ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿದ ಕೊನೆಯ ಹಾಡು ಬಿಡುಗಡೆ: ಭಾವುಕರಾದ ರಜನಿ
ನಟ ರಜನಿಕಾಂತ್‌ರ 45 ವರ್ಷದ ಸಿನಿ ಬದುಕಿನಲ್ಲಿ ಬಹುತೇಕ ಪ್ರತಿ ಸಿನಿಮಾಕ್ಕೂ ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡು ಹಾಡಿದ್ದಾರೆ. ರಜನಿಕಾಂತ್ ಸಿನಿಮಾದ ಇಂಟ್ರೊಡಕ್ಷನ್ ಹಾಡು ಎಸ್‌ಪಿಬಿ ಅವರೇ ಹಾಡಬೇಕು ಎಂಬುದು ಅಲಿಖಿತ ನಿಯಮ. ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ.
ರಜನಿಕಾಂತ್‌ಗಾಗಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಕೊನೆಯ ಹಾಡು ಇಂದು ಬಿಡುಗಡೆ ಆಗಿದೆ. ರಜನಿಕಾಂತ್ ನಟಿಸಿರುವ 'ಅಣ್ಣಾತೆ' ಸಿನಿಮಾದ ಹಾಡು ಇಂದು ಬಿಡುಗಡೆ ಆಗಿದ್ದು, ಇದು ಎಸ್‌ಪಿಬಿ ರಜನಿಕಾಂತ್‌ಗೆ ಹಾಡಿರುವ ಕೊನೆಯ ಹಾಡಾಗಿದೆ.
ಹಾಡು ಬಿಡುಗಡೆ ಆದ ಬಗ್ಗೆ ಭಾವುಕವಾಗಿ ಟ್ವೀಟ್ ಮಾಡಿರುವ ರಜನಿಕಾಂತ್, ''ಕಳೆದ 45 ವರ್ಷಗಳಿಂದ ಎಸ್‌ಪಿ ಬಾಲಸುಬ್ರಹ್ಮಣ್ಯಂ ಧ್ವನಿ ನನ್ನ ಪಾತ್ರಗಳಿಗೆ ಜೀವ ತುಂಬಿದೆ. ನನ್ನ 'ಅಣ್ಣಾತೆ' ಸಿನಿಮಾಕ್ಕಾಗಿ ಎಸ್‌ಪಿಬಿ ಹಾಡುವ ಹಾಡು ಅವರ ಜೀವನದ ಕೊನೆಯ ಹಾಡಾಗುತ್ತದೆ ಎಂದು ನಾನು ಕನಸು-ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ನನ್ನ ಪ್ರೀತಿಯ ಎಸ್‌ಪಿಬಿ ಅವರ ಧ್ವನಿಯ ಮೂಲಕ ಜೀವಂತ ಇರಲಿದ್ದಾರೆ'' ಎಂದಿದ್ದಾರೆ ರಜನಿಕಾಂತ್.

ಇದೀಗ ಬಿಡುಗಡೆ ಆಗಿರುವ 'ಅಣ್ಣಾತೆ' ಸಿನಿಮಾದ ಟೈಟಲ್ ಹಾಡು ಬಹಳ ಜೋಶ್ ಭರಿತವಾಗಿದೆ. ಹಾಡಿಗೆ ಸಂಗೀತ ನಿರ್ದೇಶನದವನ್ನು ಇಮಾನ್ ಮಾಡಿದ್ದು, ವಿವೇಕ್ ಸಾಹಿತ್ಯ ಬರೆದಿದ್ದಾರೆ. ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿ ಈಗಾಗಲೇ ವೈರಲ್ ಆಗಿದೆ. ಹಾಡು ಬಿಡುಗಡೆ ಆದ ನಾಲ್ಕು ಗಂಟೆಗಳಲ್ಲಿ 14 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
'ಅಣ್ಣಾತೆ' ಸಿನಿಮಾವನ್ನು ಶಿವ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಖುಷ್ಬು, ನಯನತಾರಾ, ಕೀರ್ತಿ ಸುರೇಶ್, ಮೀನಾ, ಪ್ರಕಾಶ್ ರೈ, ಸೂರಿ, ಜಗಪತಿ ಬಾಬು ಇನ್ನೂ ಹಲವು ಪ್ರಮುಖ ನಟರು ನಟಿಸಿದ್ದಾರೆ. ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ.
'ಅಣ್ಣಾತೆ' ಸಿನಿಮಾದ ಚಿತ್ರೀಕರಣವನ್ನು ಹಲವು ಅಡೆ-ತಡೆಗಳ ನಡುವೆ ಮಾಡಲಾಯಿತು. ಈ ಸಿನಿಮಾದ ಚಿತ್ರೀಕರಣದ ವೇಳೆ ಚಿತ್ರತಂಡಕ್ಕೆ ಕೋವಿಡ್ ಆಗಿ ಚಿತ್ರೀಕರಣ ಬಂದ್ ಮಾಡಲಾಗಿತ್ತು. ನಂತರ ಸ್ವತಃ ರಜನಿಕಾಂತ್‌ಗೆ ತೀವ್ರ ಆರೋಗ್ಯ ಸಮಸ್ಯೆ ಎದುರಾಯಿತು. ಹಾಗಾಗಿ ಹಲವು ದಿನಗಳ ಕಾಲ ಚಿತ್ರೀಕರಣವನ್ನು ಬಂದ್ ಮಾಡಲಾಯ್ತು. ಅದೇ ಸಮಯದಲ್ಲಿ ರಜನಿಕಾಂತ್, ರಾಜಕೀಯದಿಂದ ಹಿಂದೆ ಸರಿಯುವುದಾಗಿ ಘೋಷಣೆ ಸಹ ಮಾಡಿದರು. ಎಲ್ಲಕ್ಕಿಂತಲೂ ದೊಡ್ಡ ನಷ್ಟವೆಂದರೆ ಸಿನಿಮಾಕ್ಕಾಗಿ ಹಾಡು ರೆಕಾರ್ಡ್ ಮಾಡಿದ ಕೆಲವು ದಿನಗಳ ನಂತರ ಎಸ್‌ಪಿಬಿಗೆ ಕೊರೊನಾ ಪಾಸಿಟಿವ್ ಆಯ್ತು, ಕೆಲವು ದಿನಗಳಲ್ಲಿ ಆಸ್ಪತ್ರೆ ಸೇರಿದ ಎಸ್‌ಪಿಬಿ ಶಾಶ್ವತವಾಗಿ ನಿರ್ಗಮಿಸಿದರು.


Click it and Unblock the Notifications











