ಟಗರು ಸಕ್ಸಸ್, ಸಲಗ ಹಿಟ್: ಸ್ಯಾಂಡಲ್‌ವುಡ್ ಸಂಗೀತಕ್ಕೆ ಚರಣ್ 'ರಾಜ'
ಅರ್ಜುನ್ ಜನ್ಯ, ಹರಿಕೃಷ್ಣ ನಂತರ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಸಂಗೀತ ನಿರ್ದೇಶಕ ಚರಣ್ ರಾಜ್. ವಿಭಿನ್ನ ಹಾಡುಗಳು ಹಾಗೂ ಹಿನ್ನೆಲೆ ಸಂಗೀತದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಎಬ್ಬಿಸಿರುವ ಮ್ಯೂಸಿಕ್ ಡೈರೆಕ್ಟರ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಚರಣ್ ರಾಜ್ ಅವರ ಸಂಗೀತಕ್ಕಾಗಿಯೇ ಪ್ರತ್ಯೇಕ ಪ್ರೇಕ್ಷಕರು ಹುಟ್ಟಿಕೊಂಡಿದ್ದಾರೆ. ಅವರ ಸಂಗೀತದಲ್ಲಿ ಮೂಡಿಬರುವ ಹಾಡುಗಳನ್ನು ಕೇಳಬೇಕು ಎಂದು ಕಾಯುವ ಸಂಗೀತ ಪ್ರಿಯರಿದ್ದಾರೆ. ನಮ್ಮ ಸ್ಟಾರ್ ನಟನ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಲಿ ಎಂದು ಕೇಳುವ ಅಭಿಮಾನಿಗಳಿದ್ದಾರೆ. ಪ್ರಸ್ತುತ, ಕನ್ನಡ ಇಂಡಸ್ಟ್ರಿಯಲ್ಲಿ ಚರಣ್ ರಾಜ್ ಹೆಚ್ಚು ಸದ್ದು ಮಾಡ್ತಿದ್ದಾರೆ. ಅದರಲ್ಲೂ ಟಗರು ಸಿನಿಮಾ ಬಂದ್ಲೇಲೆ ಚರಣ್ ಅವರ ಖ್ಯಾತಿ ಬಹಳ ಎತ್ತರಕ್ಕೆ ಜಿಗಿದಿದೆ. ಸ್ಟಾರ್ ನಟರ ಸಿನಿಮಾಗಳು ಹಾಗೂ ಕಮರ್ಷಿಯಲ್ ಚಿತ್ರಗಳ ಆಫರ್ ಹೆಚ್ಚಾಗಿದೆ. ಮುಂದೆ ಓದಿ.....

ಮಲಯಾಳಂ ಆಲ್ಬುಂಗೆ ಸಂಗೀತ
2008ರಲ್ಲಿ ಮಲಯಾಳಂ ಭಾಷೆಯ 'ತಾಳಂ' ಎಂಬ ಆಲ್ಬುಂಗೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದರು. 2014ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ 'ಹರಿವು' ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದರು.

'ಪುಷ್ಪಕ ವಿಮಾನ' ಹತ್ತಿದ ಚರಣ್
ರಕ್ಷಿತ್ ಶೆಟ್ಟಿ ಮತ್ತು ಅನಂತ್ ನಾಗ್ ನಟನೆಯ 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರಕ್ಕೆ ಸಂಗೀತ ನಿರ್ದೇಶಕರಾದರು. ಸಿನಿಮಾ ಹಿಟ್ ಆಯಿತು. ಹಾಡುಗಳು ಹಾಗೂಸ ಹಿನ್ನೆಲೆ ಸಂಗೀತ ಗಮನ ಸೆಳೆಯಿತು. ರಮೇಶ್ ಅರವಿಂದ್ ಅವರ 100ನೇ ಸಿನಿಮಾ 'ಪುಷ್ಪಕ ವಿಮಾನ' ಚಿತ್ರಕ್ಕೆ ಸಂಗೀತ ನೀಡಿದರು. ಈ ಚಿತ್ರದಲ್ಲಿ ಚರಣ್ ರಾಜ್ ಮೋಡಿ ಮಾಡಿದರು. ಆದರೆ, ಕಮರ್ಷಿಯಲ್ ಆಗಿ ದೊಡ್ಡ ಸಕ್ಸಸ್ ಸಿಕ್ಕಿರಲಿಲ್ಲ.

ಅದೃಷ್ಟ ತಂದ 'ಟಗರು'
ಶಿವರಾಜ್ ಕುಮಾರ್ ಮತ್ತು ಸೂರಿ ಕಾಂಬಿನೇಷನ್‌ನಲ್ಲಿ ಬಂದ ಟಗರು ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ ಆಯ್ಕೆಯಾದರು. ಈ ಚಿತ್ರದ ಎಲ್ಲ ಹಾಡುಗಳು ದೊಡ್ಡ ಹಿಟ್ ಆಯಿತು. ಕನ್ನಡ ಇಂಡಸ್ಟ್ರಿಗೆ ಚರಣ್ ರಾಜ್ ಎಂಬ ಹೆಸರನ್ನು ಗಟ್ಟಿಯಾಗಿ ಕೂಗಿ ಹೇಳುವಂತೆ ಮಾಡಿತು. ಕವಲುದಾರಿ, ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಎರಡು ಹಾಡು, ಪಾಪ್‌ಕಾರ್ನ್ ಮಂಕಿ ಟೈಗರ್, ಭೀಮಸೇನಾ ನಳಮಹಾರಾಜ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಷನ್ ಮಾಡಿದ್ದಾರೆ.

ದುನಿಯಾ ವಿಜಿಯ 'ಸಲಗ'
ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಸಲಗ ಚಿತ್ರದಲ್ಲಿ ಹಾಡುಗಳು ಹಿಟ್ ಆಗಿದೆ. ಟಗರು ನಂತರ ಚರಣ್ ರಾಜ್ ಮತ್ತೆ ದೊಡ್ಡದಾಗಿ ಸದ್ದು ಮಾಡ್ತಿದ್ದಾರೆ. ಇದರ ಜೊತೆಗೆ ಮೈಸೂರು ಡೈರೀಸ್, ಪುನೀತ್ ರಾಜ್ ಕುಮಾರ್ ಜೇಮ್ಸ್, ಅಭಿಷೇಕ್ ಅಂಬರೀಶ್ ಅವರ ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೂ ಚರಣ್ ಸಂಗೀತವಿದೆ.


Click it and Unblock the Notifications











