ಹಾಡು ಕದ್ದ ಕರಣ್ ಜೋಹರ್? ಪಾಕ್ ಸಂಗೀತಗಾರನಿಂದ ಆರೋಪ
ಕರಣ್ ಜೋಹರ್ ನಿರ್ಮಾಣದ 'ಜುಗ್ ಜುಗ್ ಜಿಯೋ' ಸಿನಿಮಾ ಟ್ರೇಲರ್ ಬಿಡುಗಡೆ ಆಗಿದ್ದು, ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಈ ನಡುವೆ ಸಿನಿಮಾದ ಮೇಲೆ ಆರೋಪವೊಂದು ಕೇಳಿ ಬಂದಿದೆ.
'ಜುಗ್ ಜುಗ್ ಜಿಯೋ' ಸಿನಿಮಾದ ಹಾಡೊಂದನ್ನು ಕರಣ್ ಜೋಹರ್ ಕದ್ದಿದ್ದಾರೆ ಎಂದು ಪಾಕಿಸ್ತಾನದ ಸಂಗೀತಗಾರರೊಬ್ಬರು ಆರೋಪ ಮಾಡಿದ್ದಾರೆ.
ಪಾಕಿಸ್ತಾನಿ ಸಂಗೀತಗಾರ ಅಬ್ರಾರ್ ಉಲ್ ಹಕ್ ತಮ್ಮ 'ನಾಚ್ ಪಂಜಾಬನ್' ಹಾಡನ್ನು ಕದ್ದು ಕರಣ್ ಜೋಹರ್ ತಮ್ಮ 'ಜುಗ್ ಜುಗ್ ಜಿಯೋ' ಸಿನಿಮಾಕ್ಕೆ ಬಳಸಿಕೊಂಡಿದ್ದಾರೆ ಎಂದಿದ್ದಾರೆ.

ಸಿನಿಮಾದ ಟ್ರೇಲರ್ ಬಿಡುಗಡೆ ಆಗುತ್ತಿದ್ದಂತೆ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಬರೆದಿರುವ ಅಬ್ರಾರ್ ಉಲ್ ಹಕ್, ''ನನ್ನ ಹಾಡನ್ನು ನನ್ನ ಅನುಮತಿ ಇಲ್ಲದೆ ಬಳಸಿಕೊಳ್ಳಲಾಗಿದೆ. ನಾನು ನನ್ನ ಹಾಡನ್ನು ಯಾವುದೇ ಭಾರತೀಯ ನಿರ್ಮಾಪಕನಿಗೆ ಮಾರಾಟ ಮಾಡಿಲ್ಲ. ಧರ್ಮ ಪ್ರೊಡಕ್ಷನ್ ವಿರುದ್ಧ ನಾನು ದೂರು ನೀಡುತ್ತೇನೆ'' ಎಂದಿದ್ದಾರೆ.
''ಕರಣ್ ಜೋಹರ್ ಅಂಥಹಾ ಹಿರಿಯ, ವೃತ್ತಿನಿರತ ನಿರ್ಮಾಪಕರು ಹೀಗೆ ಹಾಡುಗಳನ್ನು ಕದಿಯಬಾರದು. ನನ್ನ ಆರು ಹಾಡುಗಳನ್ನು ಈವರೆಗೆ ಕದಿಯಲಾಗಿದೆ. ಈ ಬಾರಿ ನಾನು ಸುಮ್ಮನೆ ಕೂರುವುದಿಲ್ಲ, ಪ್ರಕರಣ ದಾಖಲಿಸಿ ನ್ಯಾಯ ಪಡೆಯುತ್ತೇನೆ'' ಎಂದಿದ್ದಾರೆ ಹಕ್.
ಆದರೆ ಇದಕ್ಕೆ ಉತ್ತರ ನೀಡಿರುವ ಸಂಗೀತ ಸಂಸ್ಥೆ ಟಿ-ಸೀರಿಸ್, ''ನಾವು ಹಾಡನ್ನು ಕಾನೂನು ಬದ್ಧವಾಗಿ ಖರೀದಿಸಿದ್ದೀವಿ'' ಎಂದಿದೆ. ಬ್ರಿಟನ್ ಮೂಲದ ಮೂವಿಬಾಕ್ಸ್ ರೆಕಾರ್ಡ್ ಲೇಬಲ್ ಬಳಿ ಆ ಹಾಡಿನ ಹಕ್ಕುಗಳಿದ್ದವು. ಅವರಿಗೆ ಹಣ ನೀಡಿ ಕಾನೂನುಬದ್ಧವಾಗಿ ನಾವು ಹಾಡನ್ನು ಖರೀದಿ ಮಾಡಿದ್ದೀವಿ'' ಎಂದಿದೆ.
'ನಾಚ್ ಪಂಜಾಬನ್' ಆಲ್ಬಂನ ನಾಚ್ ಪಂಜಾಬನ್ ಹಾಡು ಆಪಲ್ ಐಟ್ಯೂನ್ಸ್‌ಗೆ ಬಿಡುಗಡೆ ಆಗಿತ್ತು. ಇದೇ ಹಾಡು ಲಾಲಿವುಡ್ ಕ್ಲಾಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಸಹ ಇತ್ತು. ಈ ಯೂಟ್ಯೂಬ್ ಚಾನೆಲ್ ಬ್ರಿಟನ್‌ನ ಮೂವಿಬಾಕ್ಸ್ ರೆಕಾರ್ಡ್ ಲೇಬಲ್ ಸೇರಿದ್ದಾಗಿತ್ತು, ಹಾಗಾಗಿ ನಾವು ಕಾನೂನುಬದ್ಧವಾಗಿ ಅವರಿಂದ ಹಕ್ಕು ಖರೀದಿಸಿ ಹಾಡನ್ನು ನಮ್ಮ ಸಿನಿಮಾದಲ್ಲಿ ಬಳಸಿಕೊಂಡಿದ್ದೇವೆ'' ಎಂದು ಧರ್ಮಾ ಪ್ರೊಡಕ್ಷನ್ ಸಹ ಹೇಳಿಕೆ ಬಿಡುಗಡೆ ಮಾಡಿದೆ.


Click it and Unblock the Notifications











