"ಟೀಕೆ ಮಾಡೋರ್ಗೆಲ್ಲ ಟೀಗೂ ಕಾಸಿರಲ್ಲ.. ಕೇರ್ ಎ ಮಾಡಬೇಡ ರಾಜ"; 'ಯುವ' ಕೌಂಟರ್ ಯಾರಿಗೆ?
ಕನ್ನಡದ ಸ್ಟಾರ್ ನಟರ ಸಿನಿಮಾಗಳಲ್ಲಿ ಕೆಲ ದಿನಗಳ ಹಿಂದೆ ಕೌಂಟರ್ ಡೈಲಾಗ್‌ಗಳು ಜಾಸ್ತಿ ಆಗಿಬಿಟ್ಟಿತ್ತು. ದರ್ಶನ್ ಹಾಗೂ ಯಶ್ ಸಿನಿಮಾಗಳಲ್ಲಿ ಮೇಲ್ನೋಟಕ್ಕೆ ಎದ್ದು ಕಾಣಿಸುತ್ತಿತ್ತು. ಕೆಲವೊಂದು ಡೈಲಾಗ್‌ಗಳು ಕಥೆಯನ್ನು ಬಿಟ್ಟು ಹೊರಗಡೆ ಬಂದುಬಿಡುತ್ತಿದ್ದವು. ನಾಯಕ ನಟರ ಅಭಿಮಾನಿಗಳನ್ನು ರಂಜಿಸಲು ಇಂತಹ ಸಾಲುಗಳನ್ನು ಬರಹಗಾರರು ಬರೆದಿದ್ದು ಕೆಲವೊಮ್ಮೆ ಬರೆಸಿದ್ದು ಇದೆ.
ಸದ್ಯ ರಿಲೀಸ್ ಆಗಿರುವ 'ಯುವ' ಚಿತ್ರದ ಫಸ್ಟ್ ಸಾಂಗ್‌ನಲ್ಲಿ ಕೂಡ ಇಂತಹ ಕೌಂಟರ್‌ಗಳು ಜಾಸ್ತಿನೇ ಇದೆ. ಅದು ಯಾರಿಗೆ? ಯಾಕೆ? ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್ ಇಂದು ನಿನ್ನೆಯದಲ್ಲ. ಅಣ್ಣಾವ್ರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಡಾ. ರಾಜ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ನಡುವಿನ ಸಂಘರ್ಷಗಳು ರಹಸ್ಯವಾಗಿ ಏನು ಉಳಿದಿರಲಿಲ್ಲ.

ಸೋಶಿಯಲ್ ಮೀಡಿಯಾ ಜಮಾನದಲ್ಲಿ ಫ್ಯಾನ್ಸ್ ವಾರ್ ಮತ್ತೊಂದು ಹಂತ ತಲುಪಿದೆ. ಟ್ರೋಲ್, ಟ್ರೆಂಡ್, ಮೀಮ್ ಅಂತೆಲ್ಲಾ ಭಾರೀ ಕೆಸರೆರಚಾಟ ನಡೆಯುತ್ತಿರುತ್ತದೆ. ಪ್ರತಿಯೊಬ್ಬರ ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲಿ ಇಡೀ ಪ್ರಪಂಚದ ಮುಂದೆ ಬರುತ್ತಿದೆ. ಅದನ್ನು ಬೆಂಬಲಿಸುವುದು ಅಥವಾ ತಿರುಗೇಟು ನೀಡುವುದು ಜಾಸ್ತಿ ಆಗ್ತಿದೆ. ಕೆಲವೊಮ್ಮೆ ಸ್ಟಾರ್ ನಟರ ಮಾತುಗಳು ನೇರವಾಗಿ ಪರೋಕ್ಷವಾಗಿ ಅದಕ್ಕೆ ತುಪ್ಪ ಸುರಿಯುವಂತೆ ಇರುತ್ತದೆ.
ಏಳೆಂಟು ವರ್ಷಗಳ ಹಿಂದೆ ಕನ್ನಡ ಸಿನಿಮಾಗಳಲ್ಲಿ ಈ ಕೌಂಟರ್ ಡೈಲಾಗ್ ಅನ್ನೋದು ಭಾರೀ ಸದ್ದು ಮಾಡಿತ್ತು. ಇತ್ತೀಚೆಗೆ ಅದನ್ನು ಹಾಡುಗಳಿಗೂ ತರಲಾಗುತ್ತಿದೆ. 'ಯುವ' ಚಿತ್ರದ ಟೈಟಲ್ ಸಾಂಗ್‌ನಲ್ಲಿ ಅದು ಎದ್ದು ಕಾಣುತ್ತಿದೆ. ಮೇಲ್ನೋಟಕ್ಕೆ ಇದು ಬರೀ ಹೀರೊ ಬಿಲ್ಡಪ್ ಸಾಂಗ್ ಅನ್ನಿಸಿದರೂ ಪರೋಕ್ಷವಾಗಿ ಕೆಲವರಿಗೆ ಟಾಂಗ್ ಕೊಡುವಂತಿದೆ. ನಾನೇ ರಾಜ, ನಾನೇ ಎಲ್ಲಾ, ನನ್ನಿಂದಲೇ ಎಲ್ಲಾ ಎಂದು ಬಡಾಯಿ ಕೊಚ್ಚಿಕೊಂಡಿರುವುದು ಗೊತ್ತಾಗುತ್ತದೆ.
'ಯುವ' ಚಿತ್ರದ 'ಒಬ್ಬನೇ ಶಿವ ಒಬ್ಬನೇ ಯುವ' ಹಾಡಿಗೆ ಖುದ್ದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತಕ್ಕೆ ನಕಾಶ್ ಅಜೀಜ್ ಜೊತೆ ಸೇರಿ ಆನಂದ್‌ರಾಮ್ ಹಾಡನ್ನು ಹಾಡಿದ್ದಾರೆ. ಟ್ಯೂನ್ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದರೂ ಸಾಹಿತ್ಯದ ಬಗ್ಗೆ ಅಭಿಮಾನಿಗಳು ಮೆಚ್ಚಿ ಕೊಂಡಾಡುತ್ತಿದ್ದಾರೆ. ಸಂತೋಷ್ ಆನಂದ್‌ರಾಮ್ ದೊಡ್ಮನೆ ಅಭಿಮಾನಿ ಸಂಘದ ಅಧ್ಯಕ್ಷ ಎನ್ನುತ್ತಿದ್ದಾರೆ.

ಅಪ್ಪು ಅಗಲಿಕೆ ಬಳಿಕ ಸಾಕಷ್ಟು ಜನ ಯುವ ರಾಜ್‌ಕುಮಾರ್ ಕಣ್ಣಲ್ಲಿ ಅಪ್ಪುನ ನೋಡುತ್ತಿದ್ದಾರೆ. ನಮ್ಮ ಮುಂದಿನ ಪವರ್ ಸ್ಟಾರ್ ಯುವ ಎನ್ನುತ್ತಿದ್ದಾರೆ. ಪುನೀತ್ ಲೆಗಸಿಯನ್ನು ಯುವ ರಾಜ್‌ಕುಮಾರ್ ಮುಂದುವರೆಸುತ್ತಾರೆ ಎಂದು ಕಾಯುತ್ತಿದ್ದಾರೆ. ಅಪ್ಪು ಎಲ್ಲೂ ಹೋಗಿಲ್ಲ ಯುವ ರೂಪದಲ್ಲಿ ನಮ್ಮೊಟ್ಟಿಗೆ ಇದ್ದಾರೆ, ಇರ್ತಾರೆ ಎನ್ನುವುದನ್ನು ಆನಂದ್‌ರಾಮ್ ಹಾಡಿನ ಆರಂಭದ ಸಾಲುಗಳಲ್ಲೇ ದಾಟಿಸಲು ಪ್ರಯತ್ನಿಸಿದ್ದಾರೆ.
ಹೀರೊ ಆಗಲು ಬೇಕಾದ ಎಲ್ಲಾ ರೀತಿಯ ಪಟ್ಟುಗಳನ್ನು ಕಲಿತು ಯುವ ಎಂಟ್ರಿ ಕೊಡುತ್ತಿದ್ದಾರೆ. ಮುಖ್ಯವಾಗಿ ಡ್ಯಾನ್ಸ್ ಮತ್ತು ಸ್ಟಂಟ್ಸ್ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಹಾಡಿನಲ್ಲಿ ಸಖತ್ ರಗಡ್ ಹಾಗೂ ಸ್ಟೈಲಿಶ್ ಲುಕ್‌ನಲ್ಲಿ ಜಬರ್ದಸ್ತ್ ಸ್ಟೆಪ್ಸ್ ಹಾಕಿ ಯುವ ಗಮನ ಸೆಳೆಯುತ್ತಿದ್ದಾರೆ.
"ಸುಮ್ನೆ ಬಂದೋನಲ್ಲ ಸುಮ್ನೆ ಹೋಗೋನಲ್ಲ ಸುಮ್ನೆ ಕೂರೋದಿಲ್ಲ ರಾಜ" ಎನ್ನುವ ಸಾಲುಗಳು ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ. "ಎದುರಾಳಿ ಯಾರೇ ಇದ್ದರೇನು
ಪ್ರತಿದಾಳಿ ಮಿಸ್ಸೇ ಇಲ್ಲ" ಎನ್ನುವಲ್ಲಿಂದ ಹಾಡು ಬೇರೆಯದ್ದೇ ಮಜಲಿಗೆ ಸಾಗುತ್ತದೆ. ಅಲ್ಲಿಂದ ಮುಂದೆ ಬರುವ ಸಾಲುಗಳು ಬರೀ ಹೀರೋ ಬಿಲ್ಡಪ್ ಆಗಿ ಉಳಿಯದೇ ಗುಪ್ತಗಾಮಿನಿಯಂತೆ ಬೇರೆ ಅರ್ಥವನ್ನೇ ಕೊಡಲು ಆರಂಭಿಸುತ್ತದೆ. ಉದ್ದೇಶಪೂರ್ವಕವಾಗಿ ಯಾರನ್ನೋ ಟಾರ್ಗೆಟ್ ಮಾಡಿದಂತೆ ಕಾಣುತ್ತಿದೆ.
ಸ್ಟಾರ್ ನಟರ ನಡುವೆ ಯಾವುದೇ ತಿಕ್ಕಾಟ ಇಲ್ಲದಿದ್ದರೂ ಫ್ಯಾನ್ಸ್ ವಾರ್ ನಡೆಯುತ್ತಿರುತ್ತದೆ. ನಟರು ಈ ಬಗ್ಗೆ ಮೌನವಹಿಸುವುದರಿಂದ ಅದು ಸಹಜವಾಗಿಯೇ ದೊಡ್ಡದಾಗುತ್ತಾ ಹೋಗುತ್ತದೆ. ಹೊಸಪೇಟೆ ಘಟನೆ ಬಳಿಕ ಏನೆಲ್ಲಾ ಆಯಿತು ಎನ್ನುವುದು ಗೊತ್ತೇಯಿದೆ. ಸುಖಾಸುಮ್ಮನೆ ಈ ಘಟನೆ ಬಗ್ಗೆ ದರ್ಶನ್ ಅಭಿಮಾನಿಗಳು ಹಾಗೂ ಪುನೀತ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಕೆಸರೆರಚಾಟ ನಡೆದಿತ್ತು. ಈ ಬಗ್ಗೆ ಯುವ ರಾಜ್‌ಕುಮಾರ್ ಪತ್ರ ಬರೆದು ಪ್ರತಿಕ್ರಿಯಿಸಿದ್ದರು. "ಯಾರೋ ಮಾಡಿದ ತಪ್ಪನ್ನು ಮತ್ತೊಬ್ಬರ ಮೇಲೆ ಹಾಕುವುದರಿಂದ ಸುಳ್ಳು ಸತ್ಯವಾಗುವುದಿಲ್ಲ. ಪೊಲೀಸ್ ತನಿಖೆ ನಡೆಯುತ್ತಿದೆ, ತಪ್ಪಿತಸ್ಥ ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಖಂಡಿತ ಆಗುತ್ತದೆ" ಎಂದಿದ್ದರು.
ಇನ್ನು 'ಯುವ' ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆಯೂ ಕೆಲವರು ಟ್ರೋಲ್ ಮಾಡಿದ್ದರು. ಅಂತಹವರಿಗೆಲ್ಲಾ ಈ ಹಾಡಿನ ಮೂಲಕ ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. "ಟೀಕೆ ಮಾಡೋರಿಗೆಲ್ಲ ಟೀಗೂ ಕಾಸಿರಲ್ಲ, ಕೇರ್ ಎ ಮಾಡಬೇಡ ರಾಜ" ಎನ್ನುವ ಸಾಲುಗಳಂತೂ ಬಹಳ ಟ್ರೆಂಡ್ ಆಗ್ತಿದೆ. ಮೊದಲ ಸಿನಿಮಾಗೆ ಇಂತಹ ಬಿಲ್ಡಪ್ ಲಿರಿಕ್ಸ್ ಬೇಕಿತ್ತಾ? ಎನ್ನುವ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











