ಮೋಡಿ ಮಾಡಿದ ಅರಿಜೀತ್ ಧ್ವನಿ: 'ರಾಧೆ-ಶ್ಯಾಮ್' ಹಾಡು ಬಿಡುಗಡೆ
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ 'ರಾಧೆ-ಶ್ಯಾಮ್' ಸಿನಿಮಾದ ಮೊದಲ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ. ಪ್ರಸ್ತುತ ಹಿಂದಿ ಹಾಡಷ್ಟೆ ಬಿಡುಗಡೆ ಆಗಿದ್ದು, ಇತರೆ ಭಾಷೆಗಳಲ್ಲಿ ಹಾಡು ಬಿಡುಗಡೆ ಆಗಬೇಕಿದೆ.
ಗಾಯಕ ಅರಿಜೀತ್ ಸಿಂಗ್ ಭಾವಪೂರ್ಣ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ಕೇಳಲು ಬಹಳ ಇಂಪಾಗಿದೆ. ಹಿಂದಿಯಲ್ಲಿ 'ಆಶಿಖಿ ಹೋಗಯಿ' ಎಂದಿರುವ ಹಾಡು ತೆಲುಗಿನಲ್ಲಿ 'ನಗುಮೋಮು' ಎಂದಿದೆ. ಎರಡೂ ಹಾಡುಗಳು ಕೇಳಲು ಬಹಳ ಇಂಪಾಗಿವೆ.
ಹಾಡಿನ ವಿಡಿಯೋ ಸಹ ಬಹಳ ಸುಂದರವಾಗಿದ್ದು, ಯೂರೋಪಿನ ಅಂದನ ಕಣ್ಣಿಗೆ ಕಟ್ಟುವಂತೆ ಚಿತ್ರೀಕರಣ ಮಾಡಲಾಗಿದೆ. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಂತೂ ಬಹಳ ಸುಂದರವಾಗಿ ಕಾಣುತ್ತಿದ್ದಾರೆ.

'ಬಾಹುಬಲಿ', 'ಸಾಹೋ' ಹಾಗೂ ಅದಕ್ಕೆ ಮುಂಚಿನ ಕೆಲವು ಸಿನಿಮಾಗಳಲ್ಲಿಯೂ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದ ಪ್ರಭಾಸ್ 'ರಾಧೆ-ಶ್ಯಾಮ್' ಸಿನಿಮಾದಲ್ಲಿ ಅಪ್ಪಟ ಪ್ರೇಮಿಯಾಗಿದ್ದು, ಇಂದು ಬಿಡುಗಡೆ ಆಗಿರುವ ಹಾಡಿನಲ್ಲಿ ಪ್ರಭಾಸ್ ಪ್ರೇಮಿಯ ಅವತಾರದಲ್ಲಿ ಗಮನ ಸೆಳೆಯುತ್ತಿದ್ದಾರೆ.
ಆದರೆ ಹಾಡಿನ ಕೊನೆಯಲ್ಲಿ ತುರುಕಲಾಗಿರುವ ಕೆಲ ದೃಶ್ಯಗಳು 'ರಾಧೆ-ಶ್ಯಾಮ್' ಸಿನಿಮಾ ಕೇವಲ ಪ್ರೇಮಕತೆಯಲ್ಲ ಸಿನಿಮಾದಲ್ಲಿ ಹಠಾತ್ ತಿರುವು, ಆಕ್ಷನ್, ರಕ್ತಪಾತವೂ ಇರಲಿದೆ ಎಂಬುದನ್ನು ತೋರಿಸುತ್ತಿದೆ. ರಕ್ತದಲ್ಲಿ ತೊಯ್ದ ಪ್ರಭಾಸ್ ನಡೆದುಕೊಂಡು ಹೋಗುತ್ತಿರುವ ದೃಶ್ಯ ಹಾಡಿನ ಕೊನೆಯಲ್ಲಿದೆ.
'ರಾಧೆ-ಶ್ಯಾಮ್' ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಟೀಸರ್ ಸಹ ಸಾಕಷ್ಟು ಕುತೂಹಲ ಕೆರಳಿಸಿದೆ. ಟೀಸರ್ ಪ್ರಕಾರ ಸಿನಿಮಾವು ಅತಿಮಾನುಷ ಶಕ್ತಿಯ ಕತೆಯನ್ನು ಒಳಗೊಂಡಿದೆ. ಭವಿಷ್ಯ, ವರ್ತಮಾನ, ಭೂತಕಾಲದ ವಿಷಯಗಳನ್ನು ಒಳಗೊಂಡಿದೆ. ಸಿನಿಮಾದಲ್ಲಿ ಪ್ರಭಾಸ್ ಭವಿಷ್ಯ ತಿಳಿಯಬಲ್ಲ ವ್ಯಕ್ತಿಯಾಗಿ ನಟಿಸಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾವು ಬಹುತೇಕ ವಿದೇಶದಲ್ಲಿಯೇ ಚಿತ್ರೀಕರಣಗೊಂಡಿದ್ದು, ಕತೆ ಸಹ ಅಲ್ಲಿಯೇ ನಡೆಯಲಿದೆ. ಫ್ರಾನ್ಸ್, ಇಟಲಿ ಇನ್ನಿತರೆ ಪ್ರಮುಖ ನಗರಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. 70-80 ರ ದಶಕದಲ್ಲಿ ನಡೆವ ಕತೆಯನ್ನು ಸಿನಿಮಾ ಒಳಗೊಂಡಿದ್ದು, ಆಗಿನ ಕಾಲದ ಯೂರೋಪ್ ಅನ್ನು ಸೃಷ್ಟಿಸಲು ಸಾಕಷ್ಟು ವೆಚ್ಚವನ್ನು ನಿರ್ಮಾಪಕರು ಮಾಡಿದ್ದಾರೆ.
'ರಾಧೆ-ಶ್ಯಾಮ್' ಸಿನಿಮಾವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶನ ಮಾಡಿದ್ದು, ಬಂಡವಾಳವನ್ನು ಟಿ ಸೀರೀಸ್‌ನ ಭೂಷಣ್ ಕುಮಾರ್ ಹಾಗೂ ಇನ್ನಿತರರು ಸೇರಿ ಹೂಡಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಜೊತೆಗೆ ಕೃಷ್ಣಂ ರಾಜು, ಭಾಗ್ಯಶ್ರೀ, ಮರಾಠಿಯ ಸಚಿನ್ ಖೇಡ್ಕರ್, ಬಾಲಿವುಡ್‌ನ ಕುನಾಲ್ ರಾಯ್ ಕಪೂರ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಕೊರೊನಾ ಮಧ್ಯೆಯೆ ಬಹಳ ಶ್ರಮಪಟ್ಟು ವಿದೇಶದಲ್ಲಿ ಚಿತ್ರೀಕರಣ ಮಾಡಲಾಯ್ತು. ಸಿನಿಮಾದ ಕೆಲವು ದೃಶ್ಯಗಳ ಬಗ್ಗೆ ಪ್ರಭಾಸ್ ತೃಪ್ತಿಯಾಗಿರಲಿಲ್ಲವಾದ್ದರಿಂದ ಮತ್ತೆ ಹೈದರಾಬಾದ್‌ನಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಯ್ತು. ನಟಿ ಪೂಜಾ ಹೆಗ್ಡೆ ಸೇರಿದಂತೆ ಕೆಲವು ನಟರ ಡೇಟ್ಸ್ ಹೊಂದಾಣಿಕೆಯಾಗದೆ ಚಿತ್ರೀಕರಣ ಇನ್ನಷ್ಟು ತಡವಾಯ್ತು. ಇದೀಗ ಚಿತ್ರೀಕರಣ ಪೂರ್ಣಗೊಂಡಿದ್ದು ಸಿನಿಮಾವು ಜನವರಿ 14ರಂದು ಬಿಡುಗಡೆ ಆಗಲಿದೆ.


Click it and Unblock the Notifications











