ಸೈನಿಕರಿಗೆ ಅಪ್ಪು ಸಲಾಂ: ಶುಭ ಹಾರೈಸಿದ ಸುದೀಪ್
ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯ ಈಗಾಗಲೇ ಭರದಿಂದ ಆರಂಭವಾಗಿದೆ.
ಸಿನಿಮಾದ ಎರಡನೇ ಹಾಡು ಇಂದು ಬಿಡುಗಡೆ ಆಗಿದ್ದು, ಹಾಡನ್ನು ನಟ ಸುದೀಪ್ ಬಿಡುಗಡೆ ಮಾಡಿದ್ದಾರೆ. 'ಸಲಾ ಸೋಲ್ಜರ್' ಹಾಡಿನ ಮೂಲಕ ಪುನೀತ್ ರಾಜ್‌ಕುಮಾರ್ ಸೈನಿಕರಿಗೆ ಸಲಾಂ ಹೊಡೆದಿದ್ದಾರೆ.
'ಸಲಾಂ ಸೋಲ್ಜರ್' ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗಿದ್ದು, ಹಾಡಿನಲ್ಲಿ ಪುನೀತ್ ರಾಜ್‌ಕುಮಾರ್ ಖಡಕ್ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ಭಾರತೀಯ ಸೈನಿಕರ ಕೆಲವು ವಿಡಿಯೋ ತುಣುಕುಗಳನ್ನು ಬಳಸಿಕೊಳ್ಳಲಾಗಿದ್ದು, ಭಾರತೀಯ ಸೈನ್ಯದ ಹಾಗೂ ಸೈನಿಕರ ಗುಣಗಾನ ಮಾಡಲಾಗಿದೆ.

'ಸಲಾಂ ಸೋಲ್ಜರ್' ಹಾಡನ್ನು ಕನ್ನಡ, ತೆಲುಗು, ಮಲಯಾಳಂ, ತಮಿಳು, ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ. ನಟ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಿಂದ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ''ನಮ್ಮ ಪ್ರೀತಿಯ ಅಪ್ಪು ನಟನೆಯ 'ಸಲಾಂ ಸೋಲ್ಜರ್' ಹಾಡು ಬಿಡುಗಡೆ ಮಾಡುತ್ತಿರುವುದು ಗೌರವದ ವಿಚಾರ. ಅಪ್ಪು ಅವರ ಕುಟುಂಬ ಹಾಗೂ 'ಜೇಮ್ಸ್' ತಂಡಕ್ಕೆ ನನ್ನ ಹೃದಯಪೂರ್ವಕ ಶುಭಾಶಯಗಳು'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
'ಜೇಮ್ಸ್' ಸಿನಿಮಾ ಇದೇ ಮಾರ್ಚ್ 17 ಕ್ಕೆ ಬಿಡುಗಡೆ ಆಗಲಿದೆ. ಅದೇ ದಿನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಸಹ ಇದ್ದು, 'ಜೇಮ್ಸ್' ಸಿನಿಮಾದ ಬಿಡುಗಡೆಯನ್ನು ಭಾರಿ ಅದ್ಧೂರಿಯಾಗಿ ಆಚರಿಸಲು ಅಪ್ಪು ಅಭಿಮಾನಿಗಳು ಸಜ್ಜಾಗಿದ್ದಾರೆ. ಈಗಾಗಲೇ ಸಕಲ ತಯಾರಿಗಳು ನಡೆಯುತ್ತಿವೆ. ಹೆಲಿಕಾಪ್ಟರ್ ಮೂಲಕ ಅಪ್ಪು ಕಟೌಟ್‌ಗೆ ಪುಷ್ಪಾರ್ಚನೆ, ಅನ್ನ ಸಂತರ್ಪಣೆ, ಮೆರವಣಿಗೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಅಭಿಮಾನಿಗಳು ಆಯೋಜಿಸಿದ್ದಾರೆ.
'ಜೇಮ್ಸ್' ಸಿನಿಮಾದಲ್ಲಿ ಪುನೀತ್ ಮಾಜಿ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸೆಕ್ಯೂರಿಟಿ ಏಜೆನ್ಸಿ ಒಂದರ ಪವರ್‌ಫುಲ್ ಬಾಡಿಗಾರ್ಡ್ ಪಾತ್ರ ಅವರದ್ದು. ಸಿನಿಮಾದಲ್ಲಿ ತೆಲುಗಿನ ನಟ ಶ್ರೀಕಾಂತ್, ಕನ್ನಡದ ಅವಿನಾಶ್, ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ, ಅನು ಪ್ರಭಾಕರ್, ಮುಖೇಶ್ ರಾಯ್, ಆದಿತ್ಯ ಇನ್ನೂ ಹಲವು ನಟರು ಸಿನಿಮಾದಲ್ಲಿದ್ದಾರೆ. ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ಕಿಶೋರ್ ಪಾತಿಕೊಂಡ.


Click it and Unblock the Notifications











