ವಿದ್ಯಾರ್ಥಿಗೆ ಚಪ್ಪಲಿಯಿಂದ ಥಳಿಸಿದ ಖ್ಯಾತ ಪಾಕಿಸ್ತಾನಿ ಗಾಯಕ ರಾಹತ್ ಫತೇಹ್ ಅಲಿ ಖಾನ್; ವಿಡಿಯೋ
ಖ್ಯಾತ ಪಾಕಿಸ್ತಾನಿ ಗಾಯಕ ರಾಹತ್ ಫತೇ ಅಲಿ ಖಾನ್ ಅವರು ಒಬ್ಬ ವ್ಯಕ್ತಿಗೆ ಚಪ್ಪಲಿಯಿಂದ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಥಳಿತಕ್ಕೆ ಒಳಗಾಗುತ್ತಿರುವ ಯುವಕ ರಾಹತ್ ಫತೇ ಅಲಿ ಖಾನ್ ಅವರ ಶಿಷ್ಯ ಎನ್ನಲಾಗಿದೆ. ಟ್ವಿಟರ್‌ನಲ್ಲಿ ಈ ವಿಡಿಯೋ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ವೈರಲ್ ವಿಡಿಯೋಗಳಲ್ಲಿ ಜನಪ್ರಿಯ ಕವ್ವಾಲಿ ಗಾಯಕ ರಾಹತ್ ಫತೇ ಅಲಿ ಖಾನ್ ಯಾವುದೋ ಬಾಟಲಿಯ ಬಗ್ಗೆ ವಿಚಾರಿಸುತ್ತಿರುವುದು, ವ್ಯಕ್ತಿಗೆ ಕಪಾಳಮೋಕ್ಷ ಮಾಡುವುದು ಮತ್ತು ಚಪ್ಪಲಿಯಿಂದ ಹೊಡೆಯುವುದನ್ನು ಕಾಣಬಹುದು. ಆ ಯುವಕ "ನನಗೆ ಅದರ ಬಗ್ಗೆ ತಿಳಿದಿಲ್ಲ" ಎಂದು ಮನವಿ ಮಾಡುತ್ತಿರುವ ಧ್ವನಿ ಕೂಡ ಕೇಳಿಸುತ್ತಿದೆ. ಮತ್ತೊಂದು ದೃಶ್ಯದಲ್ಲಿ ಅಲ್ಲಿದ್ದ ಕೆಲವರು ಗಾಯಕನನ್ನು ವಿದ್ಯಾರ್ಥಿಗೆ ಹೊಡೆಯದಂತೆ ದೂರ ಎಳೆಯಲು ಪ್ರಯತ್ನಿಸುತ್ತಿರುವುದು ನೋಡಬಹುದು.

ಶಿಷ್ಯನನ್ನು ಹಿಗ್ಗಾಮುಗ್ಗ ಥಳಿಸಿದ ರಾಹತ್ ಫತೇ ಅಲಿ ಖಾನ್
"ಪಾಕಿಸ್ತಾನಿ ಗಾಯಕ ರಾಹತ್ ಫತೇಹ್ ಅಲಿ ಖಾನ್ ತನ್ನ ಸೇವಕನನ್ನು ನಿಂದಿಸುತ್ತಾ ಸಿಕ್ಕಿಬಿದ್ದಿದ್ದಾರೆ. ನಂತರ, ಘಟನೆ ಬಗ್ಗೆ ವಿವರಣೆಯನ್ನು ನೀಡಿದ್ದಾರೆ" ಎಂದು ಹಲವರು ಎರಡು ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು, ಇದು ಉಸ್ತಾದ್ (ಶಿಕ್ಷಕ) ಮತ್ತು ಅವರ ಶಾಗಿರ್ದ್ (ಶಿಷ್ಯ) ನಡುವಿನ ವೈಯಕ್ತಿಕ ವಿಷಯ ಎಂದು ರಾಹತ್ ಫತೇ ಅಲಿ ಖಾನ್ ನಂತರ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
"ಇದು ಶಾಗೀರ್ದ್ ಮತ್ತು ಉಸ್ತಾದ್ ನಡುವಿನ ಖಾಸಗಿ ವಿಷಯಕ್ಕೆ ಸಂಬಂಧಿಸಿದೆ. ಅವನು ನನ್ನ ಮಗುವಿನಂತೆ. ಇದು ಮಾರ್ಗದರ್ಶಕ ಮತ್ತು ಅವನ ಅನುಯಾಯಿಗಳ ನಡುವಿನ ಸಂಬಂಧದ ಸ್ವರೂಪ. ಶಿಷ್ಯನೊಬ್ಬ ಒಳ್ಳೆಯ ಕೆಲಸ ಮಾಡಿದಾಗಲೆಲ್ಲ ಆತನಿಗೆ ಪ್ರೀತಿ ತೋರಿಸುತ್ತೇನೆ. ಅವರು ಉಲ್ಲಂಘನೆ ಮಾಡಿದರೆ ಅವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ" ಎಂದು ಪಾಕಿಸ್ತಾನಿ ಗಾಯಕ ರಾಹತ್ ಫತೇ ಅಲಿ ಖಾನ್ ವೀಡಿಯೊದಲ್ಲಿ ಹೇಳಿದ್ದಾರೆ.
ಈ ಘಟನೆಯ ನಂತರ ಆ ವ್ಯಕ್ತಿಯ ಬಳಿ ಕ್ಷಮೆಯಾಚಿಸಿರುವುದಾಗಿ ರಾಹತ್ ಫತೇಹ್ ಅಲಿ ಖಾನ್ ಹೇಳಿದ್ದಾರೆ. ಇದರ ಜೊತೆಗೆ ಥಳಿತಕ್ಕೊಳಗಾದ ವ್ಯಕ್ತಿ ತಾನು ಪವಿತ್ರ ನೀರನ್ನು ಹೊಂದಿರುವ ಬಾಟಲಿಯನ್ನು ತಪ್ಪಾಗಿ ಇರಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
"ಅವರು ಹೀಗೆ ಮಾಡಿದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ. ಅವರು ನನ್ನ ತಂದೆಯಂತೆ. ಅವರು ನಮ್ಮನ್ನು ತುಂಬಾ ಪ್ರೀತಿಸುತ್ತಾರೆ. ಈ ವೀಡಿಯೋವನ್ನು ವೈರಲ್ ಮಾಡುತ್ತಿರುವ ವ್ಯಕ್ತಿ ನನ್ನ ಉಸ್ತಾದ್ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾನೆ"' ಎಂದು ವಿದ್ಯಾರ್ಥಿ ಸ್ಪಷ್ಟೀಕರಣದ ವಿಡಿಯೋದಲ್ಲಿ ಹೇಳಿದ್ದಾರೆ. ಥಳಿತಕ್ಕೆ ಒಳಗಾದ ವ್ಯಕ್ತಿಯ ತಂದೆ ಕವ್ವಾಲಿ ಕ್ಷೇತ್ರದಲ್ಲಿ ಉಸ್ತಾದ್ ಮತ್ತು ಶಾಗೀರ್ದ್ ನಡುವಿನ ಸಂಬಂಧವನ್ನು ಒತ್ತಿ ಹೇಳಿದ್ದಾರೆ.


Click it and Unblock the Notifications











