ಕನ್ನಡ-ತೆಲುಗಿನಲ್ಲಿ ಯುವರತ್ನ ಚಿತ್ರದ ಎರಡನೇ ಹಾಡು ಬಿಡುಗಡೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಹಾಡುಗಳ ಜಾತ್ರೆ ಆರಂಭವಾಗಿದೆ. ಈಗಾಗಲೇ 'ಪವರ್ ಆಫ್ ಯೂತ್' ಹಾಡು ರಿಲೀಸ್ ಆಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಹವಾ ಸೃಷ್ಟಿಸಿದೆ.
ಈಗ ಯುವರತ್ನ ಚಿತ್ರದ ಎರಡನೇ ಹಾಡು ರಿಲೀಸ್ ಆಗಿದೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ನೀನಾದೇ ನಾ ಎಂಬ ರೋಮ್ಯಾಂಟಿಕ್ ಹಾಡು ಬಿಡುಗಡೆಯಾಗಿದೆ. ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಈ ಸಾಂಗ್ ರಿಲೀಸ್ ಆಗಿದೆ.
ಎಸ್ ತಮನ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಘೋಷ್ ಪೀರ್ ಸಾಹಿತ್ಯ ರಚಿಸಿದ್ದು, ಶ್ರೇಯಾ ಘೋಷಲ್, ಅರ್ಮಾನ್ ಮಲ್ಲಿಕ್ ಹಾಗೂ ಎಸ್ ತಮನ್ ದನಿಗೂಡಿಸಿದ್ದಾರೆ.

ಹೊಂಬಾಳೆ ಫಿಲಂಸ್ ಯ್ಯೂಟ್ಯೂಬ್ ಚಾನಲ್‌ನಲ್ಲಿ ತೆರೆಕಂಡಿರುವ ಈ ಹಾಡು ಸಂಗೀತ ಪ್ರಿಯರ ಮನಸ್ಸು ಗೆದ್ದಿದ್ದು, ಅರ್ಧ ಗಂಟೆಯಲ್ಲಿ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.
ಇನ್ನುಳಿದಂತೆ ಪುನೀತ್ ರಾಜ್ ಕುಮಾರ್ ನಟಿಸಿರುವ ಈ ಚಿತ್ರದಲ್ಲಿ ಸಯೇಶಾ ಸೈಗಲ್ ನಾಯಕಿಯಾಗಿದ್ದಾರೆ. ಸೋನು ಗೌಡ, ಧನಂಜಯ್, ಪ್ರಕಾಶ್ ರಾಜ್, ದಿಗಂತ್, ವಸಿಷ್ಠ ಸಿಂಹ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಜನವರಿ ಮೂರನೇ ವಾರದಲ್ಲಿ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗಿದೆ.


Click it and Unblock the Notifications











