ಕಬ್ಜ ಎರಡನೇ ಹಾಡು ಯಾವಾಗ, ಎಲ್ಲಿ ಬಿಡುಗಡೆ? ಈ ಬಾರಿ ವಿಡಿಯೊ ಸಾಂಗ್ ರಿಲೀಸ್!
ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕಬ್ಜ ಚಿತ್ರದ ಅಪ್‌ಡೇಟ್‌ಗಳು ಆರಂಭಗೊಂಡಿವೆ. ಈ ಹಿಂದೆ ಟೀಸರ್ ಬಿಡುಗಡೆ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಧೂಳ್ ಎಬ್ಬಿಸಿದ್ದ ಕಬ್ಜ ಚಿತ್ರತಂಡ ಕಳೆದ ವಾರ ಚಿತ್ರದ ಟೈಟಲ್ ಹಾಡನ್ನು ಬಿಡುಗಡೆ ಮಾಡುವ ಮೂಲಕ ಮತ್ತಷ್ಟು ಸದ್ದು ಮಾಡಿತ್ತು.
ಈ ಹಾಡನ್ನು ಹೈದರಾಬಾದ್‌ನಲ್ಲಿ ಬಿಡುಗಡೆ ಮಾಡಿದ್ದ ಕಬ್ಜ ಚಿತ್ರತಂಡ ಮುಂದಿನ ಹಾಡುಗಳನ್ನು ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಅದರಂತೆ ಇದೀಗ ಚಿತ್ರತಂಡ ಎರಡನೇ ಹಾಡನ್ನು ಎಲ್ಲಿ, ಯಾವ ಸಮಯಕ್ಕೆ ಬಿಡುಗಡೆ ಮಾಡಲಿದೆ ಎಂಬುದನ್ನು ಬಹಿರಂಗಪಡಿಸಿದೆ.
'ನಮಾಮಿ' ಎಂಬ ಹಾಡನ್ನು ಫೆಬ್ರವರಿ 16ರಂದು ಮಧ್ಯಾಹ್ನ 2.34ಕ್ಕೆ ಚೆನ್ನೈನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಇನ್ನು ಮೊದಲ ಹಾಡಿನ ಲಿರಿಕಲ್ ವಿಡಿಯೊವನ್ನು ಮಾತ್ರ ಬಿಡುಗಡೆಗೊಳಿಸಿದ್ದ ಚಿತ್ರತಂಡ ನಮಾಮಿ ಹಾಡನ್ನು ವಿಡಿಯೊ ಸಮೇತ ಬಿಡುಗಡೆ ಮಾಡಲಿದೆ.

ಈ ಮೂಲಕ ಸಿನಿ ರಸಿಕರು ಕಬ್ಜ ಚಿತ್ರದ ರಿಚ್ ಸಿನಿಮಾಟೋಗ್ರಫಿ ಯಾವ ಹಂತದಲ್ಲಿರಲಿದೆ ಎಂಬುದನ್ನು ತಿಳಿಯಬಹುದಾಗಿದೆ. ಹಾಡುಗಳಿಗೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಮೊದಲ ಹಾಡಿನಲ್ಲಿ ನಾಯಕನ ಪರಿಚಯ ಮಾಡಿಸಿದ್ದ ಚಿತ್ರತಂಡ ಈಗ ನಮಾಮಿ ಮೂಲಕ ನಾಯಕಿಯ ಇಂಟ್ರೊಡಕ್ಷನ್ ಕೊಡಲಿದೆ.
ಇನ್ನು ಕಬ್ಜ ಚಿತ್ರವನ್ನು ಕನ್ನಡದ ರಾಜರತ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಮಾರ್ಚ್ 17ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಇದು ಅಪ್ಪುಗೆ ನೀಡಲಿರುವ ಟ್ರಿಬ್ಯೂಟ್ ಎಂದು ನಿರ್ದೇಶಕ ಆರ್ ಚಂದ್ರು ತಿಳಿಸಿದ್ದರು.


Click it and Unblock the Notifications











