ಅಬ್ಬಬ್ಬಾ.. 15 ದಿನ ರವಿ ಬಸ್ರೂರು ಪಟಾಕಿ ಸೌಂಡ್, ರೀ-ಸೌಂಡ್ ಜೋರೋ ಜೋರು!
ಭಾರತೀಯ ಚಿತ್ರರಂಗದಲ್ಲೀಗ ಕನ್ನಡ ಪ್ರತಿಭೆಗಳ ದರ್ಬಾರ್ ಜೋರಾಗಿದೆ. 'KGF' ಸರಣಿ ಸಿನಿಮಾಗಳಿಂದ ಕನ್ನಡ ಚಿತ್ರರಂಗದತ್ತ ಪರಭಾಷಿಕರು ಮತ್ತೊಮ್ಮೆ ತಿರುಗಿ ನೋಡುವಂತೆ ಆಯಿತು. ಚಿತ್ರದಲ್ಲಿ ಕೆಲಸ ಮಾಡಿದ ತಂತ್ರಜ್ಞರಿಗೂ ಬೇರೆ ಭಾಷೆಗಳಿಂದ ಅವಕಾಶಗಳು ಹುಡುಕಿ ಬಂತು.
ಪರಭಾಷಾ ಫಿಲ್ಮ್ ಮೇಕರ್ಸ್ ಕೂಡ ಯಶ್ ಕಾಲ್‌ಶೀಟ್‌ಗೆ ಕೇಳಿದರು. ಪ್ರಶಾಂತ್ ನೀಲ್ ಈಗಾಗಲೇ ತೆಲುಗಿನಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ಕಟ್ಟಿಕೊಡಲು ಆರಂಭಿಸಿದ್ದಾರೆ. ಅವರಿಗಿಂತ ಮುನ್ನ ಸಂಗೀತ ನಿರ್ದೇಶಕ ರವಿ ಬಸ್ರೂರು ಬೇರೆ ಭಾಷೆಗಳಲ್ಲಿ ಕೆಲಸ ಮಾಡಲು ಆರಂಭಿಸಿದರು. ಈಗಾಗಲೇ ಬಾಲಿವುಡ್ ಚಿತ್ರಗಳಿಗೂ ಟ್ಯೂನ್ ಹಾಕಿದ್ದಾರೆ.

ಒಂದು ಹೊತ್ತು ಊಟಕ್ಕೆ ಹಣ ಇಲ್ಲದೇ ಸಂಕಷ್ಟ ಎದುರಿಸಿದ್ದ ರವಿ ಬಸ್ರೂರು ಇವತ್ತು ಭಾರತೀಯ ಚಿತ್ರರಂಗದ ಟಾಪ್ ಮ್ಯೂಸಿಕ್ ಡೈರೆಕ್ಟರ್ ಸ್ಥಾನಕ್ಕೇರಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಚಿತ್ರದಿಂದ ಅದಕ್ಕೆ ಬುನಾದಿ ಬಿತ್ತು. 'KGF' ಚಾಪ್ಟರ್-1 ಹಾಗೂ ಚಾಪ್ಟರ್-2 ಅದಕ್ಕೆ ಮತ್ತಷ್ಟು ಶಕ್ತಿ ತುಂಬಿತ್ತು. ರವಿ ಬಸ್ರೂರು ಸಂಗೀತದ ಹಾಡುಗಳು ಮಾತ್ರವಲ್ಲ ಬಿಜಿಎಂಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ.
ಬಾಲಿವುಡ್ ಸ್ಟಾರ್ ನಟರು ತಮ್ಮ ಸಿನಿಮಾಗಳಿಗೆ ರವಿ ಬಸ್ರೂರು ಬಿಜಿಎಂ ಬೇಕು ಎಂದು ಕೇಳುಬಂತಾಗಿದೆ. ಈಗಾಗಲೇ 'ಭೋಲಾ', 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ರೀತಿಯ ಬಾಲಿವುಡ್‌ನ ದೊಡ್ಡ ಚಿತ್ರಗಳಿಗೆ ರವಿ ಬಸ್ರೂರು ರೀ-ರೆಕಾರ್ಡಿಂಗ್ ಮಾಡಿ ಗೆದ್ದಿದ್ದಾರೆ. ಈ ಬಾರಿ ದೀಪಾವಳಿಗೆ ಥಿಯೇಟರ್‌ಗಳಲ್ಲಿ ರವಿ ಸದ್ದು ಜೋರಾಗಿ ಕೇಳಿಸಲಿದೆ. ಅದಕ್ಕೆ ಕಾರಣ ಅವರ ಸಂಗೀತದ 'ಸಿಂಗಂ ಅಗೇನ್' ಸಿನಿಮಾ ತೆರೆಗೆ ಬರ್ತಿದೆ.
ರೋಹಿತ್ ಶೆಟ್ಟಿ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಸಿಂಗಂ ಅಗೇನ್' ಚಿತ್ರ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಅಜಯ್ ದೇವಗನ್ಮ ಕರೀನಾ ಕಪೂರ್, ರಣ್‌ವೀರ್ ಸಿಂಗ್, ಟೈಗರ್ ಶ್ರಾಫ್, ದೀಪಿಕಾ ಪಡುಕೋಣೆ ಹಾಗೂ ಅಕ್ಷಯ್‌ಕುಮಾರ್ ರೀತಿಯ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಅಂದಾಜು 250 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ.

'ಸಿಂಗಂ' ಸರಣಿಯ ಹಿಂದಿನ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಈ ಬಾರಿ ಬಹಳ ದೊಡ್ಡಮಟ್ಟದಲ್ಲಿ ಈ ಮಲ್ಟಿಸ್ಟಾರರ್ ಸಿನಿಮಾ ಕಟ್ಟಿಕೊಡಲಾಗಿದೆ. 'ರಾಮಾಯಣ'ದ ಕಥೆಯನ್ನೇ ಹೋಲುವ ಒಂದು ಕಮರ್ಷಿಯಲ್ ಕಥೆ ಚಿತ್ರದಲ್ಲಿದೆ. ಅಜಯ್ ದೇವಗನ್ ಮತ್ತೊಮ್ಮೆ ಡಿಸಿಪಿ ಸಿಂಗಂ ಆಗಿ ಅಬ್ಬರಿಸಿದ್ದಾರೆ. ಆತನ ಪತ್ನಿ ಅನ್ವಿಯನ್ನು ಭಯೋತ್ಪಾದಕರು ಅಪಹರಿಸುತ್ತಾರೆ. ಮುಂದೆ ಏನಾಗುತ್ತದೆ ಎನ್ನುವುದು ಚಿತ್ರದ ಕಥೆ.
'ಸಿಂಗಂ ಅಗೇನ್' ಚಿತ್ರಕ್ಕೆ ರವಿಬಸ್ರೂರು ಹಾಗೂ ತೆಲುಗಿನ ಎಸ್. ತಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಒಂದು ಹಾಡಿಗೆ ಟ್ಯೂನ್ ಹಾಕುವ ಜೊತೆಗೆ ರವಿ ರೀ-ರೆಕಾರ್ಡಿಂಗ್ ಮಾಡಿದ್ದಾರೆ. ಸದ್ಯ ಅವರು ಮ್ಯೂಸಿಕ್ ಕಂಪೋಸ್ ಮಾಡಿರುವ ಟೈಟಲ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಈಗಾಗಲೇ ಟೀಸರ್ ಹಾಗೂ ಟ್ರೈಲರ್‌ನಲ್ಲಿ ಬಿಜಿಎಂ ಕೇಳಿದವರು ಖುಷಿಯಾಗಿದ್ದಾರೆ.
ಕೆಲವೇ ದಿನಗಳ ಹಿಂದೆ ಧ್ರುವ ಸರ್ಜಾ ನಟಿಸಿದ 'ಮಾರ್ಟಿನ್' ಚಿತ್ರ ತೆರೆಗೆ ಬಂದಿತ್ತು. ಆ ಚಿತ್ರಕ್ಕೂ ರವಿ ಬಸ್ರೂರು ರೀ-ರೆಕಾರ್ಡಿಂಗ್ ಮಾಡಿದ್ದರು. ಇದೀಗ ನವೆಂಬರ್ 1ಕ್ಕೆ 'ಸಿಂಗಂ ಅಗೇನ್' ಸಿನಿಮಾ ತೆರೆಗೆ ಬರಲಿದೆ. ಇನ್ನು ನವೆಂಬರ್ 15ಕ್ಕೆ 'ಭೈರತಿ ರಣಗಲ್' ಸಿನಿಮಾ ಬಿಡುಗಡೆ ಆಗಲಿದೆ. ಆ ಚಿತ್ರಕ್ಕೂ ರವಿಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಹಾಗಾಗಿ 15 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಅವರ ಮ್ಯೂಸಿಕ್ ಬಹಳ ಸದ್ದು ಮಾಡಲಿದೆ.
ನರ್ತನ್ ನಿರ್ದೇಶನದ 'ಭೈರತಿ ರಣಗಲ್' ಚಿತ್ರವನ್ನು ಶಿವಣ್ಣ ನಿರ್ಮಿಸಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆ ಆಗಿದೆ. ಇನ್ನು ಟೀಸರ್‌ಗಳು ಸಿನಿರಸಿಕರು ಗಮನ ಸೆಳೆದಿದೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದೆ.


Click it and Unblock the Notifications











