ತಲೆ, ಮುಖದ ಮೇಲೆ ಗಾಯ, ಗಾಯಕ ಕೆಕೆ ಸಾವಿನ ಬಗ್ಗೆ ಗೊಂದಲ: ಆಯೋಜಕರ ಅಸಡ್ಡೆ ಕಾರಣ?
ಭಾರತೀಯ ಸಿನಿಮಾ ಸಂಗೀತ ಲೋಕದ ಅನರ್ಘ್ಯರತ್ನಗಳಲ್ಲಿ ಒಬ್ಬರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ ಅಲಿಯಾಸ್ ಕೆಕೆ ನಿನ್ನೆ ರಾತ್ರಿ ಕೊಲ್ಕತ್ತದಲ್ಲಿ ಸಾವನ್ನಪ್ಪಿದ್ದಾರೆ.
ಲೈವ್ ಶೋ ನೀಡುತ್ತಿದ್ದ ಕೆಕೆ, ಅನಾರೋಗ್ಯದಿಂದ ಹೋಟೆಲ್‌ಗೆ ಮರಳಿ ಅಲ್ಲಿಂದ ಆಸ್ಪತ್ರೆಗೆ ಹೋಗುವ ವೇಳೆ ಸಾವನ್ನಪ್ಪಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಕೆಕೆ ಸಾವಿಗೆ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ಅಭಿಮಾನಿಗಳು ಸಹ ಕೆಕೆ ಸಾವಿನಿಂದ ಆಘಾತಕ್ಕೆ ಒಳಗಾಗಿದ್ದಾರೆ.
ಕೆಲವೇ ಗಂಟೆಗಳ ಹಿಂದೆ ವೇದಿಕೆ ಮೇಲೆ ಹಾಡುತ್ತಾ, ಕುಣಿಯುತ್ತಾ ಇದ್ದ ವ್ಯಕ್ತಿ ಹಠಾತ್ತನೆ ನಿಧನ ಹೊಂದಿದ ಸುದ್ದಿ ಹಲವರಿಗೆ ಆಘಾತ ತಂದಿದೆ. ಅದರ ಜೊತೆಗೆ ಕೆಕೆ ಸಾವಿನ ಬಗ್ಗೆ ಅನುಮಾನಗಳು ಸಹ ವ್ಯಕ್ತವಾಗಿವೆ.

ಗಾಯಕನ ತಲೆ, ಮುಖದ ಮೇಲೆ ಗಾಯ
ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯಂತೆ ಗಾಯಕನ ತಲೆ, ಮುಖದ ಮೇಲೆ ಗಾಯಗಳಾಗಿತ್ತು. ಆದರೆ ಈ ಗಾಯ ಯಾವ ಕಾರಣಕ್ಕೆ ಆಗಿತ್ತು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಕಾನ್ಸರ್ಟ್ ಮುಗಿಸಿ ಬಂದ ಗಾಯಕ, ಹೋಟೆಲ್‌ನಲ್ಲಿ ಹಠಾತ್ತನೆ ಕುಸಿದು ಬಿದ್ದರು ಎನ್ನಲಾಗುತ್ತಿದ್ದು, ಆ ಸಮಯದಲ್ಲಿ ಗಾಯ ಆಗಿರುವ ಸಂಭವ ಇದೆ. ಅಥವಾ ಬೇರೆ ಯಾವುದೋ ಕಾರಣಕ್ಕೆ ಈ ಗಾಯಗಳಾಗಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಆಯೋಜಕರ ಬಳಿ ದೂರು ಹೇಳಿದ್ದ ಕೆಕೆ
ಇನ್ನು ಕೆಕೆ ನಿನ್ನೆ ನಡೆಸಿದ ಕೊನೆಯ ಲೈವ್ ಕಾನ್ಸರ್ಟ್‌ನ ಹಲವು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೆಕೆ ವೇದಿಕೆ ಮೇಲೆ ಹಾಡಬೇಕಾದರೆ ವಿಪರೀತವಾಗಿ ಬೆವರುತ್ತಿದ್ದುದನ್ನು ಅಭಿಮಾನಿಗಳು ಗುರುತಿಸಿದ್ದಾರೆ. ಒಂದು ವಿಡಿಯೋದಲ್ಲಂತೂ ಕೆಕೆ ವೇದಿಕೆ ಇಳಿದು ಬಂದು ಬೆವರು ಒರೆಸಿಕೊಳ್ಳುತ್ತಿದ್ದಾರೆ ಹಾಗೂ ಕಾರ್ಯಕ್ರಮ ಆಯೋಜಿಸಿರುವ ಸ್ಥಳ ತೀರ ಇಕ್ಕಟ್ಟಿನಿಂದ ಕೂಡಿರುವ ಬಗ್ಗೆ ದೂರು ಹೇಳಿದ್ದಾರೆ. ಹಾಗೂ ತಮ್ಮ ಮೇಲೆ ಹಾಕಲಾಗಿರುವ ತೀವ್ರ ಪ್ರಖರದ ಸ್ಪಾಟ್ ಲೈಟ್ ಅನ್ನು ಡಿಮ್ ಮಾಡುವಂತೆಯೂ ಹೇಳಿದ್ದಾರೆ.

ಕಾರ್ಯಕ್ರಮದ ಮುಂಚೆಯೂ ಆರೋಗ್ಯ ಸರಿ ಇರಲಿಲ್ಲ
ಕಾನ್ಸರ್ಟ್ ಆರಂಭಕ್ಕೆ ಮುಂಚಿನಿಂದಲೂ ಕೆಕೆಗೆ ಆರೋಗ್ಯ ಸರಿ ಇರಲಿಲ್ಲ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ಆದರೂ ಆಯೋಜಕರ ಒತ್ತಾಯದ ಮೇರೆಗೆ ಕೆಕೆ ಲೈವ್ ಕಾನ್ಸರ್ಟ್‌ನಲ್ಲಿ ಭಾಗಿಯಾಗಿದ್ದಾರೆ. ಅನಾರೋಗ್ಯದ ನಡುವೆಯೂ ಗಂಟೆಗಟ್ಟಲೆ ವೇದಿಕೆ ಮೇಲೆ ಕುಣಿಯುತ್ತಾ ಹಾಡುತ್ತ ದಣಿದ ಕೆಕೆ ಆರೋಗ್ಯ ಇನ್ನಷ್ಟು ಹದಗೆಟ್ಟ ಪರಿಣಾಮ ಅವರಿಗೆ ಹೃದಯ ಸ್ಥಂಭನವಾಗಿದೆ ಎಂದು ಕೆಲವರು ವಾದ ಹರಿಬಿಟ್ಟಿದ್ದಾರೆ.

ಕೊಲ್ಕತ್ತದಲ್ಲಿ ಮರಣೋತ್ತರ ಪರೀಕ್ಷೆ
ಇಂದು (ಜೂನ್ 1) ಕೊಲ್ಕತ್ತದಲ್ಲಿಯೇ ಕೆಕೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯುವ ಸಾಧ್ಯತೆ ಇದೆ. ಪ್ರಸ್ತುತ ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಕೆ, ಕನ್ನಡ ಸೇರಿದಂತೆ ಹಿಂದಿ, ಮಲಯಾಳಂ, ತಮಿಳು, ತೆಲುಗು ಇನ್ನೂ ಕೆಲವು ಭಾಷೆಗಳಲ್ಲಿ ಹಲವಾರು ಹಾಡುಗಳನ್ನು ಹಾಡಿದ್ದಾರೆ.


Click it and Unblock the Notifications











