ನಟ 'ಭಯಂಕರ' ಹಿಟ್ ಆದ 'ಗಾಂಚಲಿ ಗೀತಾ' ಹಾಡು.!
'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿದ್ದೇ ತಡ 'ಒಳ್ಳೆ ಹುಡುಗ' ಅಂತ ಸ್ವಯಂ ಬೆನ್ನು ತಟ್ಟಿಕೊಳ್ಳುವ ಪ್ರಥಮ್ ನಸೀಬೇ ಖುಲಾಯಿಸಿಬಿಡ್ತು. ಅಲ್ಲಿಯವರೆಗೂ ನಿರ್ದೇಶಕರಾಗಿದ್ದ ಪ್ರಥಮ್.. 'ಬಿಗ್ ಬಾಸ್' ವಿನ್ನರ್ ಆದ್ಮೇಲೆ ಹೀರೋ ಆಗ್ಬಿಟ್ಟರು. 'ದೇವರಂಥ ಮನುಷ್ಯ' ಮತ್ತು 'ಎಂ.ಎಲ್.ಎ' ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ ಪ್ರಥಮ್ ಇದೀಗ 'ನಟ ಭಯಂಕರ'ನಾಗಿದ್ದಾರೆ.
'ನಟ ಭಯಂಕರ' ಚಿತ್ರದಲ್ಲಿ ನಟನೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಪ್ರಥಮ್ ಹೊತ್ತಿದ್ದಾರೆ. ಹೀಗಾಗಿ, ಸಿನಿಮಾ ಸೆಟ್ಟೇರಿದಾಗಿನಿಂದಲೂ ಗಾಂಧಿನಗರದಲ್ಲಿ 'ನಟ ಭಯಂಕರ'ನ ಅಬ್ಬರ ಜೋರಾಗಿದೆ.
ಸದ್ಯ 'ನಟ ಭಯಂಕರ' ಚಿತ್ರದ ''ಗೀತಾ ಗೀತಾ.. ಗಾಂಚಲಿ ಗೀತಾ..'' ಲಿರಿಕಲ್ ಹಾಡು ಬಿಡುಗಡೆ ಆಗಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೊನ್ನೆಯಷ್ಟೇ ''ಗಾಂಚಲಿ ಗೀತಾ'' ಚಿತ್ರದ ಹಾಡನ್ನು ರಿಲೀಸ್ ಮಾಡಿದರು.

ಇದೀಗ ಯೂಟ್ಯೂಬ್ ನಲ್ಲಿ ''ಗಾಂಚಲಿ ಗೀತಾ'' ಭಯಂಕರ ಹಿಟ್ ಆಗಿದೆ. ಸಂಜಿತ್ ಹೆಗ್ಡೆ ಹಾಡಿರುವ ಈ ಹಾಡಿಗೆ ಎರಡು ಲಕ್ಷಕ್ಕೂ ಅಧಿಕ ವ್ಯೂಸ್ ಲಭಿಸಿದೆ. ಸಾವಿರಾರು ಮಂದಿ ಈ ಹಾಡನ್ನ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚಿದ್ದಾರೆ.
''ಗೀತಾ.. ಗೀತಾ.. ಗಾಂಚಲಿ ಗೀತಾ
ನನ್ನ ಮೇಲೆ ಪ್ರೀತಿ ಬಂತಾ..
ಹೃದಯ ಹೃದಯ ಕೇಳಿದೆ ವಿಷಯ
ಹೇಳೆ ಬೇಗ ನೂಕದೆ ಸಮಯ...'' ಎಂದು ಆರಂಭವಾಗುವ ಈ ಹಾಡಿಗೆ ಅರಸು ಅಂತಾರೆ ಸಾಹಿತ್ಯ ಮತ್ತು ಪ್ರಧ್ಯೋಥನ್ ಸಂಗೀತ ನಿರ್ದೇಶನವಿದೆ.
ಅಂದ್ಹಾಗೆ, 'ನಟ ಭಯಂಕರ' ಚಿತ್ರದಲ್ಲಿ ಪ್ರಥಮ್, ಸುಶ್ಮಿತಾ ಜೋಷಿ, ನಿಹಾರಿಕಾ ಶೆಣೈ, ಶೋಭರಾಜ್, ಕುರಿ ಪ್ರತಾಪ್, ಓಂ ಪ್ರಕಾಶ್ ರಾವ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸದ್ಯದಲ್ಲೇ 'ನಟ ಭಯಂಕರ' ತೆರೆಗೆ ಬರಲಿದೆ.


Click it and Unblock the Notifications











