Kabzaa First Song : ಕಬ್ಜ ಚಿತ್ರದ ಮೊದಲ ಹಾಡು ಬಿಡುಗಡೆಯ ದಿನಾಂಕ ಘೋಷಣೆ; ಎಲ್ಲಿ ನಡೆಯಲಿದೆ ಕಾರ್ಯಕ್ರಮ?
ಈ ವರ್ಷ ಬಿಡುಗಡೆಯಾಗಲಿರುವ ಕನ್ನಡ ಚಿತ್ರಗಳ ಪೈಕಿ ಅತಿಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಚಿತ್ರ ಎಂದರೆ ಅದು ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ನಟನೆಯ ಹಾಗೂ ಆರ್ ಚಂದ್ರು ನಿರ್ದೇಶನದ ಕಬ್ಜ. ಹೌದು, ಸುಮಾರು ಎರಡು ವರ್ಷಗಳಿಂದ ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂದು ಕಾಯುತ್ತಿದ್ದವರಿಗೆ ಚಿತ್ರ ಈ ವರ್ಷ ತೆರೆ ಕಾಣಲಿದೆ ಎಂಬುದು ಸಮಾಧಾನ ನೀಡಿದ್ದು, ಸದ್ಯ ಚಿತ್ರತಂಡ ಮತ್ತೊಂದು ಅಪ್‌ಡೇಟ್ ಅನ್ನು ಸಿನಿ ರಸಿಕರಿಗೆ ನೀಡಿದೆ.
ಹೌದು, ಕಬ್ಜ ಚಿತ್ರದ ಮೊದಲ ಹಾಡು ಯಾವಾಗ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೊ ಫೆಬ್ರವರಿ 4ರಂದು ಸಂಜೆ 7 ಗಂಟೆಗೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಢ ಘೋಷಿಸಿದೆ. ಇನ್ನು ಚಿತ್ರದ ಆಡಿಯೊ ಹಕ್ಕನ್ನು ಆನಂದ್ ಆಡಿಯೊ ಖರೀದಿಸಿದ್ದು, ಆನಂದ್ ಆಡಿಯೊ ಯುಟ್ಯೂಬ್ ಚಾನೆಲ್‌ನಲ್ಲಿ ಹಾಡು ಬಿಡುಗಡೆಗೊಳ್ಳಲಿದೆ.

ಇನ್ನು ಈ ಹಾಡಿನ ಬಿಡುಗಡೆ ಈವೆಂಟ್ ಹೈದರಾಬಾದ್‌ನಲ್ಲಿ ನಡೆಯಲಿದೆ ಎಂಬ ಮಾಹಿತಿ ಇದೆ. ಪೋಸ್ಟರ್ ಹಾಗೂ ಟೀಸರ್ ಮೂಲಕ ನಿರೀಕ್ಷೆಯನ್ನು ಹೆಚ್ಚಿಸಿದ್ದ ಕಬ್ಜ ಚಿತ್ರದ ಮೊದಲ ಹಾಡು ಬಿಡುಗಡೆಯ ಘೋಷಣೆ ಸದ್ಯ ಸಿನಿ ರಸಿಕರಲ್ಲಿ ಹಾಡು ಹೇಗಿರಲಿದೆ ಎಂಬ ಕುತೂಹಲವನ್ನು ಹೆಚ್ಚಿಸಿದೆ. ಚಿತ್ರತಂಡ ಈ ಮೊದಲೇ ಚಿತ್ರದ ಮಾಸ್ ಹಾಡನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಘೋಷಿಸಿದ್ದು, ಉಪೇಂದ್ರ ಇಂಟ್ರೊಡಕ್ಷನ್ ಗೀತೆ ಇದಾಗಿರಬಹುದು ಎಂಬ ಊಹೆ ಇದೆ.
ಮ್ಯೂಸಿಕ್ ಮಾನ್‌ಸ್ಟರ್ ಎಂದೇ ಖ್ಯಾತಿಯನ್ನು ಪಡೆದಿರುವ ರವಿ ಬಸ್ರೂರ್ ಸಂಗೀತ ಚಿತ್ರಕ್ಕಿದ್ದು, ಇದು ಹಾಡುಗಳ ಮೇಲಿನ ನಿರೀಕ್ಷೆಯನ್ನು ಡಬಲ್ ಆಗುವಂತೆ ಮಾಡಿದೆ.


Click it and Unblock the Notifications











