ಕಡಲೆಕಾಯಿ ವ್ಯಾಪಾರಿಯ 'ಕಚ್ಚಾ ಬಾದಾಮ್' ಹಾಡು ವಿದೇಶದಲ್ಲೂ ವೈರಲ್: ಹಾಡಿನ ಅರ್ಥವೇನು?
ಭಾರತದಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ. ಇಲ್ಲಿನ ಗಲ್ಲಿ-ಗಲ್ಲಿಯಲ್ಲೂ ಪ್ರತಿಭಾವಂತರು ದೊರಕುತ್ತಾರೆ ಆದರೆ ಅವರನ್ನು ಗುರುತಿಸುವವರ ಕೊರತೆ ಇದೆ ಅಷ್ಟೆ.
ಆದರೆ ಇತ್ತೀಚೆಗೆ ಜನಜನಿತವಾಗಿರುವ ಸಾಮಾಜಿಕ ಜಾಲತಾಣದ ಮೂಲಕ ಎಲೆಮರೆ ಕಾಯಿಗಳಾಗಿದ್ದ ಪ್ರತಿಭಾವಂತರು ಜನರೆದುರು ಬರುತ್ತಿದ್ದಾರೆ. ಕಾಂಕ್ರಿಟ್ ಕೆಲಸ ಮಾಡುವ ಡ್ಯಾನ್ಸರ್, ಭಿಕ್ಷೆ ಬೇಡುತ್ತಿದ್ದ ರಾನು ಮಂಡಲ್, ಅದ್ಭುತ ಡ್ಯಾನ್ಸರ್ 'ಗೋವಿಂದಾ ಅಂಕಲ್' ಹೀಗೆ ಹಲವು ಪ್ರತಿಭಾವಂತರ ಪ್ರತಿಭೆ ಅಂತರ್ಜಾಲದ ಮೂಲಕ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ಗಳಲ್ಲಿ 'ಕಚ್ಚಾಬಾದಾಮ್' ಹಾಡು ಬಹಳ ಟ್ರೆಂಡಿಂಗ್‌ನಲ್ಲಿದೆ. ಟಿವಿ ಸೆಲೆಬ್ರಿಟಿಗಳು, ಸಿನಿಮಾ ಸೆಲೆಬ್ರಿಟಿಗಳು ಸೇರಿ ಹಲವರು ಈ ಹಾಡಿಗೆ ಡ್ಯಾನ್ಸ್ ಮಾಡಿ ವಿಡಿಯೋ ಅಪ್‌ಲೋಡ್ ಮಾಡುತ್ತಿದ್ದಾರೆ. ಭಾರತದಲ್ಲಿ ಜನಪ್ರಿಯವಾಗಿದ್ದ ಈ ಹಾಡು ಈಗ ವಿದೇಶ ತಲುಪಿದೆ.

ಬೀದಿ ಬದಿಯಲ್ಲಿ ಕಡಲೆಕಾಯಿ ಮಾರುವ ಪಶ್ಚಿಮ ಬಂಗಾಳದ ಭುಬನ್ ಭಡ್ಯಾಕರ್ ಕಡಲೆಕಾಯಿ ಮಾರಲು ಕಚ್ಚಾ ಬಾದಮ್ ಹಾಡು ಕಟ್ಟಿ ಹಾಡಿದ್ದರು. ಕಡಲೆ ಕಾಯಿ ಮಾರುತ್ತಾ ಹಾಡು ಹೇಳುತ್ತಿದ್ದ ಭುಬನ್ ಭಡ್ಯಾಕರ್ ವಿಡಿಯೋ ಮಾಡಿದ ಯಾರೋ ಅದನ್ನು ಯೂಟ್ಯೂಬ್‌ನಲ್ಲಿ ಹಾಕಿದ್ದೇ ತಡ ಹಾಡು ವೈರಲ್ ಆಗಿಬಿಟ್ಟಿತು.
ಯೂರೋಪಿನ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಆಗಿರುವ ಜಿಕಾ ತನ್ನ ಇಬ್ಬರು ಗೆಳೆಯರೊಟ್ಟಿಗೆ ಈಗ 'ಕಚ್ಚಾ ಬಾದಾಮ್' ಹಾಡಿಗೆ ನರ್ತಿಸಿದ್ದಾರೆ. ಜಿಕಾರ ಈ ವಿಡಿಯೋ ಸಖತ್ ಹಿಟ್ ಆಗಿದೆ. ವಿಡಿಯೋವನ್ನು ಮೂರು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.
'ಕಚ್ಚಾ ಬಾದಾಮ್' ಹಾಡಿನ ಹಕ್ಕು ಇತರೆಗಳಾವುದೂ ಭುಬನ್ ಭಡ್ಯಾಕರ್ ಬಳಿ ಇಲ್ಲ. ಆದರೆ ಅವರ ಹಾಡನ್ನು ಮೂಲವಾಗಿರಿಸಿಕೊಂಡು ಈಗಾಗಲೇ ಹಲವರು ಅದರ ರೀಮಿಕ್ಸ್ ಇತರೆಗಳನ್ನು ಮಾಡಿಕೊಂಡು ಯೂಟ್ಯೂಬ್‌ನಲ್ಲಿ ದೊಡ್ಡ ಮೊತ್ತದ ಹಣ ಸಂಪಾದನೆಯನ್ನೂ ಮಾಡಿದ್ದಾರೆ. ಆದರೆ ಭುಬನ್ ಭಡ್ಯಾಕರ್ ಈಗಲೂ ಕಡಲೆಕಾಯಿಯನ್ನೇ ಮಾರಾಟ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಅವರಿಗೆ ಯಾವುದೇ ಬೇಸರವಿಲ್ಲ. ನನ್ನ ಹಾಡು ಕೇಳಿ ಜನ ಖುಷಿ ಪಟ್ಟಿದ್ದಾರೆ ಅಷ್ಟೆ ಸಾಕೆಂದು ಸಂದರ್ಶನವೊಂದರಲ್ಲಿ ಭುಬನ್ ಹೇಳಿಕೊಂಡಿದ್ದಾರೆ.
ಕಚ್ಚಾ ಬಾದಾಮ್ ಹಾಡಿನ ಅರ್ಥವೇನು?
'ಕಚ್ಚಾ ಬಾದಾಮ್' ಹಾಡು ಬೆಂಗಾಲಿ ಹಾಡಾಗಿದ್ದು, 'ನನ್ನ ಬಳಿ ಕೇವಲ ಹಸಿ ಕಡಲೆಕಾಯಿ ಇದೆ, ಹುರಿದಿರುವ ಕಡಲೆಕಾಯಿ ಇಲ್ಲ. ನಿಮ್ಮ ಬಳಿ ಮುರಿದಿರುವ ಚೈಲು, ಬಳೆ, ಓಲೆ ಏನೇ ಇದ್ದರು ಕೊಂಡು ತನ್ನಿ ಅದರ ಬದಲು ಕಡಲೆಕಾಯಿ ಕೊಂಡು ಹೋಗಿ. ಹಸಿ ಕಡಲೆಕಾಯಿ. ಕೆಟ್ಟ ಮೊಬೈಲ್ ಇದ್ದರೂ ಕೊಂಡು ತನ್ನಿ ಅದಕ್ಕೆ ಐದು ರುಪಾಯಿ ಬೆಲೆ ಅದರ ಬದಲಿಗೆ ಹಸಿ ಕಡೆಕಾಯಿ ತೆಗೆದುಕೊಂಡು ಹೋಗಿ' ಎಂದು ಭುಬನ್ ಭಡ್ಯಾಕರ್ ಹಾಡುತ್ತಾರೆ.
ಈ ಹಾಡನ್ನು ಭುಬನ್ ಅವರೇ ಕಟ್ಟಿದ್ದಾರೆ. ಹಾಡಿಗೆ ರಾಗ ಸಂಯೋಜನೆಯೂ ಅವರದ್ದೇ, ಹಲವು ಏರಿಳಿತಗಳಿಂದ ಕೂಡಿರುವ ಈ ಹಾಡು ಕೇಳಲು ಅದ್ಭುತವಾಗಿದೆ. ಭುಬನ್ 'ಕಚ್ಚಾ ಬಾದಾಮ್' ಹಾಡುತ್ತಿರುವ ವಿಡಿಯೋ ಯೂಟ್ಯೂಬ್‌ಗೆ ಕಳೆದ ನವೆಂಬರ್‌ನಲ್ಲಿ ಅಪ್‌ಲೋಡ್ ಆಗಿದೆ. ಕೆಲ ತಿಂಗಳ ಬಳಿಕ ಹಾಡು ವೈರಲ್ ಆಗಿದೆ. 'RRR' ಸಿನಿಮಾದ 'ನಾಟು ನಾಟು' ಹಾಡಿನ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ವೈರಲ್ ಆಗಿರುವ ಹಾಡಿದು.


Click it and Unblock the Notifications











