'ಕೆಜಿಎಫ್ 2' ಆಡಿಯೋ ಹಕ್ಕು ಮಾರಾಟವಾಗಿದ್ದು ಎಷ್ಟಕ್ಕೆ? ಸಿನಿಮಾದಲ್ಲಿ ಎಷ್ಟು ಹಾಡುಗಳಿವೆ?
'ಕೆಜಿಎಫ್ 2' ಸಿನಿಮಾದ ಆಡಿಯೋ ಹಕ್ಕುಗಳು ಪ್ರತಿಷ್ಟಿತ ಲಹರಿ ಆಡಿಯೋ ಸಂಸ್ಥೆಗೆ ಮಾರಾಟವಾಗಿದೆ. ಮೊದಲ 'ಕೆಜಿಎಫ್' ಸಿನಿಮಾದ ಆಡಿಯೋ ಹಕ್ಕುಗಳನ್ನೂ ಸಹ ಲಹರಿ ಸಂಸ್ಥೆಯೇ ಖರೀದಿಸಿತ್ತು.
'ಕೆಜಿಎಫ್ 2' ಸಿನಿಮಾವು ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದ್ದು ಐದೂ ಭಾಷೆಗಳ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆಯೇ ಖರೀದಿಸಿದೆ. ಈ ಹಿಂದೆ ಬಿಡುಗಡೆ ಆಗಿದ್ದ 'ಕೆಜಿಎಫ್' ಸಿನಿಮಾದ ಆಡಿಯೋವನ್ನು ಲಹರಿ ಸಂಸ್ಥೆ ಚೆನ್ನಾಗಿ ಪ್ರೊಮೋಟ್ ಮಾಡಿತ್ತು, 'ಕೆಜಿಎಫ್ 2' ನ ಆಡಿಯೋವನ್ನೂ ಸಹ ಚೆನ್ನಾಗಿ ಪ್ರೊಮೋಟ್ ಮಾಡುವ ನಿರೀಕ್ಷೆ ಇದೆ.
'ಕೆಜಿಎಫ್ 2' ಆಡಿಯೋ ಹಕ್ಕುಗಳನ್ನು ಖರೀದಿಸಿದ ಬಳಿಕ ಈ ವ್ಯವಾಹರದ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಲಹರಿ ವೇಲು, ಆಡಿಯೋ ಹಕ್ಕುಗಳನ್ನು ಯಾವ ಬೆಲೆಗೆ ಖರಿದಿಸಲಾಗಿದೆ, ಸಿನಿಮಾದಲ್ಲಿ ಎಷ್ಟು ಹಾಡುಗಳಿವೆ? ಆಡಿಯೋ ಲಾಂಚ್ ಕಾರ್ಯಕ್ರಮ ಯಾವಾಗ ಎಂಬಿತರೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

'ಕೆಜಿಎಫ್ 2' ಆಡಿಯೋ ಹಕ್ಕು ಖರೀದಿಗೆ ಕೊಟ್ಟ ಹಣವೆಷ್ಟು?
'ಕೆಜಿಎಫ್; ಚಾಪ್ಟರ್ 1' ಸಿನಿಮಾದ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆಯು 3.60 ಕೋಟಿ ರುಪಾಯಿ ಹಣ ನೀಡಿ 2018 ರಲ್ಲಿ ಖರೀದಿಸಿತ್ತು. ಈಗ 'ಕೆಜಿಎಫ್ 2'ರ ಆಡಿಯೋ ಹಕ್ಕನ್ನು 7.20 ಕೋಟಿ ರು. ಹಣ ನೀಡಿ ಖರೀದಿಸಿದ್ದಾರೆ. ಎಲ್ಲ ಐದೂ ಭಾಷೆಯ ಆಡಿಯೋ ಹಕ್ಕುಗಳು ಲಹರಿ ಸಂಸ್ಥೆಗೇ ಸೇರಿವೆ.

'ಬಾಹುಬಲಿ'ಯನ್ನು ಮೀರಿಸಿದೆ 'ಕೆಜಿಎಫ್ 2': ಲಹರಿ ವೇಲು
''ಬಾಹುಬಲಿ' ನಂತರ 'ಕೆಜಿಎಫ್ 2' ಸಿನಿಮಾಕ್ಕೆ ಅತಿ ಹೆಚ್ಚು ರಾಯಧನವನ್ನು ನೀಡಲಾಗಿದೆ. ಇದೊಂದು ದಾಖಲೆಯೂ ಹೌದು. 'ಬಾಹುಬಲಿ 1'ನ ಆಡಿಯೋ ಹಕ್ಕಿಗೆ ನಾವು 3.5 ಕೋಟಿ ನೀಡಿದ್ದೆವು, 'ಬಾಹುಬಲಿ 2'ಗೆ 5.40 ಕೋಟಿ ಹಣ ನೀಡಿದ್ದೆವು. ಅದನ್ನು ಈಗ 'ಕೆಜಿಎಫ್ 2' ಮೀರಿಸಿದೆ'' ಎಂದಿದ್ದಾರೆ ಲಹರಿ ವೇಲು.

'ಕೆಜಿಎಫ್ 2' ನಲ್ಲಿ ಎಷ್ಟು ಹಾಡುಗಳಿವೆ?
''ಕೆಜಿಎಫ್ 2' ಸಿನಿಮಾದ ಹಾಡುಗಳು 'ಕೆಜಿಎಫ್ ಚಾಪ್ಟರ್ 1' ಗಿಂತಲೂ ಚೆನ್ನಾಗಿವೆ. ರವಿ ಬಸ್ರೂರು ಅದ್ಭುತವಾಗಿ ಹಾಡುಗಳನ್ನು ಸಂಯೋಜಿಸಿದ್ದಾರೆ. ಹಾಡುಗಳ ಚಿತ್ರೀಕರಣ ಸಹ ಅದ್ಧೂರಿಯಾಗಿ ಆಗಿದೆ. 'ಕೆಜಿಎಫ್ 2' ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿವೆ ಮತ್ತು ಎರಡು ಬಿಟ್‌ಗಳಿವೆ'' ಎಂದು ಮಾಹಿತಿ ನೀಡಿದ್ದಾರೆ ಲಹರಿ ವೇಲು.

ಆಡಿಯೋ ಲಾಂಚ್ ಯಾವಾಗ?
''ಆಡಿಯೋ ಲಾಂಚ್ ಅನ್ನು ಮುಂದಿನ ತಿಂಗಳು ಮಾಡುವ ಇರಾದೆ ಇದೆ. ಚಿತ್ರತಂಡ ಈ ಬಗ್ಗೆ ಯೋಚನೆ ಮಾಡುತ್ತಿದೆ. ಆದರೆ ಎಲ್ಲವೂ ಕೊರೊನಾ ಸ್ಥಿತಿಯ ಮೇಲೆ ನಿಂತಿದೆ. ಕೊರೊನಾ ಕಡಿಮೆಯಾದರೆ ಅದ್ಧೂರಿ ಕಾರ್ಯಕ್ರಮ ಆಯೋಜನೆ ಆಗಲಿದೆ. ಇಲ್ಲವಾದರೆ ಆನ್‌ಲೈನ್ ಅಥವಾ ನಿಗದಿತ ಜನರ ಮುಂದೆ ಕಾರ್ಯಕ್ರಮ ನಡೆಯಲಿದೆ'' ಎಂದಿದ್ದಾರೆ ಲಹರಿ ವೇಲು.
Recommended Video

'ಪ್ರೇಮಲೋಕ'ಕ್ಕೆ 3 ಲಕ್ಷ, 'ದಳಪತಿ'ಗೆ 75 ಲಕ್ಷ
'ಕೆಜಿಎಫ್ 2' ಸಿನಿಮಾದ ಆಡಿಯೋಗೆ 7.20 ಕೋಟಿ ಕೊಟ್ಟಿದ್ದು ಬಹಳ ಖುಷಿಯಿದೆ. ಹಲವು ದಶಕಗಳಿಂದ ಕನ್ನಡ ಸಿನಿಮಾ ಉದ್ಯಮವನ್ನು ನೋಡಿಕೊಂಡು ಬಂದಿದ್ದೇವೆ. ನಮ್ಮ ಮಾರುಕಟ್ಟೆ ಎಷ್ಟು ಎತ್ತರಕ್ಕೆ ಏರಿದೆ ಎಂಬ ಬಗ್ಗೆ ನಮಗೆ ಖುಷಿ ಇದೆ. ಅಣ್ಣ ಮನೋಹರ್ ನಾಯ್ಡು 'ಪ್ರೇಮಲೋಕ' ಸಿನಿಮಾಕ್ಕೆ ಆ ಕಾಲದಲ್ಲಿ 3 ಲಕ್ಷ ನೀಡಿದ್ದರು. ಮಣಿರತ್ನಂ ನಿರ್ದೇಶನದ 'ದಳಪತಿ' ಸಿನಿಮಾಕ್ಕೆ 75 ಲಕ್ಷ ನೀಡಿದ್ದರು. ಆ ಕಾಲಘಟ್ಟದಲ್ಲಿ ಅದೆಲ್ಲ ಬಹಳ ದೊಡ್ಡ ಮೊತ್ತ. ಹಣಕ್ಕಿಂತಲೂ ನಮಗೆ ಗುಣಮಟ್ಟವೇ ಪ್ರಧಾನ ಎಂದರು ಲಹರಿ ವೇಲು.


Click it and Unblock the Notifications











