವೇಶಗಳಲ್ಲಿ ಕಾಣಿಸಿಕೊಂಡರೂ ಅವರ ಪಾತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಅನಿರುದ್ದ್ ರವಿಚಂದರ್ ಬಿಜಿಎಂ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಕ್ಲೈಮ್ಯಾಕ್ಸ್‌ನಲ್ಲಿ ರಜನಿಕಾಂತ್, ಶಿವರಾಜ್‌ಕುಮಾರ್, ಮೋಹನ್ ಲಾಲ್ ಎಲಿವೇಷನ್ ಸೀನ್ಸ್‌ಗೆ ಹಾಕಿರೋ ಟ್ಯೂನ್ ಸಿಕ್ಕಾಪಟ್ಟೆ ಕಿಕ್ ಕೊಡ್ತಿದೆ.
7 ದಿನಕ್ಕೆ 'ಜೈಲರ್' ಸಿನಿಮಾ 450 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಒಂದೊಳ್ಳೆ ಹಿಟ್‌ಗಾಗಿ ರಜನಿಕಾಂತ್ ಕಾಯುತ್ತಿದ್ದರು. 'ಜೈಲರ್' ಸಿನಿಮಾ ಮೂಲಕ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಇನ್ನು ರಜನಿಕಾಂತ್‌ಗೆ ಜಪಾನ್ ದೇಶದಲ್ಲೂ ದೊಡ್ಡ ಅಭಿಮಾನಿ ಬಳಗವಿದೆ. ದಶಕಗಳ ಹಿಂದೆಯೇ ತಲೈವಾ ನಟನೆಯ 'ಮುತ್ತು' ಅಲ್ಲಿ ಸೂಪರ್ ಹಿಟ್ ಆಗಿತ್ತು. ಹಿರೋಶಿ ಸುಜುಕಿ ಮಾತ್ರವಲ್ಲ ಕೆಲ ಜಪಾನಿ ಅಭಿಮಾನಿಗಳು 'ಕಾವಾಲ' ಸಾಂಗ್‌ಗೆ ಡ್ಯಾನ್ಸ್ ಮಾಡಿ ರಂಗೇರಿಸಿದ್ದಾರೆ.
'ಜೈಲರ್' ಬಳಿಕ ರಜನಿಕಾಂತ್ ಮತ್ತೆರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಗಳು ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಮ್' ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. 'ಜೈ ಭೀಮ್' ಸಿನಿಮಾ ಖ್ಯಾತಿಯ ಜ್ಞಾನವೇಲ್ ನಿರ್ದೇಶನದ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ಮಲಯಾಳಂ ನಟ ಫಹಾದ್ ಫಾಸಿಲ್ ನಟಿಸುವ ಬಗ್ಗೆ ಚರ್ಚೆ ನಡೀತಿದೆ.


Click it and Unblock the Notifications











