ಸ್ವಾತಂತ್ರ್ಯ ದಿನಾಚರಣೆ: ದೇಶಭಕ್ತಿ ಬಡಿದೆಬ್ಬಿಸುವ ಕನ್ನಡ ಹಾಡುಗಳು
75ನೇ ಸ್ವಾತಂತ್ರ ದಿನಾಚರಣೆ ಆಚರಿಸಲು ದೇಶಾದ್ಯಂತ ಸಿದ್ಧತೆ ನಡೆದಿದೆ. ಕೊರೊನಾ ವೈರಸ್ ಭೀತಿಯ ನಡುವೆಯೂ ಸ್ವಾತಂತ್ರ ಸಂಭ್ರಮಕ್ಕೆ ಪೂರ್ವ ತಯಾರಿ ಮಾಡಲಾಗುತ್ತಿದೆ. ಕೆಂಪುಕೋಟೆ ಮೇಲೆ ತ್ರಿವರ್ಣಧ್ವಜ ಹಾರುವುದನ್ನು ಕಣ್ತುಂಬಿಕೊಳ್ಳಲು ಕೆಲವೇ ಗಂಟೆಗಳು ಬಾಕಿದೆ. ಈ ವಿಶೇಷ ದಿನದ ಸಂದರ್ಭದಲ್ಲಿ ಸಾಮಾನ್ಯವಾಗಿ ಕೆಲವು ಚಲನಚಿತ್ರ ಗೀತೆಗಳು ಗಮನ ಸೆಳೆಯುತ್ತದೆ.
ಭಾರತೀಯ ಸಿನಿಮಾರಂಗದಲ್ಲಿ ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ಸಂಗ್ರಾಮದ ಕುರಿತಾಗಿ ಅನೇಕ ಸಿನಿಮಾಗಳು ಬಂದಿದೆ. ಹಲವಾರು ಹಾಡುಗಳು ರಚನೆಯಾಗಿದೆ. ಕನ್ನಡದಲ್ಲೂ ಹಲವು ಹಾಡುಗಳಿದ್ದು, ಈ ಹಾಡುಗಳನ್ನು ಕೇಳಿದರೆ ಪ್ರತಿಯೊಬ್ಬರಲ್ಲು ದೇಶಭಕ್ತಿ ಬಡಿದೆಬ್ಬಿಸುತ್ತದೆ.
ಈ ಹಾಡುಗಳನ್ನು ಕೇಳಿದ್ರೆ ಅದೇನೋ ಒಂಥರಾ ರೋಮಾಂಚನ. ಮೈ ಜುಂ ಅನ್ನುತ್ತೆ. ಸ್ವಾತಂತ್ರ್ಯಕ್ಕಾಗಿ ನಡೆದ ಬಲಿದಾನಗಳು, ಹೋರಾಟಗಳು, ಯುದ್ಧಗಳು ಹಾಗೆ ಕಣ್ಣ ಮುಂದೆ ಬಂದು ಹೋಗುತ್ತೆ. 75ನೇ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಕನ್ನಡದ ಟಾಪ್ 5 ದೇಶಭಕ್ತಿ ಹಾಡುಗಳನ್ನು ಪಟ್ಟಿ ಮಾಡಲಾಗಿದೆ. ಸಮಯ ಸಿಕ್ಕಾಗ ಈ ಗೀತೆಗಳನ್ನು ಕೇಳುವುದು ಮರೆಯಬೇಡಿ. ಮುಂದೆ ನೋಡಿ...

ಹಿಂದೂಸ್ತಾನ ಗೊತ್ತೇನೋ?
ವಿಜಯಶಾಂತಿ, ಅಂಬರೀಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ವಂದೇ ಮಾತರಂ' ಸಿನಿಮಾದ 'ಹಿಂದೂಸ್ತಾನ ಗೊತ್ತೇನೋ.....ಧರ್ಮ ಕಾಯೋ ಹಿಮಾಲಯ....' ಹಾಡು ಭಾರತೀಯರಲ್ಲಿರುವ ದೇಶಭಕ್ತಿಯನ್ನು ಬಡಿದೆಬ್ಬಿಸುತ್ತೆ. 2001ರಲ್ಲಿ ಈ ಸಿನಿಮಾ ತೆರೆಕಂಡಿತ್ತು. ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದರು.

ಭಾರತಾಂಬೆ ನಿನ್ನ ಜನ್ಮ ದಿನ
ಸಾಹಸಸಿಂಹ ವಿಷ್ಣುವರ್ಧನ್ ನಟಿಸಿರುವ 'ವೀರಪ್ಪ ನಾಯಕ' ಚಿತ್ರದಲ್ಲಿ ಬರುವ 'ಭಾರತಾಂಬೆ ನಿನ್ನ ಜನ್ಮ ದಿನ' ಹಾಡು ಮೊದಲು ನೆನಪಾಗುತ್ತೆ. ಈ ಸಿನಿಮಾನೇ ಭಾರತೀಯ ತ್ರಿವರ್ಣಧ್ವಜದ ಸುತ್ತ ನಡೆಯುತ್ತೆ. ಅದರಲ್ಲೂ ಈ ಗೀತೆಗೆ ಕೇಳುವಾಗ ಮೈಯೆಲ್ಲ ರೋಮಾಂಚನವಾಗುತ್ತೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ. 1999ರಲ್ಲಿ ಈ ಸಿನಿಮಾ ಬಂದಿತ್ತು. ಟಿಎಸ್ ನಾಗಾಭರಣ ನಿರ್ದೇಶಿಸಿದ್ದರು.

ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವ ಹಗಲವೇಷ ಸಿನಿಮಾದಲ್ಲಿ ಬರುವ ''ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ.....'' ಹಾಡು ದೇಶಭಕ್ತರ ನೆಚ್ಚಿನ ಗೀತೆಗಳಲ್ಲಿ ಒಂದು. ಡಾ ರಾಜ್ ಕುಮಾರ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಬರಗೂರು ರಾಮಚಂದ್ರಪ್ಪ ಸಾಹಿತ್ಯ ರಚಿಸಿದ್ದಾರೆ. 2000ನೇ ವರ್ಷದಲ್ಲಿ ಬಂದ ಈ ಚಿತ್ರಕ್ಕೆ ಬರಗೂರು ರಾಮಚಂದ್ರಪ್ಪ ನಿರ್ದೇಶನವಿತ್ತು.

ನಾನು ಕನ್ನಡದ ಕಂದ
ಶಿವರಾಜ್ ಕುಮಾರ್ ಅಭಿನಯದ ಮತ್ತೊಂದು ಗೀತೆ 'ನಾನು ಕನ್ನಡದ ಕಂದ....'. ಎಕೆ 47 ಚಿತ್ರದ ಈ ಹಾಡು ದೇಶಭಕ್ತಿಯ ಪ್ರತೀಕ ಮೂಡಿಬಂದಿದೆ. ಕೆ.ಜೆ.ಜೇಸುದಾಸ್ ಈ ಹಾಡನ್ನು ಹಾಡಿದ್ದಾರೆ. 1999ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಓಂ ಪ್ರಕಾಶ್ ನಿರ್ದೇಶಿಸಿದ್ದರು.

'ಸೈನಿಕ' ಸಿನಿಮಾದ 'ಜೈ ಹಿಂದ್'
ಸಿಪಿ ಯೋಗೇಶ್ವರ್ ನಟನೆಯ ಸೈನಿಕ ಸಿನಿಮಾದ 'ಜೈ ಹಿಂದ್....' ಹಾಡು ನೆನಪಾಗುತ್ತೆ. ಈ ಹಾಡು ಕೇಳುವುದರ ಜೊತೆ ದೃಶ್ಯ ನೋಡಿದ್ರೆ ಇನ್ನು ಚೆನ್ನಾಗಿರುತ್ತದೆ. ದೇಶಭಕ್ತಿ, ದೇಶದ ಸಂಸ್ಕೃತಿ, ದೇಶದ ಚರಿತ್ರೆ ಹೇಳುವ ಇನ್ನು ಹಲವು ಹಾಡುಗಳಿವೆ. ಆದರೆ, ಫಟ್ ಅಂತ ನೆನಪಾಗುವ ಹಿಟ್ ಗೀತೆಗಳನ್ನು ಮಾತ್ರ ಇಲ್ಲಿ ಪಟ್ಟಿ ಮಾಡಲಾಗಿದೆ. ನಿಮಗೆ ನೆನಪಾಗುವ ಇತರೆ ಹಾಡುಗಳನ್ನು ಕಾಮೆಂಟ್ ಮೂಲಕ ತಿಳಿಸಿ.


Click it and Unblock the Notifications











