ಕಿಚ್ಚ ಸುದೀಪ್ ಕಂಠಸಿರಿಯಲ್ಲಿ 'ಬಚ್ಚನ್' ಹಾಡು
ಶ್ರೀ ವೆಂಕಟೇಶ್ವರ ಕೃಪ ಎಂಟರ್ ಟೈನರ್ಸ್ ಲಾಂಛನದಲ್ಲಿ ಉದಯ್.ಕೆ ಮೆಹತಾ ನಿರ್ಮಿಸಿ, ಶಶಾಂಕ್ ಕಥೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರ 'ಬಚ್ಚನ್. ಈ ಚಿತ್ರಕ್ಕಾಗಿ ಯೋಗರಾಜ್ ಭಟ್ ಹಾಗೂ ಶಶಾಂಕ್ ಬರೆದಿರುವ "ಬಚ್ಚನ್ನು ಬಚ್ಚನ್ನು ಒಂಚೂರು ಬಗ್ಗಿ ಮಾತಾಡು ಬಚ್ಚನ್ನು..." ಎಂಬ ಹಾಡನ್ನು ರಚಿಸಿದ್ದಾರೆ.
ಚಿತ್ರದ ನಾಯಕ ನಟ ಕಿಚ್ಚ ಸುದೀಪ್ ಇತ್ತೀಚೆಗೆ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಈ ಹಾಡನ್ನು ಹಾಡಿದರು. ವಿ.ಹರಿಕೃಷ್ಣ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಬಾಕಿಯಿದ್ದು, ಆ ಹಾಡಿನ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ.
ಸದ್ಯದಲ್ಲೇ ಚಿತ್ರದ ಹಾಡುಗಳ ಸೀಡಿ ಬಿಡುಗಡೆಯಾಗಲಿದೆ. ಚಿತ್ರ ಏಪ್ರಿಲ್ ನಲ್ಲಿ ತೆರೆಗೆ ಬರಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಸುದೀಪ್, ಪರೂಲ್ ಯಾದವ್, ತುಲಿಪ್ ಜೋಷಿ, ಭಾವನಾ ಮೆನನ್, ಆಶಿಶ್ ವಿದ್ಯಾರ್ಥಿ, ರವಿಶಂಕರ್ ಮತ್ತು ತೆಲುಗಿನ ಖ್ಯಾತನಟ ಜಗಪತಿ ಬಾಬು ಮುಂತಾದವರ ತಾರಾಬಳಗವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರು ರವರ ಛಾಯಾಗ್ರಹಣವಿದೆ.
'ಜರಾಸಂಧ' ಚಿತ್ರದ ಸೋಲಿನ ಬಳಿಕ ಶಶಾಂಕ್ ಕೈಗೆತ್ತಿಕೊಂಡಿರುವ ಚಿತ್ರ ಇದಾಗಿದ್ದು ಗಾಂಧಿನಗರದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಸುದೀಪ್ ಅಭಿನಯದ ಇದುವರೆಗಿನ ಯಾವ ಚಿತ್ರಕ್ಕೂ ಬಾರದ ಟಿವಿ ರೈಟ್ಸ್ ಮೊತ್ತ 'ಬಚ್ಚನ್' ಚಿತ್ರಕ್ಕೆ ಬಂದಿದ್ದು, ಈಗಾಗಲೆ ಹೆಸರಾಂತ ಟಿವಿ ಸುಮಾರು ರು.3.33 ಕೋಟಿಗೆ ಸ್ಯಾಟಿಲೈಟ್ ಹಕ್ಕನ್ನು ಖರೀದಿಸಿದ್ದು ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications
