Mysuru Dasara 2023: ನಾನು ಹಚ್ಚಿದ್ದು ಕನ್ನಡದ ದೀಪ ಎನ್ನುತ್ತಾ ನಾಡಹಬ್ಬಕ್ಕೆ ಚಾಲನೆ ನೀಡಿದ ನಾದಬ್ರಹ್ಮ ಹಂಸಲೇಖ
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿಬೆಟ್ಟದ ಸನ್ನಿಧಿಯಲ್ಲಿ ಖ್ಯಾತ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಭಾನುವಾರ (ಅಕ್ಟೋಬರ್ 15)ಕ್ಕೆ ವಿಧ್ಯುಕ್ತ ಚಾಲನೆ ನೀಡಿದ್ದಾರೆ. ನಾನು ಇಲ್ಲಿ ಹಚ್ಚಿದ್ದು ಕನ್ನಡದ ದೀಪ ಎಂದು ಹೇಳಿ ಕನ್ನಡದ ಪ್ರೇಮವನ್ನು ಹಂಚಿದ್ದಾರೆ.
ಅಕ್ಟೋಬರ್ 15ರಿಂದ ದಸರಾ ಮಹೋತ್ಸವ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ಹಬ್ಬದ ವಾತಾವರಣ ನಿರ್ಮಾವಾಗಿತ್ತು. ರಸ್ತೆಗಳ ತುಂಬಾ ರಂಗೋಲಿಗಳ ಚಿತ್ತಾರ, ವೀರಗಾಸೆ, ಡೊಳ್ಳು, ಕಂಸಾಳೆ ಹಾಗೂ ನಗಾರಿ ಕಲಾತಂಡಗಳು ಹಂಸಲೇಖ ಅವರನ್ನು ಬರಮಾಡಿಕೊಂಡಿವೆ. ಬೆಳಗ್ಗೆ 10.15 ರಿಂದ 10.36ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖ ಹತ್ತು ದಿನಗಳ ನಾಡಹಬ್ಬಕ್ಕೆ ಚಾಲನೆ ನೀಡಿದ್ದಾರೆ.

ಪೂಜ್ಯ ಕನ್ನಡಿಗರಿಗೆ ಎನ್ನುತ್ತ ಮಾತು ಶುರು ಮಾಡಿದ ನಾದಬ್ರಹ್ಮ
ನಾದಬ್ರಹ್ಮ ಹಂಸಲೇಖ ಪೂಜ್ಯ ಕನ್ನಡಿಗರಿಗೆ ಎನ್ನುತ್ತಲೇ ಮಾತು ಶುರು ಮಾಡಿದ್ದಾರೆ. "ಕರ್ನಾಟಕದ ಏಕೀಕರಣಕ್ಕೆ ಇದೀಗ 50 ವರ್ಷ ತುಂಬಿದೆ. ನನ್ನ ಕಲಾ ಕಾಯಕಕ್ಕೂ ಐವತ್ತು ವರ್ಷ ತುಂಬಿದೆ. ಇಂದು ನನಗೆ ಸಿಕ್ಕಿರುವ ಈ ಅವಕಾಶ ಬಹಳ ಬೆಲೆ ಬಾಳುವಂತದ್ದು. ಸಾವಿರ ಮೆಟ್ಟಿಲು ಹತ್ತಿ ಇಲ್ಲಿಯವರೆಗೆ ಬಂದಿದ್ದೇನೆ. ಈ ಬೆಟ್ಟ, ಈ ಹಬ್ಬ, ಈ ದೀಪ ಹಚ್ಚೋದು ಪುಣ್ಯದ ಕೆಲಸ. ಈ ಸಂಭ್ರಮಕ್ಕೆ ನಾನು ಯಾರನ್ನು ನೆನೆಯಲಿ" ಎಂದು ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.
ಮುಂದುವರಿದು ಮಾತನಾಡಿದ ಅವರು, "ನಾನು ಹಚ್ಚಿದ್ದು ಕನ್ನಡದ ದೀಪ. ಈ ದೀಪ ಹಚ್ಚಲು ನನಗೆ ಇಡೀ ನಾಡಿನ ಆಶಯ ಇದೆ. ದಸರಾ ಒಂದು ಜೀವಂತ ಮಹಾಕಾವ್ಯ. ವೀರತೆಂಕಣದ ಮಹಾಕಾವ್ಯ ಇದು. ಕನ್ನಡ ನಮ್ಮ ಶೃತಿ ಆಗಬೇಕು. ಆಳಿದರೆ ಕೃತಿಯಂತಿರಬೇಕು. ಕನ್ನಡದ ಭಾಷೆಗೆ ಮಿತಿ ಇದೆ. ಆದರೆ ಅದರ ಭಾವಕ್ಕೆ ಮಿತಿ ಎಲ್ಲಿದೆ" ಎಂದು ಪ್ರಶ್ನಿಸಿದ್ದಾರೆ.
ದೆಹಲಿಗೆ ಯಾಕೋ ಕನ್ನಡ ಬೇಡವಾಗಿದೆ ಎಂದ ಹಂಸಲೇಖ
ರಾಷ್ಟ್ರ ಭಾಷೆ, ತ್ರಿಭಾಷಾ ಸೂತ್ರದ ಹೆಸರಲ್ಲಿ ಕನ್ನಡದ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬುದನ್ನು ನೆನಪಿಸಿಕೊಂಡ ಅವರು, "ದೆಹಲಿ ನಮಗೆ ಬೇಕು. ದೆಹಲಿಗೂ ಕನ್ನಡ ಬೇಕು. ಆದರೆ, ದೆಹಲಿಗೆ ಯಾಕೋ ಕನ್ನಡ ಬೇಡವಾಗಿದೆ. ಕನ್ನಡ ವಿಶ್ವಭಾಷೆ ಆಗಬೇಕು. ಅಭಿವೃದ್ಧಿ ಶಾಂತಿಮಂತ್ರ ಒಂದಂಶದ ಕಾರ್ಯಕ್ರಮ ಆಗಬೇಕು. ಹೊರ ರಾಜ್ಯದ ಕಾರ್ಪೋರೇಟ್ ಕಂಪನಿಯ ನೌಕರರಿಗೆ ಕನ್ನಡ ಕಲಿಸಬೇಕು. ಕನ್ನಡ ಕಲಿಸುವ ಪುಸ್ತಕ ಹೊರಬರಬೇಕು" ಎಂದು ಹಂಸಲೇಖ ಒತ್ತಾಯಿಸಿದ್ದಾರೆ.

"ಮಂಗಳೂರು ಮೈಸೂರು ಜೋಡಿ ಜಿಲ್ಲೆ ಆಗಬೇಕು. ಈ ಎರಡು ಜಿಲ್ಲೆಯಲ್ಲಿ ಅಪಾರ ಸಾಂಸ್ಕೃತಿಕ ಕಣಜವಿದೆ. ವ್ಯಾಪಾರ - ವಿನಿಮಯ ಆಗಬೇಕು. ಎಲ್ಲಾ ಜಿಲ್ಲೆಗಳನ್ನು ಎರಡು ಜಿಲ್ಲೆಯಾಗಿ ಜೋಡಿಸಬೇಕಿದೆ. ಕೃಷಿಕರು - ಕಾರ್ಪೋರೇಟರ್ ಒಂದಾಗಿ ಸಾಗಬೇಕು. ಕನ್ನಡದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಬದ್ಧರಾಗೋಣ. ಮಗುವಿಗೆ ಕನ್ನಡವನ್ನು ತಾಯಿ ಕಲಿಸಬೇಕು. ಮನುಜ ಮತ ವಿಶ್ವ ಪಥ ಎಲ್ಲೆಡೆ ಪರಿಸಬೇಕು. ಶಾಂತಿಮಂತ್ರವನ್ನು ನಾವೆಲ್ಲರೂ ಮಾಡೋಣ" ಎಂದು ಹೇಳಿದ್ದಾರೆ.
ಹಂಸಲೇಖ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮೇಯರ್ ಶಿವಕುಮಾರ್, ಸಂಸದ ಪ್ರತಾಪಸಿಂಹ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್, ಇಂಧನ ಸಚಿವ ಕೆ.ಜೆ.ಜಾರ್ಚ್ ಸೇರಿದಂತೆ ಇತರ ಸಚಿವರು ಹಾಗೂ ಶಾಸಕರು ಸಾಥ್ ನೀಡಿದ್ದಾರೆ.


Click it and Unblock the Notifications











