ಪಾರ್ಟಿಯಲ್ಲಿ ದರ್ಶನ್- ವಿಜಯಲಕ್ಷ್ಮಿ ಬಿಂದಾಸ್ ಸ್ಟೆಪ್ಸ್: ಫ್ಯಾನ್ಸ್ ದಿಲ್‌ಖುಷ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ವೈಯಕ್ತಿಕ ಜೀವನ ಆಗಾಗ್ಗೆ ಚರ್ಚೆಗೆ ಗ್ರಾಸವಾಗುತ್ತಿರುತ್ತದೆ. ಇತ್ತೀಚೆಗೆ ನಟಿ ಪವಿತ್ರಾ ಗೌಡ ನಾನು ದರ್ಶನ್ ಜೊತೆಗೆ 10 ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿದ್ದೀನಿ ಎಂದು ಹೇಳಿದ್ದು ಭಾರೀ ಸುದ್ದಿಯಾಗಿತ್ತು. ಈ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಪ್ರತಿಕ್ರಿಯಿಸಿ ಇಬ್ಬರ ನಡುವೆ ತಿಕ್ಕಾಟಕ್ಕೆ ಕಾರಣವಾಗಿತ್ತು.
ಶ್ರೀರಂಗಪಟ್ಟಣದಲ್ಲಿ ನಡೆದ ಬೆಳ್ಳಿಪರ್ವ ಕಾರ್ಯಕ್ರಮದಲ್ಲಿ ನಟ ದರ್ಶನ್ ಪರೋಕ್ಷವಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದರು. ಇದೂ ಕೂಡ ಭಾರೀ ಚರ್ಚೆ ಹುಟ್ಟಾಕ್ಕಿದೆ. ಮಹಿಳೆಯರ ಕುರಿತು ಆಕ್ಷೇಪಾರ್ಹ ಎನಿಸುವ ಅರ್ಥದಲ್ಲಿ ದರ್ಶನ್ ಮಾತನಾಡಿದ್ದಾರೆ ಎಂದು ದೂರು ಕೂಡ ದಾಖಲಾಗಿದೆ. ಆದರೆ ಇದಕ್ಕೆಲ್ಲಾ ನಟ ದರ್ಶನ್ ತಲೆಕೆಡಿಸಿಕೊಳ್ಳುತ್ತಿಲ್ಲ. ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ.

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಇಷ್ಟೆಲ್ಲಾ ರಂಪಾಟ ನಡೆಯುತ್ತಿದ್ದರೂ ದರ್ಶನ್ ಸೈಲೆಂಟ್ ಆಗಿ ಇದ್ದಾರೆ. ತಾನಾಯ್ತು ತಮ್ಮ ಕೆಲಸ ಆಯ್ತು ಎಂದು ಆರಾಮಾಗಿ ಇದ್ದಾರೆ. ಇತ್ತೀಚೆಗೆ ಸ್ನೇಹಿತರ ಬರ್ತ್‌ಡೇ ಪಾರ್ಟಿಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಮೇತ ಹಾಜರಾಗಿದ್ದಾರೆ. ಕುಣಿದು ಕುಪ್ಪಳಿಸಿ ಸ್ನೇಹಿತರ ಜೊತೆ ಎಂಜಾಯ್ ಮಾಡಿದ್ದಾರೆ. ಇನ್ನು ಪತ್ನಿ ವಿಜಯಲಕ್ಷ್ಮಿ ಜೊತೆ ವೇದಿಕೆ ಏರಿ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗುತ್ತಿದೆ.
ಬಾಸ್- ಅತ್ತಿಗೆ ಡ್ಯಾನ್ಸ್ ಸೂಪರ್ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ. ತಮ್ಮ ಬಗ್ಗೆ ಮಾತನಾಡುವವರಿಗೆ ತಮ್ಮದೇ ಸ್ಟೈಲ್‌ನಲ್ಲಿ ಬಾಸ್ ಉತ್ತರ ಕೊಡುತ್ತಾರೆ ಅಂತ ಕಾಮೆಂಟ್ ಮಾಡುತ್ತಿದ್ದಾರೆ. ದರ್ಶನ್ ಸ್ನೇಹಿತರ ಬರ್ತ್‌ಡೇ ಪಾರ್ಟಿ ಫೋಟೊಗಳು ಸಖತ್ ವೈರಲ್ ಆಗುತ್ತಿದೆ.
6 ತಿಂಗಳ ಹಿಂದೆ ಕೂಡ ಪಾರ್ಟಿಯೊಂದರಲ್ಲಿ ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ 'ಆಶಿಕಿ-2' ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದರು. ಇದೀಗ 'ಪಡ್ಡೆಹುಲಿ' ಚಿತ್ರದ 'ಒಂದು ಮಾತಲ್ಲಿ ನೂರು ಹೇಳಲೇ' ಹಾಡಿಗೆ ಕುಣಿದಿದ್ದಾರೆ. ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರದ್ದು ಅರೇಂಜ್ಡ್ ಮ್ಯಾರೇಜ್.
20 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಮದುವೆ ನಡೆದಿತ್ತು. 2003, ಮೇ 19ರಂದು ಧರ್ಮಸ್ಥಳದ ವಸಂತ್ ಮಹಲ್‌ನಲ್ಲಿ ಬಹಳ ಸರಳವಾಗಿಯೇ ಇಬ್ಬರು ಹಸೆಮಣೆ ಏರಿದ್ದರು. ಅದರ ಹಿಂದಿನ ದಿನ ನಡೆದಿತ್ತು. ಅದಾಗಲೇ ದರ್ಶನ್ ಹೀರೊ ಆಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. 'ಕರಿಯ' ಹಾಗೂ 'ಲಾಲಿ ಹಾಡು' ಸಿನಿಮಾಗಳ ರಿಲೀಸ್ ಬೆನ್ನಲ್ಲೇ ಮದುವೆ ನಡೆದಿತ್ತು.
ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿಗೆ ವಿನೀಶ್ ಹೆಸರಿನ ಮಗನಿದ್ದಾನೆ. ಆತನನ್ನು ಕೂಡ ಚಿತ್ರರಂಗಕ್ಕೆ ಕರೆತರುವ ಲೆಕ್ಕಾಚಾರದಲ್ಲಿದ್ದಾರೆ ದರ್ಶನ್. ಸದ್ಯ ಹೈಸ್ಕೂಲ್‌ನಲ್ಲಿ ಓದುತ್ತಿರುವ ವಿನೀಶ್ 'ಐರಾವತ' ಹಾಗೂ 'ಯಜಮಾನ' ಚಿತ್ರದ ಸಣ್ಣ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಂಡಿದ್ದಾನೆ.
ಇನ್ನು ದರ್ಶನ್ 'ಕಾಟೇರ' ಸಿನಿಮಾ ಸಕ್ಸಸ್ ಸಂಭ್ರಮದಲ್ಲಿದ್ದಾರೆ. ಡಿಸೆಂಬರ್ 29ಕ್ಕೆ ತೆರೆಕಂಡಿದ್ದ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಈ ಸಿನಿಮಾ ಬಳಿಕ ದರ್ಶನ್ 'ಡೆವಿಲ್' ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಇತ್ತೀಚೆಗೆ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಡೆವಿಲ್' ಟೀಸರ್ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ.

ಜೋಗಿ ಪ್ರೇಮ್ ನಿರ್ದೇಶನದಲ್ಲಿ ದರ್ಶನ್ಒಂದು ಸಿನಿಮಾ ಮಾಡುತ್ತಿದ್ದಾರೆ. ಇನ್ನು 'ಕಾಟೇರ' ಕಾಂಬಿನೇಷನ್‌ನಲ್ಲಿ 'ಸಿಂಧೂರ ಲಕ್ಷ್ಮಣ' ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಯಜಮಾನ' ಹಾಗೂ 'ಕ್ರಾಂತಿ' ಸಿನಿಮಾಗಳನ್ನು ನಿರ್ಮಿಸಿದ್ದ ಶೈಲಜಾ ನಾಗ್ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಇನ್ನು ನಾಲ್ಕೈದು ಸಿನಿಮಾಗಳಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದಾರೆ. ಆದರೆ ಯಾವಾಗ ಯಾವ ಸಿನಿಮಾ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











