ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾ ಹೊಸ ಹಾಡು ಬಿಡುಗಡೆ
ಪ್ರಭಾಸ್ ನಟನೆಯ ಹೊಸ ಸಿನಿಮಾ 'ರಾಧೆ-ಶ್ಯಾಮ್' ಸತತ ಸಂಕಷ್ಟಗಳಿಗೆ ಈಡಾಗುತ್ತಲೇ ಇದೆ. 2019ರಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದರೂ ಸಿನಿಮಾ ಈವರೆಗೆ ಬಿಡುಗಡೆ ಆಗಿಲ್ಲ.
ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿ, ಪ್ರಚಾರವೂ ನಡೆದು ಇನ್ನೇನು ಸಿನಿಮಾ ಬಿಡುಗಡೆ ಆಗಿಯೇ ಬಿಟ್ಟಿತು ಎಂದುಕೊಳ್ಳುತ್ತಿರುವಾಗಲೇ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿತು.
2019 ರ ಆಗಸ್ಟ್‌ನಲ್ಲಿ ಬಿಡುಗಡೆ ಆಗಿದ್ದ 'ಸಲಾರ್' ಸಿನಿಮಾದ ಬಳಿಕ ಈವರೆಗೆ ಪ್ರಭಾಸ್ ನಟನೆಯ ಇನ್ನೊಂದು ಸಿನಿಮಾ ಬಿಡುಗಡೆ ಆಗಿಲ್ಲ. ಇದೀಗ 'ರಾಧೆ-ಶ್ಯಾಮ್' ಸಿನಿಮಾದ ಬಿಡುಗಡೆ ಸಹ ಮುಂದಕ್ಕೆ ಹೋಗಿರುವುದು ಪ್ರಭಾಸ್ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟು ಮಾಡಿದೆ. ಆದರೆ ಪ್ರಭಾಸ್ ಅಭಿಮಾನಿಗಳನ್ನು ಸಮಾಧಾನಪಡಿಸಲೆಂದೇ ಇಂದು 'ರಾಧೆ-ಶ್ಯಾಮ್' ಸಿನಿಮಾದ ಹೊಸ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ.
ಈ ಹಿಂದೆ ಪ್ರೇಮಗೀತೆಯೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಆ ಮೆಲೋಡಿಯಸ್ ಆಗಿದ್ದ ಆ ಹಾಡು ಬಹಳ ಹಿಟ್ ಆಗಿತ್ತು. ಈಗ ಬಿಡುಗಡೆ ಮಾಡಿರುವುದು ಪ್ರಭಾಸ್ ಒಬ್ಬರನ್ನೇ ಅನ್ನು ಕೇಂದ್ರವಾಗಿರಿಸಿಕೊಂಡು ಚಿತ್ರೀಕರಿಸಲಾಗಿರುವ 'ಸಂಚಾರಿ' ಎಂಬ ಹಾಡು.
ಹಾಡಿನಲ್ಲಿ ನಟ ಪ್ರಭಾಸ್ ಒಬ್ಬರೇ ಯೂರೋಪ್ ದೇಶಗಳ ಸುಂದರ ಜಾಗಗಳಲ್ಲಿ ಸುತ್ತು ಹೊಡೆಯುತ್ತಿದ್ದಾರೆ. ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಹಲವು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಏನೇನೋ ನೋಟ್ಸ್‌ಗಳನ್ನು ಬರೆದುಕೊಳ್ಳುತ್ತಿದ್ದಾರೆ.

ಪ್ರೇಯಸಿಯ ಹುಡುಕಾಟದಲ್ಲಿ ಪ್ರಭಾಸ್
''ಹೊಸ ನೆಲದ ಮೇಲೆ ಖಾಲಿ ಸಹಿ' ಎಂದು ಪ್ರಾರಂಭವಾಗುವ ಈ ಹಾಡಿನಲ್ಲಿ ಪ್ರಭಾಸ್ ವಿವಿಧ ಸ್ಥಳಗಳಿಗೆ ತೆರಳುತ್ತಿರುವ ಜೊತೆಗೆ ಪ್ರೇಯಸಿಯ ಹುಡುಕಾಟದಲ್ಲಿ ಸಹ ಇದ್ದಾರೆ. ತಮ್ಮ ಈ ಪಯಣದಲ್ಲಿ ಹಲವು ಯುವತಿಯರಿಗೆ 'ಲೈನ್' ಹೊಡೆಯುತ್ತಾರೆ ಪ್ರಭಾಸ್! ಹಾಡನ್ನು ಅನಿರುದ್ ರವಿಚಂದ್ರನ್ ಹಾಡಿದ್ದಾರೆ. ಸಂಗೀತ ನೀಡಿರುವುದು ಜಸ್ಟಿನ್ ಪ್ರಭಾಕರನ್, ತೆಲುಗಿನಲ್ಲಿ ಸಾಹಿತ್ಯ ಬರೆದಿರುವುದು ಕೃಷ್ಣ ಕಾಂತ್. ಸಿನಿಮಾದ ಹಾಡನ್ನು ಟಿ-ಸೀರೀಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದೆ.

ಪೂಜಾ ಹೆಗ್ಡೆ ನಾಯಕಿ
'ರಾಧೆ-ಶ್ಯಾಮ್' ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಭಾಗ್ಯಶ್ರೀ, ಕೃಷ್ಣಂ ರಾಜು, ಕಟ್ಟಪ್ಪ ಖ್ಯಾತಿಯ ಸತ್ಯರಾಜು, ಜಗಪತಿ ಬಾಬು, ಮರಾಠಿ ನಟ ಸಚಿನ್ ಖೇಡ್ಕರ್, ಪ್ರಿಯದರ್ಶಿ, ಮುರಳಿ ಶರ್ಮಾ, ಕುನಾಲ್ ರಾಯ್ ಕಪೂರ್, ಜಯರಾಮ್ ಸುಬ್ರಹ್ಮಣಿಯನ್ ಇನ್ನೂ ಹಲವರಿದ್ದಾರೆ. ಸಿನಿಮಾವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶನ ಮಾಡಿದ್ದಾರೆ.

ಹಸ್ತಸಾಮುದ್ರಿಕಾ ಪ್ರವೀಣನ ಪಾತ್ರದಲ್ಲಿ ಪ್ರಭಾಸ್
ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಸಿನಿಮಾದಲ್ಲಿ ಪ್ರಭಾಸ್ ಹಸ್ತಸಾಮುದ್ರಿಕಾ ಶಾಸ್ತ್ರ ಪ್ರವೀಣ ಆಗಿದ್ದಾರೆ. ಹಸ್ತ ನೋಡಿ ಭವಿಷ್ಯ ಹೇಳಬಲ್ಲ ಚತುರನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ಸಿನಿಮಾ ಒಂದು ಸುಂದರ ಪ್ರೇಮ ಕತೆ ಆಗಿರುವ ಜೊತೆಗೆ ಸಾಕಷ್ಟು ಥ್ರಿಲ್ಲರ್ ಅಂಶಗಳನ್ನು ಸಹ ಒಳಗೊಂಡಿರಲಿದೆ. ಸಮುದ್ರದ ಆಳದಲ್ಲಿ ಪ್ರಭಾಸ್ ಕೆಲವು ಸಾಹಸ ದೃಶ್ಯಗಳನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ.

ಹೊಸ ಬಿಡುಗಡೆ ದಿನಾಂಕ ಘೋಷಣೆ ಆಗಿಲ್ಲ
'ರಾಧೆ-ಶ್ಯಾಮ್' ಸಿನಿಮಾವು 2021, ಜುಲೈ 21ಕ್ಕೆ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಬಳಿಕ ಕೋವಿಡ್ ಕಾರಣದಿಂದಾಗಿ ಸಿನಿಮಾದ ಬಿಡುಗಡೆಯನ್ನು ಜನವರಿ 14 ಕ್ಕೆ ಮುಂದೂಡಲಾಯ್ತು. ಈ ಬಾರಿಯಂತು ಇನ್ನೇನು ಸಿನಿಮಾ ಬಿಡುಗಡೆ ಆಗಿಯೇ ಬಿಟ್ಟಿತು ಎನ್ನಲಾಗಿತ್ತು. ಅದಕ್ಕೆ ತಕ್ಕಂತೆ ಬೃಹತ್ ಪ್ರೀ ರಿಲೀಸ್ ಕಾರ್ಯಕ್ರಮವನ್ನೆಲ್ಲ ಮಾಡಲಾಯ್ತು. ಆದರೆ ಅದೇ ವೇಳೆಗೆ ಮತ್ತೆ ಕೋವಿಡ್ ಪ್ರಕರಣಗಳು ಉಲ್ಪಣವಾದ ಕಾರಣ ಸಿನಿಮಾದ ಬಿಡುಗಡೆಯನ್ನು ಮತ್ತೆ ಮುಂದೂಡಲಾಯ್ತು. ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿಲ್ಲ.


Click it and Unblock the Notifications











