'ಪುಷ್ಪ' ಹಾಡು ಬಿಡುಗಡೆ ದಿನಾಂಕ ಘೋಷಣೆ: ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ
ಭಾರತದಾದ್ಯಂತ ಸಿನಿ ಪ್ರೇಮಿಗಳು ಎದುರು ನೋಡುತ್ತಿರುವ ಸಿನಿಮಾಗಳ ಪಟ್ಟಿಯಲ್ಲಿ 'ಕೆಜಿಎಫ್ 2', 'ಆರ್‌ಆರ್‌ಆರ್' ಬಳಿಕದ ಸ್ಥಾನ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾಕ್ಕೆ.
ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶಿಸಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಈ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇದೆ. ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗ, ಪ್ರತಿಭಾವಂತ ತಂತ್ರಜ್ಞರು ಇರುವ ಕಾರಣ ಸಿನಿಮಾದ ಬಗೆಗಿನ ನಿರೀಕ್ಷೆ ಇಮ್ಮಡಿಯಾಗಿದೆ.
'ಪುಷ್ಪ' ಸಿನಿಮಾದ ಒಂದು ಟೀಸರ್, ಮೂರು ಪೋಸ್ಟರ್‌ಗಳಷ್ಟೆ ಈವರೆಗೆ ಬಿಡುಗಡೆ ಆಗಿದ್ದು, ಸಿನಿಮಾದ ಬಗೆಗಿನ ಕುತೂಹಲವನ್ನು ಇವುಗಳು ಮತ್ತಷ್ಟು ಹೆಚ್ಚಿಸಿದೆ. ಇದೇ ಮೊದಲ ಬಾರಿಗೆ ಸಿನಿಮಾದ ಒಂದು ಹಾಡನ್ನು ಚಿತ್ರತಂಡವು ಬಿಡುಗಡೆ ಮಾಡಲು ರೆಡಿಯಾಗಿದ್ದು, ಹಾಡು ಬಿಡುಗಡೆ ದಿನಾಂಕವನ್ನು ಇಂದು ಘೋಷಿಸಲಾಗಿದೆ.
'ಪುಷ್ಪ' ಸಿನಿಮಾದ ಸಂಗೀತ ನಿರ್ದೇಶನವನ್ನು ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಮಾಡಿದ್ದು. ಇಂದು ದೇವಿಶ್ರೀ ಪ್ರಸಾದ್ ಹುಟ್ಟುಹಬ್ಬ. ಹಾಗಾಗಿ 'ಪುಷ್ಪ' ಸಿನಿಮಾದ ಹಾಡು ಬಿಡುಗಡೆ ದಿನಾಂಕವನ್ನು ಇಂದು ಘೋಷಿಸಲಾಗಿದೆ. ಈ ಬಗ್ಗೆ ಸಣ್ಣ ಪ್ರೊಮೊ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಪ್ರೊಮೊ ಈಗಾಗಲೇ ಸಖತ್ ವೈರಲ್ ಆಗಿದೆ.
'ಪುಷ್ಪ' ಸಿನಿಮಾವು ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಹಾಗಾಗಿ ಸಿನಿಮಾದ ಮೊದಲ ಹಾಡನ್ನು ಎಲ್ಲ ಭಾಷೆಗಳಲ್ಲೂ ಒಟ್ಟಿಗೆ ಬಿಡುಗಡೆ ಮಾಡಲಾಗುತ್ತಿದ್ದು, ಆಯಾ ಭಾಷೆಯಲ್ಲಿ ಸಿನಿಮಾದ ಹಾಡು ಹಾಡಿರುವ ಗಾಯಕರು ಪ್ರೊಮೊನಲ್ಲಿ ಕಾಣಿಸಿಕೊಂಡಿದ್ದಾರೆ.

ಮೇಕೆಗೆ ಎಚ್ಚರಿಕೆ ಹೇಳುತ್ತಿರುವ ಹಾಡು
'ದಾಕ್ಕೊ ದಾಕ್ಕೊ ಮೇಕ, ಪುಲೊಚ್ಚಿ ಕೊರುಕುದ್ದಿ ಪೀಕ' ಎಂಬ ತೆಲುಗು ಹಾಡು ಆಗಸ್ಟ್ 13ಕ್ಕೆ ಬಿಡುಗಡೆ ಆಗಲಿದೆ. ಈ ತೆಲುಗು ಹಾಡು ಕನ್ನಡದಲ್ಲಿ 'ಜೋಕೆ, ಜೋಕೆ ಮೇಕೆ' ಎಂದಿದ್ದು, ಕನ್ನಡದಲ್ಲಿ ಹಾಡನ್ನು ಖ್ಯಾತ ಗಾಯಕ ವಿಜಯಪ್ರಕಾಶ್ ಹಾಡಿದ್ದಾರೆ. ಇದೇ ಹಾಡನ್ನು ಹಿಂದಿಯಲ್ಲಿ ವಿಶಾಲ್ ದದ್ಲಾನಿ, ತೆಲುಗಿನಲ್ಲಿ ಶಿವಂ, ಮಲಯಾಳಂನಲ್ಲಿ ರಾಹುಲ್ ನಂಬಿಯಾರ್, ತಮಿಳಿನಲ್ಲಿ ಬಿನ್ನಿ ದಯಾಳ್ ಹಾಡಿದ್ದಾರೆ.

ಸೂಪರ್ ಹಿಟ್ ಆಗುವುದು ಪಕ್ಕಾ
ಬಿಡುಗಡೆ ಆಗಿರುವ ಪ್ರೋಮೊನಲ್ಲಿ ಹಾಡಿನ ಸಣ್ಣ ಝಲಕ್ ನೀಡಲಾಗಿದ್ದು, ಸಂಗೀತ, ಹಾಡಿನ ಧಾಟಿ ಸಖತ್ ಮಾಸ್ ಆಗಿದ್ದು, ಹಾಡು ಪಕ್ಕಾ ಸೂಪರ್ ಹಿಟ್ ಆಗಲಿರುವ ಸಕಲ ಲಕ್ಷಣಗಳನ್ನೂ ಸೂಸುತ್ತಿದೆ. ಪ್ರೋಮೋನಲ್ಲಿ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಹ ಇದ್ದಾರೆ. 'ಪುಷ್ಪ' ಮೂಲಕ ಮತ್ತೊಂದು ಹಿಟ್ ಹಾಡುಗಳ ಗುಚ್ಛ ನೀಡುವ ಸೂಚನೆಯನ್ನು ಪ್ರೋಮೊ ಮೂಲಕವೇ ನೀಡಿದ್ದಾರೆ ದೇವಿಶ್ರೀ ಪ್ರಸಾದ್.

ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ
'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳ ಸಾಗಣೆ ಮಾಡುವ ಕಳ್ಳನೊಬ್ಬನ ಕತೆಯಾಗಿದ್ದು, ರಕ್ತ ಚಂದನ ಕಳ್ಳ ಸಾಗಣೆ ಮಾಡುವ ವ್ಯಕ್ತಿಯ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, 'ಆರ್ಯ', 'ಆರ್ಯ 2' ಬಳಿಕ ಸುಕುಮಾರ್‌ಗೆ ಅಲ್ಲು ಅರ್ಜುನ್ ಜೊತೆಗೆ ಮೂರನೇ ಸಿನಿಮಾ ಇದು. ತೆಲುಗಿನ ಬಹು ಹಿಟ್ ನಿರ್ದೇಶಕ-ನಟ ಜೋಡಿ ಇದಾಗಿತ್ತು. 'ಪುಷ್ಪ' ಸಿನಿಮಾ ಮೂಲಕ ಮತ್ತೊಂದು ಇಂಡಸ್ಟ್ರಿ ಹಿಟ್ ನೀಡುವ ಉಮೇದಿನಲ್ಲಿದೆ ಈ ಜೋಡಿ.

ಹಲವು ಪ್ರತಿಭಾವಂತ ನಟರಿದ್ದಾರೆ
'ಪುಷ್ಪ' ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದಲ್ಲಿ ಬಹುದೊಡ್ಡ ತಾರಾಗಣ ಸಹ ಇದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೊತೆಗೆ ಮುಖ್ಯ ವಿಲನ್ ಆಗಿ ಮಲಯಾಳಂನ ಫಹಾದ್ ಫಾಸಿಲ್, ಕನ್ನಡದ ಡಾಲಿ ಧನಂಜಯ್, ಕಿಶೋರ್, ತೆಲುಗಿನ ಹಾಸ್ಯನಟ ಸುನಿಲ್, ತಮಿಳಿನ ಚಿಯಾನ್ ವಿಕ್ರಮ್, ತೆಲುಗಿನ ಜಗಪತಿ ಬಾಬು, ಪ್ರಶಾಕ್ ರೈ ಇನ್ನೂ ಹಲವು ಪ್ರತಿಭಾವಂತ ನಟರಿದ್ದಾರೆ. ಸಿನಿಮಾವು ಇದೇ ಆಗಸ್ಟ್ 13ರಂದು ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಬಿಡುಗಡೆ ಮುಂದೂಡಲಾಗಿದೆ. ಸಿನಿಮಾವು ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ದಟ್ಟವಾಗಿದೆ.


Click it and Unblock the Notifications











