'ಓಡ್ರೋ ಓಡ್ರೋ ಇದು ಸರ್ಜಾ ಅಡ್ಡ' ಎಂದು ಹಾಡಿದ್ದ ಅಭಿಮಾನಿ ಹೊಸ ಹಾಡು ವೈರಲ್
ಧ್ರುವ ಸರ್ಜಾ ನಟನೆಯ 'KD' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ 'ಗುರುವೇ ನಿನ್ನಾಟ ಬಲ್ಲವರು ಯಾರ್ಯಾರೋ' ಸೂಪರ್ ಹಿಟ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಇನ್ನು ಧ್ರುವ ಸರ್ಜಾ ಅಭಿಮಾನಿಯೊಬ್ಬರು ಈ ಹಿಂದೆ 'ಓಡ್ರೋ ಓಡ್ರೋ ಇದು ಸರ್ಜಾ ಅಡ್ಡ' ಎಂದು ಹಾಡು ಹಾಡಿದ್ದರು.
'ಮಾರ್ಟಿನ್' ಸಿನಿಮಾ ಬಿಡುಗಡೆಗೂ ಮುನ್ನ ಶ್ರೀನಿವಾಸ್ ಎಂದು ಧ್ರುವ ಅಭಿಮಾನಿ ಆ ಹಾಡು ಹಾಡಿದ್ದರು. ತಾವೇ ಸಾಹಿತ್ಯ ಬರೆದು ನೆಚ್ಚಿನ ನಟನ ಮುಂದೆ ಬಂದು ಹಾಡಿದ್ದರು. ಬಹಳ ವಿಭಿನ್ನವಾಗಿದ್ದ ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವೀಕೆಂಡ್‌ಗಳಲ್ಲಿ ಧ್ರುವ ಸರ್ಜಾ ನಿವಾಸದ ಬಳಿಕ ಸಾಕಷ್ಟು ಅಭಿಮಾನಗಳು ಜಮಾಯಿಸುತ್ತಾರೆ. ನೆಚ್ಚಿನ ನಟನ ಎದುರು ಡೈಲಾಗ್, ಸಾಂಗ್ಸ್ ಹೇಳುತ್ತಾರೆ.

ತಮ್ಮ ಅಭಿಮಾನಿಗಳನ್ನು ವಿಐಪಿಗಳು ಎಂದು ಆಕ್ಷನ್ ಪ್ರಿನ್ಸ್ ಕರೆಯುತ್ತಾರೆ. ಅಂದು ಶ್ರೀನಿವಾಸ್ ಎಂಬ ಅಭಿಮಾನಿ ಬಂದು ಹಾಡು ಹೇಳಬೇಕು ಎಂದು ಹೇಳಿ 'ಓಡ್ರೋ ಓಡ್ರೋ ಇದು ಸರ್ಜಾ ಅಡ್ಡ' ಎಂದು ಹಾಡಲು ಶುರು ಮಾಡಿದ್ದರು. ಧ್ರುವ ಸರ್ಜಾ ಕೂಡ ಬಹಳ ತಾಳ್ಮೆಯಿಂದ ಹಾಡು ಆಲಿಸಿದ್ದರು. ಇದೀಗ 'KD' ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ಅಭಿಮಾನಿ ಶ್ರೀನಿವಾಸ್ ಹೊಸ ಹಾಡು ಮಾಡಿ ಮಾಧ್ಯಮಗಳ ಮುಂದೆ ಹಾಡಿ ಕೇಳಿಸಿದ್ದಾರೆ. ಇದೇ ಹಾಡನ್ನು ಧ್ರುವ ಎದುರು ಹಾಡಿದ್ದರು.
"ಕೆಡಿ ಅನ್ನೋ ಗೂಳಿ ಬರ್ತಿದೆ, ಅಡ್ಡ ಬಂದೋರ್ನ ಹೊತ್ಕೊಂಡ್ ಹೋಗ್ತದೆ. ಇದ ತಡೆಯೋರು ಇಲ್ಲ, ಹಿಡಿಯೋರು ಇಲ್ಲ ಕೆಣಕಿದ್ರೆ ಸುಮ್ನೆ ಬಿಡಲ್ಲ ನಮ್ಮ ಕೆಡಿ" ಎಂದು ಶ್ರೀನಿವಾಸ್ ಹಾಡಿರೋದು ವೈರಲ್ ಆಗುತ್ತಿದೆ. ಇದಕ್ಕೆ ನೆಟ್ಟಿಗರು ತರಹೇವಾರಿ ಕಾಮೆಂಟ್ಸ್ ಹಾಕುತ್ತಿದ್ದಾರೆ. ಇನ್ನು ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಕಳೆದ ವರ್ಷ ತೆರೆಕಂಡು ನಿರೀಕ್ಷೆ ಹುಸಿಗೊಳಿಸಿತ್ತು.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಂದಿದ್ದ 'ಮಾರ್ಟಿನ್' ಸಿನಿಮಾ ಸೋತಿತ್ತು. ಇದೀಗ 'ಕೆಡಿ' ಚಿತ್ರದ ಮೂಲಕ ಧ್ರುವ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಿರುವುದರಿಂದ ಸಹಜವಾಗಿಯೇ ಕುತೂಹಲ ಮೂಡಿದೆ. ಅರ್ಜುನ್ ಜನ್ಯಾ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ. ಕೆವಿಎನ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ.
ಸಂಜಯ್ ದತ್, ಶಿಲ್ಪಾ ಶೆಟ್ಟಿ, ಕ್ರೇಜಿ ಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಸೇರಿ ದೊಡ್ಡ ತಾರಾಗಣ 'ಕೆಡಿ' ಚಿತ್ರದಲ್ಲಿದೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಯುಗಾದಿ ವೇಳೆಗೆ 'ಕೆಡಿ' ಆರ್ಭಟ ಶುರುವಾಗುವ ಸಾಧ್ಯತೆಯಿದೆ.
ಧ್ರುವ ನಟಿಸಿದ 5 ಸಿನಿಮಾಗಳು ಈವರೆಗೆ ತೆರೆಗೆ ಬಂದಿದೆ. ಆದರೆ ಪ್ರತಿ ಚಿತ್ರಕ್ಕೆ ಮೂರ್ನಾಲ್ಕು ವರ್ಷ ಗ್ಯಾಪ್ ಆಗುತ್ತಿದೆ. 'ಕೆಡಿ' ಬಳಿಕ ಯಾವುದೇ ಹೊಸ ಚಿತ್ರವನ್ನು ಆಕ್ಷನ್ ಪ್ರಿನ್ಸ್ ಒಪ್ಪಿಕೊಂಡಿಲ್ಲ. ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಆದರೆ ಈ ಸಿನಿಮಾ ರಿಲೀಸ್ ಬಳಿಕ ಹೊಸ ಸಿನಿಮಾ ಆರಂಭಿಸುವ ಲೆಕ್ಕಾಚಾರದಲ್ಲಿದ್ದಾರೆ.
ಟೈಟಲ್‌ನಿಂದಲೇ 'ಕೆಡಿ' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಪ್ರೇಮ್ ಸಿನಿಮಾಗಳ ಸಾಂಗ್ಸ್ ಎಲ್ಲವೂ ಹಿಟ್ ಆಗಿದೆ. ಈ ಚಿತ್ರದ ಮೊದಲ ಸಾಂಗ್ ಗೆದ್ದಿದೆ. ಇನ್ನು ಯಾವೆಲ್ಲಾ ಸಾಂಗ್ಸ್ ಇದೆ ಕಾದು ನೋಡಬೇಕು. ಪ್ರಮೋಷನ್ ವಿಚಾರದಲ್ಲಿ ಕೂಡ ಪ್ರೇಮ್ ಟ್ರೆಂಡ್ ಸೆಟ್ ಮಾಡಿದವರು. ಈ ಬಾರಿ ಏನೆಲ್ಲಾ ಮಾಡ್ತಾರೆ ಅನ್ನೋದು ಮುಂದೆ ಗೊತ್ತಾಗಲಿದೆ.


Click it and Unblock the Notifications











