ಸೊಗಸಾದ ಸಾಹಿತ್ಯ, ಇಂಪಾದ ಗಾಯನದಿಂದ ಕೇಳುಗರನ್ನು ಕಟ್ಟಿಹಾಕುವ 'ಯಾವ ಜನುಮದ ಗೆಳತಿ'
ದರ್ಶನ್ 'ಕಾಟೇರ'ನಾಗಿ ತೆರೆಮೇಲೆ ಅಬ್ಬರಿಸಲು ಕೆಲವೇ ದಿನಗಳು ಬಾಕಿಯಿದೆ. ಸದ್ಯ ಚಿತ್ರದ ಒಂದೊಂದೇ ಹಾಡು ರಿಲೀಸ್ ಮಾಡಿ ಚಿತ್ರತಂಡ ಹೈಪ್ ಕ್ರಿಯೇಟ್ ಮಾಡುತ್ತಿದೆ. 'ಪಸಂದಾಗವನೆ' ಸಾಂಗ್ ಸೂಪರ್ ಹಿಟ್ ಬಳಿಕ ಈಗ ಮತ್ತೊಂದು 'ಮೆಲೋಡಿ' ಸಾಂಗ್ ರಿಲೀಸ್ ಆಗಿ ಅಭಿಮಾನಿಗಳ ಮನಗೆದ್ದಿದೆ.
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ರಾಕ್‌ಲೈನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಡಿಸೆಂಬರ್ 29ಕ್ಕೆ ತೆರೆಗಪ್ಪಳಿಸಲಿದೆ. ಮುಂದಿನ ವರ್ಷ ಬಿಡುಗಡೆಯಾಗುತ್ತದೆ ಎಂದುಕೊಂಡಿದ ಚಿತ್ರವನ್ನು ಈ ವರ್ಷವೇ ತೆರೆಗೆ ತರುವುದಾಗಿ ಹೇಳಿ ಚಿತ್ರತಂಡ ಅಚ್ಚರಿ ಮೂಡಿಸಿತ್ತು. ಅದರಂತೆ ಭರ್ಜರಿ ಪ್ರಚಾರ ಮಾಡಿ ಸಿನಿಮಾ ಪ್ರೇಕ್ಷಕರ ಮುಂದೆ ತರುವ ಕೆಲಸ ನಡೀತಿದೆ. ಚಿತ್ರಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದು ಹಾಡುಗಳು ಒಂದೊಂದಾಗಿ ಹೊರ ಬರುತ್ತಿದೆ.

'ಯಾವ ಜನುಮದ ಗೆಳತಿ' ಎಂದು ಶುರುವಾಗುವ ಚಿತ್ರದ ಎರಡನೇ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದ ಹಾಡನ್ನು ಹೇಮಂತ್ ಕುಮಾರ್ - ರಕ್ಷಿತಾ ಸುರೇಶ್ ಹಾಡಿದ್ದಾರೆ. ಬಹಳ ಅದ್ಧೂರಿಯಾಗಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಹಾಡಿನ ಝಲಕ್ ಜೊತೆಗೆ ಮೇಕಿಂಗ್ ವಿಷ್ಯುವಲ್ಸ್ ಮಿಕ್ಸ್ ಮಾಡಿ ಲಿರಿಕಲ್ ವಿಡಿಯೋ ಡಿಸೈನ್ ಮಾಡಿದ್ದಾರೆ.
'ಕಾಟೇರ' ಚಿತ್ರದ ಎಲ್ಲಾ ಹಾಡುಗಳನ್ನು ಭೂಷಣ್ ಮಾಸ್ಟರ್ ಕೊರಿಯೋಗಫಿ ಮಾಡಿದಂತೆ ಕಾಣುತ್ತಿದೆ. ಈ ಹಿಂದೆ ಬಂದಿದ್ದ 'ಪಸಂದಾಗವನೆ' ಹಾಡಿಗೂ ಭೂಷಣ್ ಕೊರಿಯೋಗ್ರಫಿ ಇತ್ತು. 'ಯಾವ ಜನುಮದ ಗೆಳತಿ' ಹಾಡಿಗೆ ಅವರೇ ದರ್ಶನ್- ಆರಾಧನಾ ಇಬ್ಬರನ್ನು ಕುಣಿಸಿದ್ದಾರೆ. ಗುಜರಾತಿನ ಕಚ್ ಜಿಲ್ಲೆಯ ಉಪ್ಪಿನ ಮರುಭೂಮಿಯಲ್ಲಿ ಬಹಳ ಸೊಗಸಾಗಿ ಹಾಡನ್ನು ಸೆರೆ ಹಿಡಿಯಲಾಗಿದೆ. 'ರಾಬರ್ಟ್' ಚಿತ್ರದ 'ಕಣ್ಣು ಹೊಡಿಯಾಕ' ಹಾಡನ್ನು ಕೂಡ ಅಲ್ಲೇ ಚಿತ್ರೀಕರಿಸಲಾಗಿತ್ತು. ಆ ಹಾಡಿಗೂ ಭೂಷಣ್ ಮಾಸ್ಟರ್ ಕೊರಿಯೋಗ್ರಫಿ ಇತ್ತು.
ಜಾನಪದ ಟಚ್ ಇರುವಂತೆ ವಿ. ಹರಿಕೃಷ್ಣ ಈ ಹಾಡಿನ ಟ್ಯೂನ್ ಕಂಪೋಸ್ ಮಾಡಿದ್ದಾರೆ. ಹೇಮಂತ್- ರಕ್ಷಿತಾ ವಾಯ್ಸ್ ಕೂಡ ಸೊಗಸಾಗಿದ್ದು ನಿಧಾನವಾಗಿ ಕೇಳುಗರನ್ನು ಆವರಿಸಿಕೊಳ್ಳುವಂತಿದೆ. ವೆರೈಟಿ ವೆರೈಟಿ ಕಾಸ್ಟೂಮ್ಸ್‌ನಲ್ಲಿ ದರ್ಶನ್ ಹಾಗೂ ಆರಾಧನಾ ಸಿಂಪಲ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದಾರೆ. ಅಭಿಮಾನಿಗಳಿಗೆ ಹಾಡು ಇಷ್ಟವಾಗಿದ್ದು ಪದೇ ಪದೆ ಕೇಳುತ್ತಿದ್ದಾರೆ.

'ಕಾಟೇರ' ಚಿತ್ರದಲ್ಲಿ 70ರ ದಶಕದ ಕಥೆ ಹೇಳುತ್ತಿದ್ದಾರೆ. ಉಳುವವನೆ ಭೂಮಿಯ ಒಡೆಯ ಕಾಯ್ದೆಯ ಸುತ್ತಾ ಸಿನಿಮಾ ಕಥೆ ಸಾಗಲಿದೆ. ಶ್ರೀನಿವಾಸ್ ಮೂರ್ತಿ, ಜಗಪತಿ ಬಾಬು, ಬಿರಾದಾರ್, ಶ್ರುತಿ, ಕುಮಾರ್ ಗೋವಿಂದ್ ಚಿತ್ರದ ತಾರಾಗಣದಲ್ಲಿದ್ದಾರೆ. ಸೆಟ್‌ಗಳನ್ನು ನಿರ್ಮಿಸಿ 50 ವರ್ಷಗಳ ಹಿಂದಿನ ಕಾಲಘಟ್ಟವನ್ನು ಕಟ್ಟಿಕೊಡುವ ಪ್ರಯತ್ನ ನಡೆದಿದೆ. ಸುಧಾಕರ್ ರಾಜ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ, ಕೆ. ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. 'ಕಾಟೇರ'ನ ಜೊತೆ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.
ಜಡೇಶ್ ಹಂಪಿ ಜೊತೆ ಸೇರಿ ತರುಣ್ ಸುಧೀರ್ 'ಕಾಟೇರ' ಚಿತ್ರದ ಕಥೆ, ಚಿತ್ರಕಥೆ ಸಿದ್ಧಪಡಿಸಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ದರ್ಶನ್ ಲುಂಗಿ ಉಟ್ಟು ಹಳ್ಳಿ ಹೈದನಾಗಿ ಕಾಣಿಸಿಕೊಂಡಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಅಭಿಮಾನಿಗಳು ಕೇಳುವ ಮಾಸ್ ಅಂಶಗಳ ಜೊತೆಗೆ ಒಂದೊಳ್ಳೆ ಕಥೆ ಹೊತ್ತು ಸಿನಿಮಾ ತೆರೆಗೆ ಬರ್ತಿದೆ. ಸೆನ್ಸಾರ್ ಸಮಸ್ಯೆಯಿಂದ 'ಕಾಟೇರ' ಡಿಸೆಂಬರ್ 29ಕ್ಕೆ ಬರುತ್ತಾ? ಇಲ್ವಾ? ಎನ್ನುವ ಗೊಂದಲ ಕೆಲವರಲ್ಲಿದೆ. ಆದರೆ ಚಿತ್ರತಂಡ ಮತ್ತೊಮ್ಮೆ ರಿಲೀಸ್ ಡೇಟ್ ಖಚಿತಪಡಿಸಿದೆ.


Click it and Unblock the Notifications











