"ನಾಟು ನಾಟು ಸ್ವಂತ ಟ್ಯೂನ್ ಅಲ್ಲ.. ಏನೋ ಕೀರವಾಣಿ ಮಾಡಿಬಿಟ್ರು ಅಂತಾರೆ": ಎಲ್. ಆರ್ ಈಶ್ವರಿ
ತಮ್ಮ ಕಂಠಸಿರಿಯಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹವಾ ಎಬ್ಬಿಸಿದ ಗಾಯಕಿ ಎಲ್. ಆರ್ ಈಶ್ವರಿ. 'ಜೋಕೆ ನಾನು ಬಳ್ಳಿಯ ಮಿಂಚು', 'ದೂರದಿಂದ ಬಂದಂತ ಸುಂದರಾಂಗ ಜಾಣ', 'ಬಾಜಿ ಕಟ್ಟಿ ನೋಡು ಬಾರ ಮೀಸೆ ಮಾವ', 'ರಸಿಕ ರಸಿಕ ಬಲು ಮೆಲ್ಲನೆ ಓಲಾಡು' ರೀತಿಯ ಸೂಪರ್ ಹಿಟ್ ಗೀತೆಗಳನ್ನು ಹಾಡಿ ಕನ್ನಡ ಸಿನಿರಸಿಕರಿಗೂ ಚಿರಪರಿಚಿತರಾಗಿದ್ದಾರೆ.
ಎಲ್. ಆರ್ ಈಶ್ವರಿ ವಿಶಿಷ್ಟ ಕಂಠ ಬಿಂದಾಸ್, ಪೆಪ್ಪಿ, ಜಾನಪದ ಹಾಡುಗಳಿಗೆ ಹೇಳಿಮಾಡಿಸಿದಂತಿತ್ತು. ಜಾನಕಿ, ಪಿ. ಸುಶೀಲಾರಂತಹ ಗಾಯಕಿಯರು ಮೆರೆಯುತ್ತಿದ್ದ ಸಮಯದಲ್ಲಿ ತಮ್ಮ ಗಾಯನದಿಂದ ಬೇರೆ ಹಾದಿಯನ್ನೇ ಇವರು ಕಂಡುಕೊಂಡರು. ಅವತ್ತಿನ ಕಾಲದ ಕ್ಯಾಬರೆ, ಐಟಂ ಸಾಂಗ್‌ಗಳಿಗೆ ಎಲ್. ಆರ್ ಈಶ್ವರಿ ದನಿಗೆ ಭಾರೀ ಬೇಡಿಕೆ ಇತ್ತು. ಆರಂಭದಲ್ಲಿ ಹೆಚ್ಚು ಭಕ್ತಿ ಗೀತೆಗಳನ್ನು ಅವರು ಹಾಡುತ್ತಿದ್ದರು. ಆಕೆ ಹಾಡಿರುವ ತೆಲುಗು, ತಮಿಳಿನ ಗೀತೆಗಳು ಇವತ್ತಿಗೂ ಸಿನಿರಸಿಕರ ಫೇವರಿಟ್ ಎನಿಸಿಕೊಂಡಿದೆ.

ಒಂದು ದೊಡ್ಡ ಗ್ಯಾಪ್ ತಗೊಂಡಿದ್ದ ಗಾಯಕಿ ಎಲ್. ಆರ್ ಈಶ್ವರಿ 12 ವರ್ಷಗಳ ಹಿಂದೆ ರೀಎಂಟ್ರಿ ಕೊಟ್ಟಿದ್ದರು. ಮತ್ತೆ ಕೆಲ ಹಿಟ್ ಗೀತೆಗಳನ್ನು ಹಾಡಿದರು. ಕನ್ನಡದಲ್ಲಿ 'ವಿಕ್ಟರಿ' ಚಿತ್ರದ 'ಯಕ್ಕಾ ನಿನ್ನ ಮಗಳು' ಹಾಡು ಹಾಡಿ ಗೆದ್ದರು. ಕೆಲ ದಿನಗಳ ಹಿಂದೆ 'ಪುಷ್ಪ' ಚಿತ್ರದ 'ಊ ಅಂಟಾವಾ ಮಾವಾ' ಹಾಡಿನ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದು ಕೆಲವರ ಅಚ್ಚರಿಗೆ ಕಾರಣವಾಗಿತ್ತು. ಇದೀಗ 'RRR' ಚಿತ್ರದ ಆಸ್ಕರ್ ವಿಜೇತ 'ನಾಟು ನಾಟು' ಹಾಡಿನ ಬಗ್ಗೆಯೂ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅದು ಜನಪದ ಗೀತೆ
ತೆಲುಗಿನ ಸುಮನ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಹಿರಿಯ ಗಾಯಕಲಿ ಎಲ್. ಆರ್ ಈಶ್ವರಿ ಮಾತನಾಡಿದ್ದಾರೆ. "ನಾಟು ನಾಟು, ಹಾಡಾ ಅಲ್ಲ ಜನಪದ ಗೀತೆ ಅದು. ರಾಮ್‌ಚರಣ್, ತಾರಕ್ ಇಬ್ಬರು ಬಹಳ ಸ್ಪೀಡ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅವರಿಬ್ಬರ ಡ್ಯಾನ್ಸ್ ಸೂಪರ್. ಆದರೆ ಹಾಡಿನಲ್ಲಿ ಏನು ಇಲ್ಲ. ಏನೋ ಕೀರವಾಣಿ ಮಾಡಿಬಿಟ್ರು ಅಂತಾರೆ. ಏನು ಮಾಡಿದ್ದಾರೆ. ಅದು ಜಾನಪದ ಗೀತೆ. ನಾಟು ಹಾಡುಗಳಲ್ಲಿ ಬರುವಂತಹ ಜಾನಪದ ಗೀತೆ.

'ನಾಟು ನಾಟು' ಹಾಡಿನಲ್ಲಿ ಏನು ಇಲ್ಲ
"ಹೊಲದಲ್ಲಿ ಕೆಲಸ ಮಾಡಿಕೊಂಡು ಹಾಡುವಂತಹ ಜನಪದ ಗೀತೆ ಅದು. ಚೆನ್ನಾಗಿ ಕೇಳಿದ್ರೆ ಅದು ಅರ್ಥವಾಗುತ್ತದೆ. ಏನು ಇಲ್ಲ ಆ ಹಾಡಿನಲ್ಲಿ. ಆಸ್ಕರ್ ಯಾವುದಕ್ಕೆ ಕೊಟ್ರು. ಏನಿದೆ ಅದರಲ್ಲಿ. ಅವರಿಬ್ಬರ ಡ್ಯಾನ್ಸ್ ಚೆನ್ನಾಗಿದೆ ಅಷ್ಟೇ. ಸ್ಪೀಡ್ ಆಗಿ ಡ್ಯಾನ್ಸ್ ಮಾಡ್ತಾರಲ್ಲ ಅದು ಚೆನ್ನಾಗಿದೆ. ಕೀರವಾಣಿ ಏನು ಮಾಡಿದ್ದಾರೆ ಹೇಳೊಕೆ ಹೇಳಿ ನೋಡೋಣ. ಸ್ವಂತ ಟ್ಯೂನ್ ಅಂತ ಹೇಳೋಕೆ ಹೇಳಿ ನೋಡೋಣ. ಕಂಪ್ಲೀಟ್ ಹಾಡಿಗೆ ಆಸ್ಕರ್ ಕೊಟ್ಟಿದ್ದಾರೆ ಅಷ್ಟೇ.
ಇಂತಹ ಹಾಡುಗಳು ಸಾಕಷ್ಟು ಇವೆ
"ನಾಟು ನಾಟು ಹಾಡಿನ ಟ್ಯೂನ್ ಅನ್ನು ಹೇಗೆ ಬೇಕಾದರೂ ಬದಲಿಸಿಕೊಳ್ಳಬಹುದು. ರಾಜಮೌಳಿ ಒಳ್ಳೆ ಸಿನಿಮಾ ಮಾಡಿದ್ದಾರೆ ನಿಜ. ಕೀರವಾಣಿಗೆ ಪ್ರಶಸ್ತಿ ಕೊಟ್ಟಿದ್ದು ಯಾಕೋ ಅರ್ಥವಾಗ್ಲಿಲ್ಲ. ಇಂತಹ ಹಾಡುಗಳು ಸಾಕಷ್ಟು ಇವೆ" ಎಂದು ಎ. ಆರ್ ಈಶ್ವರಿ ಹೇಳಿದ್ದಾರೆ. ಈ ಹಿಂದೆ 'ಪುಷ್ಪ' ಚಿತ್ರದ 'ಊ ಅಂಟಾವಾ ಮಾವ' ಹಾಡನ್ನು ಕೂಡ ಎಲ್. ಆರ್ ಈಶ್ವರಿ ಇದೇ ರೀತಿ ಟೀಕಿಸಿದ್ದರು. ಮತ್ತೊಮ್ಮೆ ಆ ಹಾಡಿನ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ಗಿರಿಯ ಗಾಯಕಿ, ಅದು ಒಂದು ಹಾಡಾ? ಏನು ಸಾಲು ಬರೆಯಬೇಕು ಎಂದು ಗೊತ್ತಿಲ್ಲದೇ, ಊ ಅಂಟಾವಾ ಹೂಂ ಅಂಟಾವ ಅಂತ ಬರೆದುಬಿಟ್ಟಿದ್ದಾರೆ" ಎಂದಿದ್ದಾರೆ.

ನನ್ನದೇ ಸಪರೇಟ್ ಟ್ರ್ಯಾಕ್
ತಮ್ಮ ಮೊದಲ ಸಂಭಾವನೆ 300 ರೂ. ಎಂದು ಎ. ಆರ್ ಈಶ್ವರಿ ಹೇಳಿದ್ದಾರೆ. ಆ ಕಾಲದಲ್ಲಿ ಎಲ್ಲರಿಗೂ ಅಷ್ಟೇ ಸಂಭಾವನೆ ಸಿಗುತ್ತಿತ್ತು. "ಎಸ್. ಜಾನಕಿ ಹಾಗೂ ಸುಶೀಲ ಅವರು ಪೀಕ್‌ನಲ್ಲಿ ಇದ್ದಾಗ ನಾನು ಇಂಡಸ್ಟ್ರಿಗೆ ಬಂದೆ. ಆದರೆ ದೇವರ ದಯೆಯಿಂದ ಅವರು ಒಂದು ಕಡೆ ಡಾಮಿನೇಟ್ ಮಾಡಿದರೂ ನನ್ನದೇ ಸಪರೇಟ್ ಟ್ರ್ಯಾಕ್ ಇತ್ತು. ಅದರಲ್ಲಿ ಸಾಗುವಂತೆ ಆ ದೇವರೇ ಮಾಡಿದ. ಆ ದೇವರೇ ಅಂತಹ ಟ್ರ್ಯಾಕ್ ಹುಟ್ಟುಹಾಕಿ ಇದಕ್ಕೆ ಎಲ್. ಆರ್ ಈಶ್ವರಿ ವಾಯ್ಸ್ ಬೇಕು ಎನ್ನುವಂತೆ ಮಾಡಿಬಿಟ್ಟ. ಹಾಗಾಗಿ ಅವಕಾಶಗಳು ಸಿಗುತ್ತಾ ಹೋಯಿತು" ಎಂದಿದ್ದಾರೆ.


Click it and Unblock the Notifications











