'ಜೆಂಟಲ್‌ಮ್ಯಾನ್ 2'ಗೆ ಕೀರವಾಣಿ ಮ್ಯೂಸಿಕ್: ಕೇರಳದ ಬೋಲ್ ಗಟ್ಟಿ ಪ್ಯಾಲೇಸ್ ಐಲೆಂಡ್‌ನಲ್ಲಿ ಕಂಪೋಸಿಂಗ್
ಮೂರು ವರ್ಷಗಳ ಹಿಂದೆ ತಮಿಳಿನ ಜನಪ್ರಿಯ ನಿರ್ಮಾಪಕ ಕೆ.ಟಿ. ಕುಂಜುಮೋನ್ ಮೆಗಾ ಹಿಟ್ ಸಿನಿಮಾ 'ಜಂಟಲ್‌ಮ್ಯಾನ್' ಸೀಕ್ವೆಲ್ ಮಾಡುವುದಾಗಿ ಘೋಷಿಸಿದ್ದರು. ಆದರೆ, ಅಂದಿನಿಂದ ಈ ಸಿನಿಮಾ ಬಗ್ಗೆ ಸುಳಿವೇ ಇರಲಿಲ್ಲ. ಈಗ ದಿಢೀರನೇ ಸಿನಿಪ್ರಿಯರಿಗೆ ಕಿಕ್ ಕೊಡುವ ಸುದ್ದಿಯೊಂದು ಹೊರಬಿದ್ದಿದೆ.
ಅರ್ಜುನ್ ಸರ್ಜಾ ಹಾಗೂ ಶಂಕರ್ ಕಾಂಬಿನೇಷನ್‌ನಲ್ಲಿ ಬಂದ 'ಜೆಂಟಲ್‌ಮ್ಯಾನ್' ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. 'ಜೆಂಟಲ್‌ಮ್ಯಾನ್ 2' ಅನೌನ್ಸ್ ಆದಾಗ, ಶಂಕರ್ ಹಾಗೂ ಅರ್ಜುನ್ ಸರ್ಜಾ ಕಾಂಬಿನೇಷನ್‌ನಲ್ಲಿಯೇ ಈ ಸಿನಿಮಾ ಬರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು.
ನಿರ್ಮಾಪಕ ಕೆ.ಟಿ. ಕುಂಜುಮೋನ್ ಈ ಎಲ್ಲಾ ನಿರೀಕ್ಷೆಗಳಿಗೆ ವಿರುದ್ಧವಾಗಿ ಬೇರೆ ತಂಡವನ್ನೇ ಅನೌನ್ಸ್ ಮಾಡಿದ್ದರು. ಆದರೆ, ಅನೌನ್ಸ್ ಮಾಡಿದ್ದಷ್ಟೇ ಬಂತು. ಮತ್ತೆ 'ಜೆಂಟಲ್‌ಮ್ಯಾನ್ 2' ಟೇಕ್ ಆಫ್ ಆಗಿರಲಿಲ್ಲ. ಕೊನೆಗೂ 'ಜೆಂಟಲ್‌ಮ್ಯಾನ್ 2' ಟೇಕ್ ಆಫ್ ಆಗುವ ಲಕ್ಷಣಗಳು ಕಾಣುತ್ತಿವೆ.

'ಜೆಂಟಲ್‌ಮ್ಯಾನ್ 2'ಗೆ ಕೀರವಾಣಿ ಮ್ಯೂಸಿಕ್
RRR ಸಿನಿಮಾದ ನಾಟು ನಾಟು ಹಾಡಿಗೆ ಟ್ಯೂನ್ ಹಾಕಿದ್ದ ಎಂ ಎಂ ಕೀರವಾಣಿ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆದರೆ, ಕೀರವಾಣಿ ಆಸ್ಕರ್ ಗೆಲ್ಲುವುದಕ್ಕೆ ಮೊದಲೇ ಈ ಸಿನಿಮಾವನ್ನು ಓಪ್ಪಿಕೊಂಡಿದ್ದರು. ಈ ಬೆನ್ನಲ್ಲೇ 'ಜೆಂಟಲ್‌ಮ್ಯಾನ್ 2'ಗೆ ಕೀರವಾಣಿ ಕೆಲಸ ಆರಂಭಿದ್ದಾರೆ.
ಕೀರವಾಣಿ ಟ್ಯೂನ್ ಹಾಕುತ್ತಿದ್ದರೆ, ವಿವಾದಾತ್ಮಕ ಸಾಹಿತಿ ವೈರಮುತ್ತು ಸಾಹಿತ್ಯ ರಚಿಸುತ್ತಿದ್ದಾರೆ. ಇಂದಿನಿಂದ (ಜುಲೈ 17) ಕೇರಳದ ಬೋಲ್ ಗಟ್ಟಿ ಪ್ಯಾಲೇಸ್ ಐಲೆಂಡ್‌ನಲ್ಲಿ ಟ್ಯೂನ್ ಹಾಕುವ ಕೆಲಸ ಆರಂಭ ಆಗಿದೆ. ಸಂಗೀತ ಕೀರವಾಣಿ, ಸಾಹಿತಿ ವೈರಮುತ್ತು ಹಾಗೂ ನಿರ್ಮಾಪಕ ಕೆ.ಟಿ. ಕುಂಜುಮೋನ್ ಸೇರಿಕೊಂಡಿದ್ದಾರೆ.
'ಜೆಂಟಲ್‌ಮ್ಯಾನ್ 2'ಗೆ ನಿರ್ದೇಶಕ ಯಾರು?
'ಜೆಂಟಲ್‌ಮ್ಯಾನ್'ಗೆ ಜನಪ್ರಿಯ ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳಿದ್ದರು. ಸೀಕ್ವೆಲ್‌ಗೆ ನಿರ್ದೇಶನ ಮಾಡುವುದು ಯಾರು? ಅನ್ನೋ ಪ್ರಶ್ನೆ ಎದ್ದಿತ್ತು. ಆದರೆ, ಮೂರು ವರ್ಷದ ಹಿಂದೆನೇ ಕೆ.ಟಿ. ಕುಂಜುಮೋನ್ ನಿರ್ದೇಶಕ ಎ. ಗೋಕುಲ್ ಕೃಷ್ಣ ಎಂದು ಪರಿಚಯ ಮಾಡಿದ್ದರು.
ಎ.ಗೋಕುಲ್ ಕೃಷ್ಣ ಈ ಸಿನಿಮಾಗೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಆರಂಭದಲ್ಲಿ ಚೇತನ್ ಹೀರೊ, ಮಲಯಾಳಂ ನಟಿ ನಯನತಾರಾ ಚಕ್ರವರ್ತಿ ಹಾಗೂ ಪ್ರಿಯಾ ಲಾಲ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಅನೌನ್ಸ್ ಮಾಡಲಾಗಿತ್ತು. ಈಗಲೂ ಅದೇ ತಂಡ ಮುಂದುವರೆಯುತ್ತಾ? ಅನ್ನೋ ಪ್ರಶ್ನೆ ಎದ್ದಿದೆ.

ಪ್ರಿ ಪ್ರೊಡಕ್ಷನ್‌ನಲ್ಲಿ 'ಜೆಂಟಲ್‌ಮ್ಯಾನ್ 2'
'ಜೆಂಟಲ್‌ಮ್ಯಾನ್ 2' ಸಿನಿಮಾ ಸದ್ಯ ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ. ಈ ಸಿನಿಮಾವನ್ನು ಕೆಲಸ ಮುಗಿಯುತ್ತಿದ್ದಂತೆ ಚಿತ್ರತಂಡ ಸ್ಟಾರ್ ಕಾಸ್ಟ್ ಅನ್ನು ಅನೌನ್ಸ್ ಮಾಡುವುದಾಗಿ ಹೇಳಿದೆ. ಹೀಗಾಗಿ ಪಾತ್ರ ವರ್ಗದಲ್ಲಿ ಗೊಂದಲವಿದ್ದಂತೆ ಕಾಣುತ್ತಿದೆ.
'ಜೆಂಟಲ್‌ಮ್ಯಾನ್ 2' ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿರುವ ಕೆ.ಟಿ. ಕುಂಜುಮೋನ್ ಈ ಹಿಂದೆ 'ಜಂಟಲ್ ಮ್ಯಾನ್', 'ಕಾದಲ್ ದೇಶಂ' ಅಂತಹ ಮೆಗಾ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











